ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಭಾರಿ ಷಡ್ಯಂತರ ನಡೆಯುತ್ತಿದೆ. ಇದರ ಹಿಂದಿನ ಉದ್ದೇಶ, ಹಿಂದಿರುವ ಕಾಣದ ಕೈಗಳು ಹಾಗೂ ಪೂರೈಕೆಯಾಗುತ್ತಿರುವ ಹಣದ ಮೂಲಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದ ಸಮಗ್ರ ತನಿಖೆ ನಡೆಸಬೇಕು ಎಂದು ದ.ಕ. ಜಿಲ್ಲೆಯ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಆಗ್ರಹಿಸಿದೆ. ಮಂಗಳೂರು ಪುರಭವನದಲ್ಲಿ ಶುಕ್ರವಾರ ನಡೆದ ಬೃಹತ್ ಧರ್ಮ ಜಾಗೃತಿ ಸಮಾವೇಶದಲ್ಲಿ ಈ ಒಕ್ಕೊರಲ ಠರಾವು ಮಂಡಿಸಲಾಯಿತು.
ಧರ್ಮಸ್ಥಳ ಮೇಲಿನ ದುರುದ್ದೇಶಪೂರಿತ ಆರೋಪಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ ಹಾಗೂ ಎನ್‌ಐಎ ಮುಂದಾಳತ್ವದಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಲಾಗಿದೆ. ವೇದಿಕೆಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಹೊಳ್ಳ ಮಂಡಿಸಿದ ಠರಾವಿಗೆ ಸೇರಿದ ಭಕ್ತಸ್ತೋಮ ಕೈ ಎತ್ತಿ ಘೋಷಣೆ ಕೂಗುವ ಮೂಲಕ ಅಂಗೀಕಾರ ನೀಡಿತು.
ಧಾರ್ಮಿಕ ಪ್ರಜ್ಞೆಯ ಶ್ರದ್ಧಾಕೇಂದ್ರವಾಗಿ ಧರ್ಮಸ್ಥಳ ಜಗತ್ತಿನಾದ್ಯಂತ ಬಹುಪ್ರಸಿದ್ಧಿಯನ್ನು ಪಡೆದಿದೆ. ಭಕ್ತರ ಕಾಣಿಕೆಗಳೆಲ್ಲ ದಾನ, ಧರ್ಮ, ಪರೋಪಕಾರ, ದೀನ ದಲಿತರ ಉದ್ಧಾರದ ಬೃಹತ್ ಕಾರ್ಯಕ್ರಮಗಳಿಗೆ ವಿನಿಯೋಗವಾಗುವ ಏಕೈಕ ಧಾರ್ಮಿಕ ಕೇಂದ್ರವಾಗಿ ಮಾನ್ಯತೆ ಪಡೆದಿದೆ. ಹೀಗಿರುವಾಗ ಕಾಲ್ಪನಿಕ ಕಾರಣಗಳನ್ನು ಮುಂದಿಟ್ಟು ಕೊಂಡು ಭಕ್ತಕೋಟಿಯ ಆರಾಧ್ಯ ಕ್ಷೇತ್ರವನ್ನು ಪರಿಪರಿಯಾಗಿ ಅವಹೇಳನ ಮಾಡಲಾಗುತ್ತಿದೆ. ಅಹೋರಾತ್ರಿ ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ತೇಜೋವಧೆ ಮೂಲರ ನಿಂದಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ.
ವಿಘ್ನ ಸಂತೋಷಿಗಳ ಈ ವರ್ತನೆ ಭಕ್ತರ ಭಾವನೆಗಳನ್ನು ಕೆರಳಿಸಿ ಅತೀವ ನೋವನ್ನು ಉಂಟುಮಾಡಿದೆ. ಇದು ವಿಕೋಪಕ್ಕೆ ಹೋಗಬಹುದಾದ ಎಲ್ಲ ವಿದ್ಯಮಾನಗಳು ನಡೆಯುವ ಸಂಭವ ಇದೆ. ಹೀಗಾಗಿ ಕಾಲಮಿಂಚುವ ಮುನ್ನ ಸರ್ಕಾರವೇ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ನಿರ್ಣಯದಲ್ಲಿ ವಿನಂತಿಸಲಾಗಿದೆ.
ಮಲಪ್ಪುರಂ ಜಿಲ್ಲೆ ಮಾಡುವ ಹುನ್ನಾರ: ಇದಕ್ಕೂ ಮುನ್ನ ಮಾತನಾಡಿದ ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಎಸಗುವವರನ್ನು ಮಟ್ಟಹಾಕಲು ಸಿಬಿಐ, ಎನ್‌ಐಎ ಹಾಗೂ ಇಡಿ ತನಿಖೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಹಿಂದಿನಿಂದಲೂ ದ.ಕ. ಜಿಲ್ಲೆಯನ್ನು ಕೇರಳದಂತೆ ಇನ್ನೊಂದು ಮಲಪ್ಪುರಂ ಜಿಲ್ಲೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಕೇರಳದ ಪತ್ರಿಕೆಯೊಂದರ ವರದಿಯನ್ನು ಉಲ್ಲೇಖಿಸಿ ಆರೋಪಿಸಿದರು.
