ಚಳ್ಳಕೆರೆ: ಸೀರೆ ಖರೀದಿಸಿ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರ ಕೊರಳಲ್ಲಿದ್ದ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಬೈಕ್‌ನಲ್ಲಿ ಬಂದ ದರೋಡೆಕೋರರು ಹಾಡುಹಗಲೇ ಕಸಿದು ಪರಾರಿಯಾದ ಘಟನೆ ನಗರದ ಸೈನಿಕ್ ಆಸ್ಪತ್ರೆ ರಸ್ತೆಯಲ್ಲಿ ಭಾನುವಾರ ಸಂಜೆ ನಡೆದಿದೆ.
ನವೆಂಬರ್ 30ರಂದು ಸಂಜೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಮಹಿಳೆ ಸಂಜೆ 6:30ರ ಸುಮಾರಿಗೆ ತಮ್ಮ ಪಕ್ಕದ ಮನೆಯವರಾದ ರೇಣುಕಾ ಕೆ.ಹೆಚ್. ಅವರೊಂದಿಗೆ ಸೀರೆ ಖರೀದಿಸಲು ಸೈನಿಕ್ ಆಸ್ಪತ್ರೆ ರಸ್ತೆಯಲ್ಲಿರುವ ಎಸ್.ಎಲ್.ವಿ ಬಟ್ಟೆ ಅಂಗಡಿಗೆ ತೆರಳಿದ್ದರು. ಖರೀದಿ ಮುಗಿಸಿ ಸಂಜೆ 6:50ಕ್ಕೆ ಅಂಗಡಿಯಿಂದ ಹೊರಟು ಮನೆಗೆ ನಡೆದುಕೊಂಡು ಹೋಗುತ್ತಿದ್ದರು.
ಸಂಜೆ 7 ಗಂಟೆಯ ಸಮಯದಲ್ಲಿ ಚಿರು ಮೆಡಿಕಲ್ ಎದುರಿನ ಹನುಮಾನ್ ಪ್ರಾವಿಜನ್ ಸ್ಟೋರ್ ಬಳಿಯ ತಿರುವಿನಲ್ಲಿ ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಮಹಿಳೆಯ ಸಮೀಪ ಬಂದಿದ್ದಾರೆ.
ಬೈಕ್ ಚಾಲನೆಯಲ್ಲಿರುವಾಗಲೇ ಹಿಂಬದಿ ಕುಳಿತಿದ್ದ ವ್ಯಕ್ತಿ ಮಹಿಳೆಯ ಕೊರಳಿಗೆ ಕೈಹಾಕಿ, ಬಲವಂತವಾಗಿ 60 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾನೆ. ಮಹಿಳೆ ಪ್ರತಿರೋಧ ಒಡ್ಡುವ ಮುನ್ನವೇ ಆರೋಪಿಗಳು ಬೈಕ್‌ನಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ.
ಕಳುವಾದ ಸರವು ಎರಡು ಎಳೆಯ ಮಾಂಗಲ್ಯ ಸರವಾಗಿದ್ದು, ಇದರಲ್ಲಿ ಎರಡು ಬಂಗಾರದ ಗುಂಡು, ಎರಡು ಕರಿಮಣಿ, ಎರಡು ಹವಳ, ಒಂದು ತಾಳಿ ಹಾಗೂ ಒಂದು ಲಕ್ಷ್ಮಿತಾಳಿ ಇದ್ದು, ಇದರ ಒಟ್ಟು ಮೌಲ್ಯ ಸುಮಾರು 6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ರಾತ್ರಿ 9:30ಕ್ಕೆ ಸಂತ್ರಸ್ತೆ ನೀಡಿದ ದೂರಿನನ್ವಯ ಚಳ್ಳಕೆರೆ ಠಾಣೆಯ ಪಿಎಸ್‌ಐ ಶಿವರಾಜ್ ಜೆ. ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
