Home ನಮ್ಮ ಜಿಲ್ಲೆ ವಿಯೆಟ್ನಾಮ್‍ಗೆ ಹೋಗ್ತೀರಾ?, ಬೆಂಗಳೂರಿಂದ ಅಗ್ಗದ ದರಕ್ಕೆ ವಿಮಾನವಿದೆ!

ವಿಯೆಟ್ನಾಮ್‍ಗೆ ಹೋಗ್ತೀರಾ?, ಬೆಂಗಳೂರಿಂದ ಅಗ್ಗದ ದರಕ್ಕೆ ವಿಮಾನವಿದೆ!

0

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಿಂದ ಪ್ರವಾಸ ಕೈಗೊಳ್ಳುವ ಜನರಿಗೆ ಜನರಿಗೆ ಸಿಹಿಸುದ್ದಿ ಇದೆ. ಅದರಲ್ಲೂ ಕೊರೋನಾ ನಂತರ ವಿದೇಶಗಳಿಗೆ ದಂಡಿಯಾಗಿ ಪ್ರವಾಸಕ್ಕೆ ಹೋಗುತ್ತಿರುವ ಕನ್ನಡಿಗರಿಗೆ ಇನ್ನೊಂದು ವಿಮಾನ ಸಂಚಾರದ ಸುದ್ದಿ.

ಏಷ್ಯಾದ ವಿವಿಧ ದೇಶಗಳಿಗೆ ಕೈಗೆಟಕುವ ದರದಲ್ಲಿ ವಿಮಾನಯಾನ ಸೇವೆ ಒದಗಿಸುತ್ತಿರುವ ವಿಯೆಟ್‌ಜೆಟ್ ಏರ್‌ಲೈನ್ಸ್‌ ಇತ್ತೀಚೆಗೆ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ವಿಯೆಟ್ನಾಮ್‌ಗೆ ನೇರ ವಿಮಾನ ಸೇವೆ ಆರಂಭಿಸಿದೆ.

ವಿಯೆಟ್ನಾಮ್‌ನ ರಾಜಧಾನಿ ಹನೋಯ್ ಮತ್ತು ಇನ್ನೊಂದು ಪ್ರಮುಖ ನಗರವಾದ ಡಾನಾಂಗ್‌ಗೆ ಭಾರತದ ವಿವಿಧ ನಗರಗಳಿಂದ ವಿಯೆಟ್ ಜೆಟ್ ವಿಮಾನದ ಸೇವೆ ಈಗಾಗಲೇ ಇತ್ತು. ಆ ಪಟ್ಟಿಗೆ ಇನ್ನೊಂದು ಪ್ರಮುಖ ನಗರವಾದ ಹೊಚಿಮಿನ್ ಸಿಟಿ ಕೂಡ ಸೇರ್ಪಡೆಯಾಗಿದೆ.

ಬೆಂಗಳೂರಿನಿಂದ ದರ ಎಷ್ಟು?; ಬೆಂಗಳೂರಿನಿಂದ ಹೊಚಿಮಿನ್ ಸಿಟಿಗೆ ಹೆಚ್ಚುಕಮ್ಮಿ 20,000 ರೂ.ಗಿಂತ ಕಡಿಮೆ ವೆಚ್ಚದಲ್ಲಿ ವಿಮಾನದಲ್ಲಿ ಹೋಗಿ ಬರಬಹುದಾಗಿದೆ. ದಕ್ಷಿಣ ವಿಯೆಟ್ನಾಮ್‌ನಲ್ಲಿರುವ ಹೊಚಿಮಿನ್‌ ಸಿಟಿಗೆ ಬೆಂಗಳೂರಿನಿಂದ ವಾರಕ್ಕೆ 4 ವಿಯೆಟ್‌ ಜೆಟ್ ವಿಮಾನಗಳು ಹಾರಾಟ ನಡೆಸಲಿವೆ. ಅಲ್ಲಿ 3-4 ದಿನಗಳ ವಾಸ್ತವ್ಯ ಹೂಡಿದರೆ ಅರ್ಧ ವಿಯೆಟ್ನಾಮ್‌ನ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡಬಹುದು.

ಅಲ್ಲಿಂದ ರಾಜಧಾನಿ ಹನೋಯ್‌ಗೆ ತೆರಳಿದರೆ ಉತ್ತರ ವಿಯೆಟ್ನಾಮ್‌ನ ಸೌಂದರ್ಯವನ್ನೂ ಕಣ್ತುಂಬಿಕೊಳ್ಳಬಹುದು. ಚೀನಾ ಮತ್ತು ಭಾರತದ ಸಂಸ್ಕೃತಿಯ ಮಿಶ್ರಣದಂತೆ ವಿಯೆಟ್ನಾಮ್ ಇದೆ. 1975ರವರೆಗೆ ನಾನಾ ಯುದ್ಧಗಳಿಂದ ಘಾಸಿಗೊಂಡಿದ್ದ ಈ ಕಮ್ಯುನಿಸ್ಟ್ ದೇಶ, ಕಳೆದ 50 ವರ್ಷಗಳಲ್ಲಿ ತನ್ನನ್ನು ತಾನು ಅದ್ಭುತ ರೀತಿಯಲ್ಲಿ ಮರುನಿರ್ಮಾಣ ಮಾಡಿಕೊಂಡಿದೆ.

