Home ನಮ್ಮ ಜಿಲ್ಲೆ ಆಯಸ್ಸು ಫಿಕ್ಸ್ ಮಾಡಿರುವುದು ಬಿಜೆಪಿಯ ಡೋಂಗಿತನ

ಆಯಸ್ಸು ಫಿಕ್ಸ್ ಮಾಡಿರುವುದು ಬಿಜೆಪಿಯ ಡೋಂಗಿತನ

0

ಬೆಂಗಳೂರು: ಮಹಿಳಾ ಮೀಸಲಾತಿಗೆ ಡೀಲಿಮಿಟೇಷನ್, ಜನ ಗಣತಿಯ ಕೊಕ್ಕೆ ಹಾಕಿ ಆಯಸ್ಸು ಫಿಕ್ಸ್ ಮಾಡಿರುವುದು ಬಿಜೆಪಿಯ ಡೋಂಗಿತನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ “ಮಹಿಳಾ ಮೀಸಲಾತಿ” ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ, ಮಹಿಳಾ ಮೀಸಲಾತಿಗೆ ಡೀಲಿಮಿಟೇಷನ್, ಜನ ಗಣತಿಯ ಕೊಕ್ಕೆ ಹಾಕಿ ಆಯಸ್ಸು ಫಿಕ್ಸ್ ಮಾಡಿರುವುದು ಬಿಜೆಪಿಯ ಡೋಂಗಿತನ. ಆದ್ದರಿಂದ ಮಹಿಳಾ ಮೀಸಲಾತಿ ಜಾರಿ ಆಗುವುದೇ ಅನುಮಾನ.
ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎನ್ನುವ ಪ್ರಾಮಾಣಿಕ ಕಾಳಜಿ ಬಿಜೆಪಿಗೆ ಇದ್ದಿದ್ದರೆ ಇಷ್ಟೊಂದು ಅಡೆತಡೆಗಳನ್ನು ಹಾಕುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಜಾರಿ ಮಾಡಿರುವ ಮಹಿಳಾ ಮೀಸಲಾತಿಗೆ ಕೇಂದ್ರ ಸರ್ಕಾರ 15 ವರ್ಷ ಆಯಸ್ಸು ಫಿಕ್ಸ್ ಮಾಡಿದೆ. ಕಾಯ್ದೆ ಜಾರಿಯಾದ ದಿನದಿಂದ 15 ವರ್ಷ ಆಯಸ್ಸು ಇದೆ. ಅಂದರೆ ಈಗ ಕಾಯ್ದೆ ಜಾರಿ ಆಗಿದೆ. ಇದಕ್ಕೆ ಇನ್ನು 15 ವರ್ಷ ಮಾತ್ರ ಆಯಸ್ಸು. ಆದರೆ, ಜಾತಿ ಜನಗಣತಿ ಮತ್ತು ಡೀಲಿಮಿಟೇಷನ್ ಎನ್ನುವ ಎರಡು ಕೊಕ್ಕೆ ಹಾಕಿಟ್ಟಿದ್ದಾರೆ. ಇವರೆಡೂ ಮುಗಿಯುವ ವೇಳೆಗೆ 15 ವರ್ಷ ಆಗಿರತ್ತೆ. ಹೀಗಾಗಿ ಮಹಿಳಾ ಕಾಯ್ದೆಗೆ ಜಾರಿ ಆಗುವ ಮೊದಲೇ ಅದರ ಆಯಸ್ಸೇ ಮುಗಿದು ಹೋಗಿರುತ್ತದೆ. ಇದು ಮಹಿಳೆಯರಿಗೆ ಮಾಡಿರುವ ಪರಮ ವಂಚನೆ.
ಮಹಿಳಾ ಮೀಸಲಾತಿ ಜಾರಿ ಮಾಡುವುದಕ್ಕೆ ದೇವರೇ ನನ್ನನ್ನು ಕಳುಹಿಸಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಮೊನ್ನೆ ಹೇಳಿದರು. ಈಗ ನೋಡಿದ್ರೆ ಈ ರೀತಿ ಮಹಿಳೆಯರಿಗೆ ವಂಚನೆ ಆಗಿದೆ. ಮಹಿಳೆಯರಿಗೆ ವಂಚನೆ ಮಾಡಿ ಅಂತಲೇ ದೇವರು ಮೋದಿಯವರನ್ನು ಕಳುಹಿಸಿದ್ದು?
ಮಹಿಳಾ ಮೀಸಲಾತಿ ಬಿಲ್ ಸಿದ್ಧಪಡಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ಯಾವತ್ತೂ ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಇದೆ. ಮಹಿಳಾ ಮೀಸಲಾತಿಯಲ್ಲೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಇರಬೇಕು ಎನ್ನುವುದಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಅದರಲ್ಲೂ ಶೇ 33 ಮಾತ್ರವಲ್ಲ, ಶೇ 50 ರಷ್ಟು ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲ ಇದೆ. ಈಗ ಮೋದಿಯವರು ಜಾರಿ ಮಾಡಿದ್ದೇನೆ ಎನ್ನುತ್ತಿರುವ ಈ ಮಹಿಳಾ ಮೀಸಲಾತಿ 2024 ರಲ್ಲೂ ಜಾರಿ ಆಗುವುದಿಲ್ಲ. 2029 ರಲ್ಲೂ ಜಾರಿ ಆಗುವುದಿಲ್ಲ, 2034 ರಲ್ಲೂ ಜಾರಿ ಆಗುವುದಿಲ್ಲ. ಅಷ್ಟೊತ್ತಿಗೆ ಕಾಯ್ದೆಯ ಆಯಸ್ಸೇ ಮುಗಿದಿರುತ್ತದೆ. ಮಹಿಳೆಯರೂ ಶೂದ್ರರ ರೀತಿ ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಿದ್ದರು. ಮಹಿಳೆಯರ ಹೋರಾಟ ಮತ್ತು ಸಂವಿಧಾನದ ಕಾರಣಕ್ಕೆ ಶಿಕ್ಷಣದಲ್ಲಿ ಅವಕಾಶ ದೊರೆಯಿತು. ಅವಕಾಶ ಸಿಕ್ಕಿದ್ದರಿಂದ ಪುರುಷರಿಗಿಂತ ಶಿಕ್ಷಣದಲ್ಲಿ ಮುಂದಿದ್ದಾರೆ.
ಮಹಿಳಾ ಮೀಸಲಾತಿ ಜಾರಿ ಆಗಿಬಿಟ್ಟಿತು ಎಂದು ಸುಳ್ಳು ನಂಬಿಕೊಂಡು ಸುಳ್ಳು ಚಪ್ಪಾಳೆ ಹೊಡಿಬೇಡಿ. ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಾವು, ನೀವೆಲ್ಲಾ ಹೋರಾಟ ಮುಂದುವರೆಸಬೇಕು ಎಂದಿದ್ದಾರೆ.

Exit mobile version