Home ನಮ್ಮ ಜಿಲ್ಲೆ ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್‌ ಕ್ಯಾತೆ: ಕನ್ನಡಿಗರ ವಿರೋಧ, ಕೋಲಾಹಲ

ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್‌ ಕ್ಯಾತೆ: ಕನ್ನಡಿಗರ ವಿರೋಧ, ಕೋಲಾಹಲ

0

ಬೆಳಗಾವಿ: ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕನ್ನಡ , ಮರಾಠಿ ಭಾಷಾ ವಿವಾದ ಉಂಟಾಗಿದೆ. ಸಭೆಯ ಆರಂಭದಲ್ಲಿಯೇ ಅಜೆಂಡಾದಲ್ಲಿನ‌ ವಿಷಯ ಬದಿಗೊತ್ತಿದ ಎಂಇಎಸ್ ಸದಸ್ಯ ರವಿ ಸಾಳುಂಕೆ ಮರಾಠಿಯಲ್ಲಿ ದಾಖಲೆ ಕೊಡಿ ಎಂದು ವಾದ ಮಾಡತೊಡಗಿದರು.

ಗುರುವಾರ ಕರೆದಿದ್ದ ಸಭೆ ಈ ವಿಚಾರಕ್ಕೆ ಕೋಲಾಹಲಕ್ಕೆ ಕಾರಣವಾಯಿತು. ಎಂಇಎಸ್ ಸದಸ್ಯರ ಬೇಡಿಕೆಗೆ ಕೆರಳಿದ ಸರ್ಕಾರಿ‌ ನಾಮ ನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಸೇರಿದಂತೆ ಬಿಜೆಪಿಯ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಮರಾಠಿ ದಾಖಲೆ ಕೇಳಿದ ರವಿ ಸಾಳುಂಕೆಯನ್ನು ಮಹಾರಾಷ್ಟ್ರಕ್ಕೆ ಕಳುಹಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಾದ-ವಿವಾದ ಜೋರಾಗಿ ಸಭೆಯಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಯಿತು.

ಪರಿಸ್ಥಿತಿಯನ್ನು ಹತೋಟಿಗೆ ತರಲು ಮೇಯರ್ ಶ್ರಮಪಟ್ಟರು. ಆದರೆ ಆಕ್ರೋಶ ಹೆಚ್ಚಾದ ಕಾರಣ ಸಭೆಯನ್ನು ಕೆಲ ಹೊತ್ತು ಮುಂದೂಡಿದರು. ನಂತರ ಶಾಸಕ ಅಭಯ ಪಾಟೀಲ ಮತ್ತು ಶಾಸಕ ಶೇಠ ನಡುವೆ ಇದೇ ವಿಷಯದ ಬಗ್ಗೆ ಮಾತುಕತೆ ನಡೆಯಿತು.

ಮಹಾನಗರ ಪಾಲಿಕೆ ಸಭೆಯಲ್ಲಿ ಅಜೆಂಡಾ ಪ್ರಕಾರ ಮಾತನಾಡಬೇಕು. ಅದನ್ನು ಬಿಟ್ಟು ಈ ರೀತಿ ಉದ್ದೇಶಪೂರ್ವಕವಾಗಿ ಮಾತನಾಡುವುದು ಸರಿಯಲ್ಲ ಎಂದರು. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಳಗಾವಿಯಲ್ಲಿ ಪದೇ ಪದೇ ಭಾಷಾ ವಿಚಾರ ಮುಂದಿಟ್ಟುಕೊಂಡು ಕ್ಯಾತೆ ತೆಗೆಯುತ್ತದೆ. ಗುರುವಾರವೂ ಸಹ ಸಭೆಯಲ್ಲಿ ಇದೇ ನಡೆಯಿತು.

ಪಾಲಿಕೆಗೆ ನುಗ್ಗಿದ ಕರವೇ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ‌ ಭಾಷಾ ವಿವಾದ ಸೃಷ್ಡಿಯಾದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಪಾಲಿಕೆಗೆ ನುಗ್ಗಿದರು. ಧಿಕ್ಕಾರವನ್ನು ಕೂಗಿ ಪ್ರತಿಭಟನೆ ನಡೆಸಿದರು. ಮರಾಠಿಯಲ್ಲಿ ದಾಖಲೆ ಕೊಡಿ ಎಂದು ವಾದ ಮಾಡಿದ ಎಂಇಎಸ್ ಸದಸ್ಯ ರವಿ ಸಾಳುಂಕೆಯ ಸದಸ್ಯತ್ವ ರದ್ದು ಮಾಡಬೇಕು ಎಂದು ಪಟ್ಟುಹಿಡಿದರು.

ಕರವೇ ಮುಖಂಡ ದೀಪಕ ಗುಡಗನಟ್ಟೆ ನೇತೃತ್ವದಲ್ಲಿ ಕಾರ್ಯಕರ್ತರು ಪಾಲಿಕೆ ಆವರಣದಲ್ಲಿ ಪ್ರತಿಭಟನೆ ಮಾಡಿದರು. ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್‌ ಆಯುಕ್ತ ನಾರಾಯಣ ಬರಮನಿ ಹಾಗೂ ಎಸಿಪಿ ಕಟ್ಟಿಮನಿ ಮುಂತಾದವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version