Home ನಮ್ಮ ಜಿಲ್ಲೆ ಬೆಂಗಳೂರು ATM ವ್ಯಾನ್ ದರೋಡೆ ಪ್ರಕರಣ ಬೇಧಿಸಿದ ಅಧಿಕಾರಿಗಳಿಗೆ 5 ಲಕ್ಷ ರೂ ಬಹುಮಾನ

ATM ವ್ಯಾನ್ ದರೋಡೆ ಪ್ರಕರಣ ಬೇಧಿಸಿದ ಅಧಿಕಾರಿಗಳಿಗೆ 5 ಲಕ್ಷ ರೂ ಬಹುಮಾನ

0

ಬೆಂಗಳೂರು: ರಾಜ್ಯವನ್ನೆ ಬೆಚ್ಚಿ ಬೀಳಿಸಿದ್ದ 7.11 ಕೋಟಿ ರೂಪಾಯಿ ಎಟಿಎಂ ವ್ಯಾನ್ ದರೋಡೆ ಪ್ರಕರಣಕ್ಕೆ ತಿರುವು ದೊರೆತಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿ 5 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಶನಿವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಘಟನೆಯ ನಂತರ ವಿಚಾರಣಾ ತಂಡಗಳು ತಕ್ಷಣವೇ ಕ್ರಮ ಕೈಗೊಂಡು ರಾಜ್ಯದ ವಿವಿಧ ಭಾಗಗಳಲ್ಲಿ ನಾಕಾಬಂದಿ ಜಾರಿಗೊಳಿಸಿದ್ದವು. ಆರೋಪಿಗಳು ಮೊಬೈಲ್ ಬಳಸದೇ, ಸಿಸಿಟಿವಿ ಇಲ್ಲದ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡು ಆಗಾಗ ವಾಹನಗಳ ನಂಬರ್ ಪ್ಲೇಟ್ ಬದಲಾಯಿಸುತ್ತಾ ದಾರಿತಪ್ಪಿಸುವ ಪ್ರಯತ್ನ ಮಾಡಿದ್ದರು ಎಂದು ಆಯುಕ್ತರು ವಿವರಿಸಿದರು.

ಒಟ್ಟು ಎಂಟು ಮಂದಿಯ ಗುಂಪು ಕೃತ್ಯ ನಡೆಸಿರುವುದು ತನಿಖೆಯಿಂದ ಸ್ಪಷ್ಟವಾಗಿದೆ. ಬಂಧಿತರಲ್ಲಿ ಗೋವಿಂದಪುರ ಪೊಲೀಸ್ ಪೇದೆ, ಕಂಪನಿಯ ಮಾಜಿ ನೌಕರ, ಹಾಗೂ ಕೇರಳದ ಗೋಪಿ, ಕ್ಸೇವಿಯರ್ ಹಾಗೂ ಅಣ್ಣಪ್ಪ ನಾಯ್ಕರು ಸೇರಿದ್ದಾರೆ. ದಕ್ಷಿಣ ಭಾರತದ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತು ಗೋವಾ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆದಿದ್ದು, 11 ತಂಡಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.

ಆಯುಕ್ತರ ಪ್ರಕಾರ, ಆರೋಪಿಗಳು ಈ ದರೋಡೆಗೆ ಕನಿಷ್ಠ 3 ತಿಂಗಳ ಕಾಲ ಯೋಜನೆ ರೂಪಿಸಿದ್ದು, ಘಟನೆಯ ದಿನದ ಮೊದಲು 15 ದಿನಗಳ ಕಾಲ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಇಲ್ಲದ ಸ್ಥಳವನ್ನು ಗುರುತಿಸಿ, ಆ ಸಮಯದಲ್ಲಿ ಹಣ ಸಾಗಣೆಗೆ ಬಳಸಲಾಗಿದ್ದ ಇನ್ನೋವಾ ಕಾರನ್ನು ಚಿತ್ತೂರಿನಲ್ಲಿ ಪತ್ತೆ ಹಚ್ಚಲಾಗಿದೆ.

ತನಿಖಾ ತಂಡಕ್ಕೆ ₹5 ಲಕ್ಷ ಬಹುಮಾನ: ಘಟನೆಯ 24 ಗಂಟೆಗಳೊಳಗೆ ಸುಧಾರಿತ ತಂತ್ರಜ್ಞಾನ, ಸ್ಥಳೀಯ ಮಾಹಿತಿ ಮತ್ತು ಸಂಯೋಜಿತ ಗುಪ್ತಚರ ಕಾರ್ಯಾಚರಣೆಯ ಮೂಲಕ ಆರೋಪಿಗಳ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ತನಿಖಾ ತಂಡಕ್ಕೆ ₹5 ಲಕ್ಷ ಬಹುಮಾನ ಘೋಷಿಸಲಾಗಿದೆ.

“ಘಟನೆಗೆ ಸಂಬಂಧಿಸಿದ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ,” ಎಂದು ಆಯುಕ್ತರು ಸ್ಪಷ್ಟಪಡಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version