ಹಿಂದೊಮ್ಮೆ ಫ್ರೆಂಚರ ವಸಾಹತುವಾಗಿದ್ದ ಕಾರಣ ವಿಯೆಟ್ನಾಮ್‌ನ ಪ್ರಮುಖ ನಗರಗಳಲ್ಲಿ ಯುರೋಪಿನ ವಾಸ್ತುಶಿಲ್ಪದ ವೈಭವವನ್ನು ಕಾಣಬಹುದು. ಆದರೆ ಜನಜೀವನ ಭಾರತೀಯರ ಬದುಕಿಗೆ ಹತ್ತಿರದಲ್ಲಿದೆ. ಅಷ್ಟೇನೂ ದುಬಾರಿಯಲ್ಲದ, ಆದರೆ ಆಧುನಿಕತೆ ಮತ್ತು ಪ್ರಕೃತಿ ಸೌಂದರ್ಯದಿಂದ ತುಂಬಿರುವ ವಿಯೆಟ್ನಾಮ್‌ನಲ್ಲಿ ನೋಡಲು ಸಾಕಷ್ಟು ಪ್ರವಾಸಿ ತಾಣಗಳಿವೆ.

ಮೆಕಾಂಗ್ ನದಿ ದಡದ ಅಕ್ಕಿಯ ಕಣಜ, ಅಮೆರಿಕನ್ ಸೈನಿಕರಿಂದ ಪಾರಾಗಲು ವಿಯೆಟ್ನಾಮಿಗಳು ನಿರ್ಮಿಸಿಕೊಂಡಿದ್ದ 200 ಕಿ.ಮೀ. ಉದ್ದದ ಕಿರಿದಾದ ವಿಶಿಷ್ಟ ಸುರಂಗ ಜಾಲ ಕುಚಿ ಟನಲ್‌, ಸೈಗಾನ್ ಒಪೆರಾ, ವಾರ್ ಮ್ಯೂಸಿಯಂ, ವುಂಗ್ ತಾವ್ ಮುಂತಾದ ಬೀಚ್‌ಗಳು, ವೈವಿಧ್ಯಮಯ ಸಮುದ್ರ ಖಾದ್ಯಗಳು, ವಿಶಿಷ್ಟ ನೈಟ್‌ ಲೈಫ್ ಮುಂತಾದ ಆಕರ್ಷಣೆಗಳು ಹೊಚಿಮಿನ್ ಸಿಟಿಯ ಪ್ರವಾಸವೊಂದರಲ್ಲೇ ಲಭ್ಯವಾಗುತ್ತವೆ.

ಕಳೆದ ವರ್ಷ 5 ಲಕ್ಷಕ್ಕೂ ಹೆಚ್ಚು ಭಾರತೀಯರು ವಿಯೆಟ್ನಾಮ್‌ಗೆ ಪ್ರವಾಸ ಕೈಗೊಂಡಿದ್ದಾರೆ. ಈ ಅವಕಾಶವನ್ನು ವಾಣಿಜ್ಯಕವಾಗಿ ಸದುಪಯೋಗ ಮಾಡಿಕೊಳ್ಳಲು ವಿಯೆಟ್‌ ಜೆಟ್‌ ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಿಗೆ ಸೋವಿ ದರದಲ್ಲಿ ವಿಮಾನ ಸೇವೆಯನ್ನು ವಿಸ್ತರಿಸುತ್ತಿದೆ.

ವಿಯೆಟ್ನಾಮ್‌ಗೆ ವೀಸಾ ಸುಲಭವಗಿ ಆನ್‌ಲೈನ್‌ನಲ್ಲೇ ಸಿಗುತ್ತದೆ. ಅಲ್ಲಿಗೆ ಹೋದಮೇಲೆ ಹೋಟೆಲ್ ವಾಸ, ಊಟ, ಸಂಚಾರಗಳ ವೆಚ್ಚವೂ ದುಬಾರಿಯಿಲ್ಲ. ಶಾಪಿಂಗ್‌ಗೆ ಒಳ್ಳೆಯ ಜಾಗಗಳಿವೆ. ರಿಲ್ಯಾಕ್ಸ್ ಮಾಡಲು ಇಡೀ ದೇಶದುದ್ದಕ್ಕೂ ಬೀಚ್‌ಗಳಿವೆ. ಓಡಾಡಲು ಸುಂದರ ರಸ್ತೆಗಳಿವೆ. ವಿಮಾನಯಾನದ ಅವಧಿ ನಾಲ್ಕೂವರೆ ಗಂಟೆ. ಹೀಗಾಗಿ ನಾಲೈದು ದಿನಗಳ ಪ್ರವಾಸಕ್ಕೆ ಪ್ಲಾನ್ ಮಾಡಲು ಅಡ್ಡಿಯಿಲ್ಲ.

NO COMMENTS

LEAVE A REPLY

Please enter your comment!
Please enter your name here

Exit mobile version