ಒಂದು ಕಾಲದಲ್ಲಿ ‘ಸಿಲಿಕಾನ್ ಸಿಟಿ’ ಎಂದು ವಿಶ್ವದ ಗಮನ ಸೆಳೆದಿದ್ದ ಬೆಂಗಳೂರು, ಈಗ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಜಯೇಂದ್ರ, ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಯ ಅವಕಾಶಗಳು ಕೈತಪ್ಪಿ ಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಆತಂಕಕ್ಕೆ ಕಾರಣವಾಗಿರುವುದು ಅದಾನಿ ಗ್ರೂಪ್ ಸಹಯೋಗದಲ್ಲಿ ಗೂಗಲ್ ಕಂಪನಿಯು ಆಂಧ್ರಪ್ರದೇಶದಲ್ಲಿ ಸ್ಥಾಪಿಸಲು ಹೊರಟಿರುವ ಬರೋಬ್ಬರಿ 1.3 ಲಕ್ಷ ಕೋಟಿ ರೂಪಾಯಿ ಹೂಡಿಕೆಯ AI ಟೆಕ್ ಹಬ್ ಕ್ಯಾಂಪಸ್.
ಈ ಯೋಜನೆ ಕರ್ನಾಟಕಕ್ಕೆ ಬರಬೇಕಿತ್ತು, ಆದರೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನೆರೆಯ ಆಂಧ್ರಕ್ಕೆ ಹೋಗಿದೆ ಎಂಬ ಆರೋಪ ಕೇಳಿಬಂದಿದೆ. “ಬೆಂಗಳೂರು ತನ್ನ ಆಕರ್ಷಣೆಯನ್ನು ಕಳೆದುಕೊಂಡಿದೆ” ಎಂದು ವಿಜಯೇಂದ್ರ X ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಈ ಕ್ಯಾಂಪಸ್ ಸುಮಾರು 30,ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದು, ಇದು ರಾಜ್ಯಕ್ಕೆ ಬರಬೇಕಿತ್ತು. ಆದರೆ, ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳು, ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಚ್ಚಾಶಕ್ತಿ ಮತ್ತು ವೈಫಲ್ಯವೇ ಈ ಪರಿಸ್ಥಿತಿಗೆ ಕಾರಣ ಎಂದು ವಿಜಯೇಂದ್ರ ದೂಷಿಸಿದ್ದಾರೆ.
“ಗುಂಡಿಗಳ ಬೆಂಗಳೂರು” ಎಂಬ ಅಪಖ್ಯಾತಿ ಅಂಟಿಕೊಂಡಿರುವುದು ಅಂತಾರಾಷ್ಟ್ರೀಯ ಉದ್ಯಮಗಳನ್ನು ದೂರ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತ ಕಾಂಗ್ರೆಸ್ ಸರ್ಕಾರ, ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ವಿಜಯೇಂದ್ರ ತೀವ್ರವಾಗಿ ಟೀಕಿಸಿದ್ದಾರೆ.
ಕನ್ನಡಿಗರಿಗೆ ಸಿಗಬೇಕಿದ್ದ ಸಾವಿರಾರು ಉದ್ಯೋಗಗಳು ನೆರೆಯ ರಾಜ್ಯದ ಪಾಲಾಗಿರುವುದು ಕರ್ನಾಟಕದ ದುರಂತ ಎಂದು ಹೇಳಿದ್ದಾರೆ. ಬೆಂಗಳೂರಿನ ಈ ಹಿನ್ನಡೆ ರಾಜ್ಯದ ಆರ್ಥಿಕತೆಗೆ ಮತ್ತು ಯುವಕರ ಭವಿಷ್ಯಕ್ಕೆ ದೊಡ್ಡ ಆತಂಕವನ್ನು ಸೃಷ್ಟಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯು ಕರ್ನಾಟಕಕ್ಕೆ ಕೈತಪ್ಪಿ ಹೋಗಿರುವುದು ರಾಜ್ಯದ ಘನತೆಗೆ ದೊಡ್ಡ ಧಕ್ಕೆ ಎಂದು ಹೇಳಿದ್ದಾರೆ.