Home ನಮ್ಮ ಜಿಲ್ಲೆ ಬೆಂಗಳೂರು Namma Metro: ಹಳದಿ ಮಾರ್ಗಕ್ಕೆ 4ನೇ ರೈಲು, ವೇಳಾಪಟ್ಟಿ ಪರಿಷ್ಕರಣೆ

Namma Metro: ಹಳದಿ ಮಾರ್ಗಕ್ಕೆ 4ನೇ ರೈಲು, ವೇಳಾಪಟ್ಟಿ ಪರಿಷ್ಕರಣೆ

0

Namma Metro. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಹಳದಿ ಮಾರ್ಗದ ಪ್ರಯಾಣಿಕರಿಗೆ ಶುಭ ಸುದ್ದಿ ನೀಡಿದೆ. ಸೆಪ್ಟೆಂಬರ್ 10ರಿಂದ ಜಾರಿಗೆ ಬರುವಂತೆ, ಹಳದಿ ಮಾರ್ಗದಲ್ಲಿ 4ನೇ ರೈಲು ಸಂಚಾರ ಆರಂಭಿಸಲಿದೆ.

ಸದ್ಯ ಮೂರು ರೈಲು ಓಡುತ್ತಿದ್ದು, 4ನೇ ರೈಲು ಸಂಚಾರದ ಹಿನ್ನಲೆಯಲ್ಲಿ ಹಳದಿ ಮಾರ್ಗದ ಮೆಟ್ರೋ ರೈಲುಗಳ ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಈ ಬದಲಾವಣೆ ಕುರಿತು ಬಿಎಂಆರ್‌ಸಿಎಲ್ ಪ್ರಯಾಣಿಕರಿಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ಪರಿಷ್ಕೃತ ವೇಳಾಪಟ್ಟಿ

* ರೈಲು ಆವರ್ತನ ಸುಧಾರಣೆ: ಎಲ್ಲಾ ದಿನಗಳಲ್ಲಿ ರೈಲುಗಳು ಈಗ 19 ನಿಮಿಷಗಳ ಮಧ್ಯಂತರದಲ್ಲಿ (ಈಗಿನ 25 ನಿಮಿಷಗಳ ಬದಲಿಗೆ) ಚಲಿಸಲಿವೆ. ಇದು ಪ್ರಯಾಣಿಕರ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ.

* ಮೊದಲ ರೈಲು ಸಮಯ ಬದಲಾವಣೆ: ಸೋಮವಾರದಿಂದ ಶನಿವಾರದವರೆಗೆ ಈಗಿನ ಬೆಳಗ್ಗೆ 6:30 ಗಂಟೆಯ ಬದಲಿಗೆ, ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗುತ್ತದೆ. ಭಾನುವಾರದಂದು ಮೊದಲ ರೈಲು ಬೆಳಗ್ಗೆ 7:00 ಗಂಟೆಗೆ ಪ್ರಾರಂಭವಾಗಲಿದೆ.

* ಕೊನೆಯ ರೈಲು ಸಮಯ: ಆರ್.ವಿ. ರಸ್ತೆಯಿಂದ ರಾತ್ರಿ 11:55 (ಬದಲಾವಣೆ ಇಲ್ಲ) ಬೊಮ್ಮಸಂದ್ರದಿಂದ ರಾತ್ರಿ 10:42 (ಬದಲಾವಣೆ ಇಲ್ಲ)

* ಬಿ.ಎಂ.ಆರ್.ಸಿ.ಎಲ್ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಈ ಬದಲಾವಣೆಗಳನ್ನು ಗಮನಿಸಿ, ಸುಧಾರಿತ ಸೌಲಭ್ಯವನ್ನು ಪಡೆದುಕೊಳ್ಳಲು ಪ್ರಯಾಣಿಕರನ್ನು ವಿನಂತಿಸಿದ್ದಾರೆ. ಈ ಸೇವಾ ವಿಸ್ತರಣೆಯು ಹಳದಿ ಮಾರ್ಗದ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲಕರ ವ್ಯವಸ್ಥೆಯನ್ನು ಒದಗಿಸಲಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗ ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10ರಂದು ಈ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. ಆಗಸ್ಟ್ 11ರಿಂದ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಿದೆ. ಸದ್ಯ 3 ರೈಲು ಸಂಚಾರ ನಡೆಸುತ್ತಿದ್ದು 50 ಸಾವಿರಕ್ಕೂ ಅಧಿಕ ಪ್ರಯಾಣಿಕರ ಸಂಚಾರ ನಡೆಸುತ್ತಿದ್ದಾರೆ.

ಈ ಮಾರ್ಗ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಕಾರಣ ಬಹಳ ಬೇಡಿಕೆ ಇದೆ. ಈಗ 4ನೇ ರೈಲು ಸಂಚಾರ ಪ್ರಾರಂಭವಾಗುವುದರಿಂದ ಇನ್ನಷ್ಟು ಪ್ರಯಾಣಿಕರು ಆಗಮಿಸುವ ನಿರೀಕ್ಷೆ ಇದ್ದು, ಪ್ರತಿದಿನ 1 ಲಕ್ಷ ಜನರು ಸಂಚರಿಸಬಹುದು ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗ 19 ಕಿ.ಮೀ. ಇದ್ದು 16 ನಿಲ್ದಾಣಗಳನ್ನು ಒಳಗೊಂಡಿದೆ. ಈಗಾಗಲೇ ಈ ಮಾರ್ಗದ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇದರಿಂದಾಗಿ ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಶೇ 10ರಷ್ಟು ಕಡಿಮೆಯಾಗಿದೆ.

ಬಿಎಂಆರ್‌ಸಿಎಲ್ ಪ್ರತಿದಿನ 25 ಸಾವಿರ ಜನರು ಸಂಚಾರ ನಡೆಸಬಹುದು ಎಂದು ಅಂದಾಜಿಸಿತ್ತು. ಆದರೆ ಆಗಸ್ಟ್ 11ರ ಮೊದಲ ದಿನವೇ 80,000 ಪ್ರಯಾಣಿಕರು ಸಂಚಾರ ನಡೆಸುವ ಮೂಲಕ ದಾಖಲೆ ಬರೆದಿದ್ದರು. ಈಗ ಹೊಸ ರೈಲು ಸೇರ್ಪಡೆ ಟೆಕ್ಕಿಗಳಿಗೆ ಮತ್ತಷ್ಟು ಸಂತಸ ತಂದಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version