ಧಾರ್ಮಿಕತೆಯ ಸರ್ವನಾಶ ಎಚ್ಚರಿಕೆ: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆರ್ಚಕ ಶ್ರೀಹರಿ ನಾರಾಯಣದಾಸ ಆಸ್ರಣ್ಣ ಮಾತನಾಡಿ, ತಲೆಬುರುಡೆ ಪ್ರಕರಣ ಎಂಬುದು ಡಾ. ವೀರೇಂದ್ರ ಹೆಗ್ಗಡೆ ಮೂಲಕ ಧರ್ಮಸ್ಥಳ ದೇವಸ್ಥಾನಕ್ಕೆ ಮಾಡಿದ ಅಪಮಾನ. ಹಿಂದೆ ಕಟೀಲು ದೇವಸ್ಥಾನ ವಿಚಾರದಲ್ಲೂ ಅಪಪ್ರಚಾರ ನಡೆದಿದ್ದು, ಅದನ್ನು ನಾವು ದಾಖಲೆ ಸಮೇತ ಸಮರ್ಥವಾಗಿ ಎದುರಿಸಿದ್ದೆವು. ಇಂದು ಧರ್ಮಸ್ಥಳ, ನಾಳೆ ಉಡುಪಿ, ನಾಡಿದ್ದು ಕಟೀಲು ಹೀಗೆ ಕರಾವಳಿಯ ದೇವಸ್ಥಾನಗಳನ್ನು ಸರ್ವನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಧಾರ್ಮಿಕತೆಯ ಅಸ್ತಿತ್ವಕ್ಕೆ ಅಪಾಯ ತಪ್ಪಿದ್ದಲ್ಲ ಎಂದರು.
ವಿಶ್ವಹಿಂದು ಪರಿಷತ್ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್, ಬಿ.ಕೆ.ಪುರುಷೋತ್ತಮ್ ಮತ್ತಿತರರು ಮಾತನಾಡಿದರು. ವೇದಿಕೆ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಾಸ್ತಾವಿಕದಲ್ಲಿ, ಇಂದು ಧರ್ಮಸ್ಥಳ, ನಾಳೆ ನಮ್ಮ ಮನೆಗೂ ವಿಕೃತಿ ಬರಬಹುದು. ಆದ್ದರಿಂದ ಅಸ್ತಿತ್ವ ಉಳಿವಿಗಾಗಿ ರಾಷ್ಟ್ರಭಕ್ತಿಯನ್ನು ಮೇಳೈಸಬೇಕು ಎಂದರು. ಕಾಂಗ್ರೆಸ್ ಹಿರಿಯ ಮುಖಂಡ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶರವು ರಾಘವೇಂದ್ರ ಶಾಸ್ತ್ರಿ, ಮುಂದಾಳುಗಳಾದ ಕೆ.ಸಿ.ನಾಯ್ಕ್, ಜಿತೇಂದ್ರ ಕೊಟ್ಟಾರಿ, ಸಂತೋಷ್ ಬೋಳಿಯಾರ್ ಮತ್ತಿತರರಿದ್ದರು.
‘ಆಪರೇಷನ್ ಧರ್ಮಸ್ಥಳ’ ನಡೆಯಲಿ: ಹಿಂದೆ ಮೊಗಲರ, ಬಳಿಕ ಬ್ರಿಟಿಷರು, ಈಗ ಮೊಗಲ್ ಮತ್ತು ಬ್ರಿಟಿಷ್ ಸಂತತಿ ಕರಾವಳಿಯಲ್ಲಿ ಹುಟ್ಟಿರುವುದು ದುರಂತ. ಕಳೆದ 13 ವರ್ಷಗಳ ಕಾಲ ಸೌಜನ್ಯ ಕೇಸ್ ಆಯ್ತು, ಈಗ ತಲೆಬುರುಡೆ ಕೇಸ್‌ನ್ನು ಮುಂದಿಡುತ್ತಿದ್ದಾರೆ. ತಲೆಬುರುಡೆ ಕೋರ್ಟ್‌ಗೆ ತಂದ ಅನಾಮಿಕನ ತನಿಖೆ ನಡೆಸಬೇಕು. ಅದರ ಹಿಂದಿನ ರಹಸ್ಯ ಬಯಲಿಗೆ ಬರಬೇಕು. ಇಂತಹ ಆರೋಪಗಳನ್ನು ಖಾಕಿ, ಖಾದಿ ಮತ್ತು ಕಾವಿ ಎಲ್ಲರೂ ಒಟ್ಟಾಗಿ ಎದುರಿಸಬೇಕು. ನಾವೆಲ್ಲರೂ ಒಟ್ಟಾಗಿ ಕ್ಷೇತ್ರ ಉಳಿವಿಗೆ ಆಪರೇಷನ್ ಸಿಂದೂರ ಮಾದರಿಯಲ್ಲಿ ‘ಆಪರೇಷನ್ ಧರ್ಮಸ್ಥಳ’ ನಡೆಯಬೇಕು ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು.