Home News Heart Attack: ಹೃದಯಾಘಾತದಿಂದ ಮೂವರು ಸಾವು

Heart Attack: ಹೃದಯಾಘಾತದಿಂದ ಮೂವರು ಸಾವು

ದಾವಣಗೆರೆ: ಆಟೋ ಚಾಲನೆ ಮಾಡುವಾಗಲೇ ಕುಸಿದು ಬಿದ್ದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮಂಜ್ಯಾ ನಾಯ್ಕ (38) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಆಟೋ ಓಡಿಸುವಾಗ ಕುಸಿದು ಬಿದ್ದ ಈತನನ್ನು ಆಸ್ಪತ್ರೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಸಾವು ಕಂಡಿದ್ದಾನೆ. ಮಂಜ್ಯಾ ನಾಯ್ಕ್ ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಚಿಕ್ಕಮಗಳೂರು: ಹೃದಯಾಘಾತದಿಂದ 35 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕು ಕುಂದೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ಕರೀಗೌಡ ಹೃದಯಾಘಾತದಿಂದ ಮೃತರಾಗಿದ್ದಾರೆ. ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಕುಟುಂಬದವರು ಕೂಡಲೇ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಹೃದಯಾಘಾತದಿಂದ ಎಂಜಿನಿಯರ್ ಸಾವು
ಹಾವೇರಿ: ತಾಲೂಕಿನ ಕಂಚಾರಗಟ್ಟಿ ಗ್ರಾಮದ ಹನುಮಂತ ಬಸವರಾಜಪ್ಪ ಯಲಿಗಾರ (31) ಬೆಂಗಳೂರಿನಲ್ಲಿ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿರುವ ಹನುಮಂತ ಮಂಗಳವಾರ ಬೆಳಗ್ಗೆ ಎದೆನೋವಿನಿಂದ ಬಳಲಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಎರಡು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಹನುಮಂತ ಅವರ ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ‌.

Exit mobile version