Home ಅಪರಾಧ ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಮಾರಾಟ ಪ್ರಕರಣ: ಮತ್ತಿಬ್ಬರು ವೈದ್ಯರ ಬಂಧನ

ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಮಾರಾಟ ಪ್ರಕರಣ: ಮತ್ತಿಬ್ಬರು ವೈದ್ಯರ ಬಂಧನ

0

ಮಂಗಳೂರು: ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳನ್ನು ಒಳಗೊಂಡ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಆಂಧ್ರ ಪ್ರದೇಶದ ಅನಂತಪುರದ ನಿವಾಸಿ ಹಾಗೂ ಹಾಲಿ ಅತ್ತಾವರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಡಾ. ರಾಘವ ದತ್ತಾ (೨೮), ಇನ್ನೋರ್ವ ಆರೋಪಿ ಬೆಂಗಳೂರು ಹಲ್ಸೂರು ಜೋಡುಪಾಲ್ಯದ ನಿವಾಸಿ ಹಾಗೂ ಹಾಲಿ ಮಂಗಳೂರಿನ ಫಳ್ನೀರ್‌ನಲ್ಲಿ ವಾಸವಿರುವ ಡಾ. ಬಾಲಾಜಿ (೨೯) ಎಂದು ಗುರುತಿಸಲಾಗಿದೆ.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿ ೧೩ ಮಂದಿ ಆರೋಪಿಗಳನ್ನು ಈ ಹಿಂದೆಯೇ ಬಂಧಿಸಲಾಗಿದ್ದು, ಮತ್ತೆ ಇಬ್ಬರ ಬಂಧನದೊಂದಿಗೆ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ೧೫ಕ್ಕೇರಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜ.೭ರಂದು ಬಂಟ್ಸ್ ಹಾಸ್ಟೆಲ್ ಸರ್ಕಲ್ ಬಳಿಯ ಅಪಾರ್ಟ್‌ಮೆಂಟ್‌ಗೆ ದಾಳಿ ನಡೆಸಿದ್ದ ಪೊಲೀಸರು ನಿಷೇಧಿತ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿದ್ದರು. ನಿನ್ನೆಯವರೆಗೆ ಬಂಧಿಸಲಾಗಿದ್ದ ೧೩ ಮಂದಿಯನ್ನು ಬಂಧಿಸಿ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಬಂಧಿತರಲ್ಲಿ ೧೦ ಮಂದಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳಾಗಿರುವುದು ತಿಳಿದು ಬಂದಿದ್ದು, ಅವರು ನಗರದ ವಿವಿಧ ಕಾಲೇಜುಗಳಲ್ಲಿ ಶಿಕ್ಷಣ ಹಾಗೂ ಆಸ್ಪತ್ರೆಗಳಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದವರಾಗಿದ್ದರು. ಗುರುವಾರ ಬಂಧಿತರಾಗಿರುವ ಮತ್ತಿಬ್ಬರು
ಆರೋಪಿಗಳು ಕೂಡಾ ಒಬ್ಬರು ನಗರದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ವೈದ್ಯರು ಹಾಗೂ ಮತ್ತೊಬ್ಬರು ಸ್ನಾತಕೋತ್ತರ ವಿದ್ಯಾರ್ಥಿ. ವೈದ್ಯನಾಗಿರುವ ಆರೋಪಿ ಮನೆಯಲ್ಲಿ ನಡೆಯುತ್ತಿದ್ದ ಚಿಕ್ಕಮಟ್ಟದ ಕಾರ್ಯಕ್ರಮಕ್ಕೆ ಬರುವ ವಿದ್ಯಾರ್ಥಿಗಳು, ಸ್ನೇಹಿತರಿಗೆ ಅವರಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಬಗ್ಗೆ ತನಿಖೆಯಲ್ಲಿ ತಿಳಿದುಬಂದೆ, ತನಿಖೆ ಮುಂದುವರಿದಿದೆ. ಹಾಸ್ಟೆಲ್, ಪಿಜಿಗಳಲ್ಲಿ ಮತ್ತಷ್ಟು ಆರೋಪಿಗಳಿರುವುದು ತಿಳಿದುಬಂದಿದ್ದು, ಆ ಹಿನ್ನೆಲೆಯಲ್ಲಿ ನೋಟೀಸು ನೀಡಲು ಹೋದ ವೇಳೆ ಅವರೆಲ್ಲಾ ಜಾಗ ಖಾಲಿ ಮಾಡಿ ಹೋಗಿರುವುದು ಪತ್ತೆಯಾಗಿದೆ ಎಂದಿದ್ದಾರೆ.

Exit mobile version