ಮಂಗಳೂರು: ಹುಬ್ಬಳ್ಳಿ ಮತ್ತು ಮಂಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ ಮಾಡಲಾಗಿದೆ. ಗಣೇಶ್ ಚತುರ್ಥಿ-2025ರ ಹಿನ್ನಲೆಯಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ತಪ್ಪಿಸಲು ಈ ವಿಶೇಷ ರೈಲು ಓಡಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕವನ್ನು ಸಂಪರ್ಕಿಸುವ ಒಂದು ಟ್ರಿಪ್ ವಿಶೇಷ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಲು ಅನುಕೂಲವಾಗುವಂತೆ ವೇಳಾಪಟ್ಟಿ ಘೋಷಣೆ ಮಾಡಲಾಗಿದೆ.
ಎಸ್‌ಎಸ್‌ಎಸ್ ಹುಬ್ಬಳ್ಳಿ-ಮಂಗಳೂರು ಸೆಂಟ್ರಲ್ ನಡುವೆ ಈ ವಿಶೇಷ ರೈಲು ಸಂಚಾರವನ್ನು ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ. 17 ಬೋಗಿಯನ್ನು ಈ ರೈಲು ಒಳಗೊಂಡಿದ್ದು, ನಿಲ್ದಾಣಗಳ ಮಾಹಿತಿಯನ್ನು ನೀಡಲಾಗಿದೆ.
ಈ ರೈಲು 1 ಎಸಿ ಟು ಟೈರ್, 1 ಎಸಿ ತ್ರಿ ಟೈರ್, 10 ಸ್ಲೀಪರ್ ಕ್ಲಾಸ್, 3 ಜನರಲ್ ಸೆಕೆಂಡ್ ಕ್ಲಾಸ್, 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ವಿಕಲಾಂಗ ಸ್ನೇಹಿ ಕಂಪಾರ್ಟ್‌ಮೆಂಟ್ ಹೊಂದಿದೆ.
ವೇಳಾಪಟ್ಟಿ, ನಿಲ್ದಾಣಗಳು: ರೈಲು ಸಂಖ್ಯೆ 07341 ಎಸ್‌ಎಸ್‌ಎಸ್ ಹುಬ್ಬಳ್ಳಿ-ಮಂಗಳೂರು ನಡುವೆ ಸಂಚಾರವನ್ನು ನಡೆಸಲಿದೆ. ಈ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಆಗಸ್ಟ್ 26 (ಮಂಗಳವಾರ) 16:00ಕ್ಕೆ ಹೊರಡಲಿದೆ. ಮಂಗಳೂರು ಸೆಂಟ್ರಲ್‌ಗೆ ಮರುದಿನ 11:45ಕ್ಕೆ ತಲುಪಲಿದೆ.
ರೈಲು ನಂಬರ್ 07342 ಮಂಗಳೂರು ಸೆಂಟ್ರಲ್‌ನಿಂದ 27 ಆಗಸ್ಟ್ (ಬುಧವಾರ) 14:15ಕ್ಕೆ ಹೊರಡಲಿದೆ. ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಅಂದು 09:45ಕ್ಕೆ ತಲುಪಲಿದೆ. ಭಾರತೀಯ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ಹೋಗಿ ಬರುವ ಮಾರ್ಗದಲ್ಲಿ ರೈಲು ಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ ನಿಲ್ದಾಣದಲ್ಲಿ ನಿಲುಗಡೆ ಹೊಂದಿದೆ.
ಬೆಂಗಳೂರು-ಉಡುಪಿ ವಿಶೇಷ ರೈಲು: ಗಣೇಶ ಹಬ್ಬದ ಹಿನ್ನಲೆಯಲ್ಲಿ ಬೆಂಗಳೂರು-ಉಡುಪಿ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ. ಈ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಅವರು, ಗಣೇಶ ಚತುರ್ಥಿಗೂ ಬಂತು ವಿಶೇಷ ರೈಲು…ಎಂದು ಪೋಸ್ಟ್ ಹಾಕಿದ್ದಾರೆ.
ಗಣೇಶ ಚತುರ್ಥಿಯ ಪಾವನ ಪರ್ವ ಕಾಲದಲ್ಲಿ ನನ್ನ ಕ್ಷೇತ್ರದ ಜನರಿಗಾಗಿ ಆಗಸ್ಟ್ 26ರ ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೆ ಬೆಂಗಳೂರಿನಿಂದ ವಿಶೇಷ ರೈಲು ಹೊರಡಿಸುವಂತೆ ಮನವಿ ಸಲ್ಲಿಸಲಾಗಿದ್ದು ಇದೀಗ ಅಧಿಕೃತ ಪ್ರಕಟಣೆಯನ್ನು ರೈಲ್ವೆ ಇಲಾಖೆ ಹೊರಡಿಸಿದೆ.
ಕಳೆದ ಬಾರಿ ಮಧ್ಯರಾತ್ರಿ ಹೊರಟ ರೈಲು ವಿಳಂಬವಾಗಿತ್ತು ಎನ್ನುವಂತಹ ದೂರಿನ ಮೇರೆಗೆ ಈ ಬಾರಿ ಸಮಯ ಪಟ್ಟಿಯಲ್ಲಿ ಬದಲಾವಣೆ ಮಾಡಿ ಮಧ್ಯಾಹ್ನ 1 ಗಂಟೆಗೆ ಬೈಯ್ಯಪ್ಪನ ಹಳ್ಳಿಯಿಂದ ಹೊರಡುವ ರೈಲು ಅದೇ ದಿನ ರಾತ್ರಿ 12 ಗಂಟೆಗೆ ಉಡುಪಿ-ಕುಂದಾಪುರ ತಲುಪಲಿದೆ. ಈ ರೈಲು ಮುಂದುವರೆದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಂತರ ಮಡಗಾಂವ್ ವರೆಗೆ ತೆರಳಲಿದ್ದು ಪ್ರಯಾಣಿಕರು ಇದರ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ಕೋರುತ್ತೇನೆ.
ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಿಡುಗಡೆಯಾದ ವಿಶೇಷ ರೈಲಿಗೆ ಭಾರೀ ಬೇಡಿಕೆ ಇದ್ದಿದ್ದು 24 ಗಂಟೆಗಳ ಒಳಗಾಗಿ ಟಿಕೆಟ್ ಭರ್ತಿಯಾಗಿತ್ತು. ಹೀಗಾಗಿ ಕ್ಷೇತ್ರದ ಜನತೆಯ ಅಪೇಕ್ಷೆಯ ಮೇರೆಗ ಗಣೇಶ ಚತುರ್ಥಿಗೂ ವಿಶೇಷ ರೈಲನ್ನು ಹೊರಡಿಸಲಾಗಿದೆ.
ನನ್ನ ಮನವಿಯನ್ನು ಪುರಸ್ಕರಿಸಿದ ಗೌರವಾನ್ವಿತ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಶ್ರೀ ವಿ.ಸೋಮಣ್ಣರವರಿಗೆ ಮತ್ತು ರೈಲ್ವೆ ಇಲಾಖೆಗೆ ಧನ್ಯವಾದಗಳು ಎಂದು ಸಂಸದರು ಹೇಳಿದ್ದಾರೆ.