ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಈ ಬಾರಿ 88 ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಆಯ್ಕೆ ಮಾಡಲು ಸ್ಥಳಗಳ ಪರಿಶೀಲನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ನಡೆಸಿದರು.
ಈಗಾಗಲೇ ಡಿಸೆಂಬರ್‌ನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಘೋಷಣೆಯಾದಂತೆ ಪೂರ್ವ ತಯಾರಿ ನಡೆಯುತ್ತಿದೆ. ಈ ಹಿನ್ನಲೆ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮ್ಮದ್ ಖಾನ್ ಅವರು ಬಳ್ಳಾರಿ ವಿ ಎಸ್ ಕೆ ವಿವಿಯ ದಾರದ ಮಿಲ್ ಸ್ಥಳ, ಸಂಗನಕಲ್ಲು ಬಳಿಯ ಬಯಲು ಪ್ರದೇಶ ಸೇರಿ ಮೂರು ಕಡೆ ಭೇಟಿ ನೀಡಿ ನಿಯೋಜಿಸಿರುವ ಸ್ಥಳದ ಪರಿಶೀಲನೆ ನಡೆಸಿದರು.
ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಬೇಕಾದ ಎಲ್ಲ ಸಹಕಾರ ನೀಡಲಾಗುವುದು. ಸಮ್ಮೇಳವನ್ನು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಿ ಎಂದು ಇದೆ ವೇಳೆ ಹೇಳಿದರು.
ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್: ಇನ್ನು ಡಿಸೆಂಬರ್‌ನಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಹಾಗೂ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 5 ಸಾಹಿತ್ಯ ಸಮ್ಮೇಳನಗಳು ನಡೆದಿವೆ.
67 ವರ್ಷಗಳ ಬಳಿಕ ಬಳ್ಳಾರಿಯಲ್ಲಿ: ಈ ಹಿಂದೆ 1920 ರಲ್ಲಿ ಮೊದಲ ಬಾರಿಗೆ ಹೊಸಪೇಟೆಯಲ್ಲಿ 6ನೇ ಸಮ್ಮೇಳನ. ಎರಡನೇ ಬಾರಿಗೆ ಬಾರಿಗೆ 1926ರಲ್ಲಿ 12 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿ ನಗರದಲ್ಲಿ ನಡೆದಿತ್ತು. 12 ವರ್ಷಗಳ ನಂತರ ಮೂರನೇ ಬಾರಿಗೆ 1938ರಲ್ಲಿ 23 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ನಾಲ್ಕನೇ ಬಾರಿಗೆ ಹರಪನಹಳ್ಳಿಯಲ್ಲಿ 1947ರಲ್ಲಿ ನಡೆಯಿತು. 11 ವರ್ಷಗಳ ಬಳಿಕ 1958 ರಲ್ಲಿ ಬಳ್ಳಾರಿಯಲ್ಲಿ 5 ನೇ ಬಾರಿಗೆ ಸಮ್ಮೇಳನ ನಡೆಯಿತು. ಈಗ 67 ವರ್ಷದ ಬಳಿಕ ಮರಳಿ ಸಾಹಿತ್ಯ ಸಮ್ಮೇಳನದ ಆತಿಥ್ಯ ದೊರೆತಿದ್ದು. 2025 ರ ಡಿಸೆಂಬರ್‌ನಲ್ಲಿ ಆಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.