ಕುಳಗೇರಿ ಕ್ರಾಸ್: ಯಾರಿಗೇನಾದ್ರು ನಮಗೇನು ನಮಗೆ ಆದಾಯ(ದುಡ್ಡು) ಬಂದ್ರೆ ಸಾಕು… ಸಾರಿಗೆ ಅಧಿಕಾರಿಗಳು ಆದಾಯ ಹೆಚ್ಚಿಸಿಕೊಳ್ಳಲು ಏನೆಲ್ಲಾ ಮಾಡುತ್ತಾರೆ ನೋಡಿ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ನಾಮಫಲಕ ಮತ್ತು ವಾಹನ ಸಂಖ್ಯೆ ಕಾಣದಂತೆ ಸಾರಿಗೆ ಬಸ್ ಮೇಲೆ ಜಾಹೀರಾತು ಅಂಟಿಸಿದ್ದು ಓದುಬಲ್ಲ ಪ್ರಯಾಣ ಕರು ಸಹ ಈ ಬಸ್ ಯಾವ ಕಡೆ ಹೋಗುತ್ತೆ ಎಂದು ಕೇಳುವ ಪರಿಸ್ಥಿತಿ ಎದುರಾಗಿದೆ. ಇನ್ನು ಓದೋಕೆ ಬರದವರ ಸ್ಥಿತಿ ಹೇಳತೀರದು.
ಈ ಹಿಂದೆ ಬಸ್ ನಿಲ್ದಾಣದ ಒಳಗೆ ಬರುತ್ತಿದ್ದಂತೆ ಹೇಳದೆ ಕೇಳದೆ ಬಸ್ ಏರುತ್ತಿದ್ದೆವು. ಆದರೆ ಈಗ ಬಸ್ ನಾಮಫಲಕವನ್ನು ಮುಚ್ಚಿ ಜಾಹಿರಾತು ಅಂಟಿಸುತ್ತಿರುವುದರಿಂದ ಬಸ್ ಚಾಲಕ ಅಥವಾ ನಿರ್ವಾಹಕರನ್ನೇ ಕೇಳುವ ಪರಿಸ್ಥಿತಿ ಬಂದೊದಗಿದೆ ಎನ್ನುತ್ತಾರೆ ಪ್ರಯಾಣ ಕರು.
ಸಾರ್ವಜನಿಕರು ತಮ್ಮ ಸ್ವಂತ ವಾಹನಗಳ ನಂಬರ್ ಪ್ಲೇಟ್ ಮೇಲೆ ಏನಾದರೂ ಅಂಟಿಸಿದರೆ, ಬರೆದುಕೊಂಡರೆ ಕೇಸ್ ಧಾಖಲಿಸುತ್ತಾರೆ. ಆದರೆ ಸಾರಿಗೆ ಬಸ್ ನಾಮಫಲಕ ಅಷ್ಟೇ ಏಕೆ ನಂಬರ್ ಪ್ಲೇಟ್ ಮುಚ್ಚಿ ಜಾಹಿರಾತು ಅಂಟಿಸಿರುವುದು ಕಾಣುತ್ತಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನೀಸುತ್ತಿದ್ದಾರೆ.
ಈ ಹಿಂದೆ ಬಸ್‌ಗಳ ಎಡಕ್ಕೆ ಮತ್ತು ಬಲಕ್ಕೆ ಜಾಹೀರಾತು ಅಂಟಿಸಲಾಗುತ್ತಿತ್ತು. ಆದರೆ ಹೆಚ್ಚಿಗೆ ಆದಾಯಕ್ಕಾಗಿ ಬಸ್ ನಾಮಫಲಕವನ್ನೇ ಮುಚ್ಚುತ್ತಿದ್ದಾರೆ. ಸುಂದರವಾಗಿ ಕಾಣುವ ಸಾರಿಗೆ ಬಸ್‌ಗಳ ಸೌಂದರ್ಯವನ್ನೇ ಹಾಳು ಮಾಡಲಾಗುತ್ತಿದೆ ಎಂದು ಪ್ರಯಾಣ ಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
