Home ಅಪರಾಧ ಬ್ರಿಜ್‌ಭೂಷಣ್ ಪುತ್ರನ ವಾಹನ ಡಿಕ್ಕಿ: ಇಬ್ಬರು ಬಲಿ

ಬ್ರಿಜ್‌ಭೂಷಣ್ ಪುತ್ರನ ವಾಹನ ಡಿಕ್ಕಿ: ಇಬ್ಬರು ಬಲಿ

0

ನವದೆಹಲಿ: ಉತ್ತರಪ್ರದೇಶದ ಗೊಂಡಾದಲ್ಲಿ ಕೈಸರ್‌ಗಂಜ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಣ್ ಭೂಷಣ್ ಸಿಂಗ್ ಅವರ ವಾಹನಗಳ ದಂಡು ಬುಧವಾರ ನಡೆಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು ಇನ್ನೊಬ್ಬ ಮಹಿಳೆ ಗಾಯಗೊಂಡಿದ್ದಾರೆ. ಶಾಲೆಯೊಂದರ ಬಳಿ ಅಭ್ಯರ್ಥಿಯ ವಾಹನಗಳ ದಂಡು ಚಲಿಸುತ್ತಿದ್ದಾಗ ರೆಹಾನ್ ಖಾನ್(೧೭) ಹಾಗೂ ಶೆಹಜಾದ್ ಖಾನ್(೨೦) ರೈಡ್ ಮಾಡುತ್ತಿದ್ದ ಮೋಟಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಅವರಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇದೇ ವೇಳೆ ೬೦ ವರ್ಷದ ಮಹಿಳೆಗೂ ಗಾಯವಾಗಿದ್ದು ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ನಂತರ ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಕರಣ್ ಸಿಂಗ್ ಭಾರತೀಯ ಕುಸ್ತಿಪಟುಗಳ ಮಹಾಒಕ್ಕೂಟದ ಮಾಜಿ ಅಧ್ಯಕ್ಷ ಹಗೂ ಹಾಲಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಪುತ್ರ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್‌ಭೂಷಣ್ ಬದಲಿಗೆ ಪುತ್ರ ಕರಣ್ ಸಿಂಗ್‌ಗೆ ಕೈಸರ್‌ಗಂಜ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿತ್ತು.
ಪ್ರತಿಪಕ್ಷಗಳ ಟೀಕೆ: ಆದರೀಗ ಕರಣ್ ವಾಹನ ಎಸಗಿದ ಅಪಘಾತದಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುತ್ತಿವೆ. “ನೀವು ಸ್ವತ: ದೇವರಂತೆ ಬಿಂಬಿಸಿಕೊಳ್ಳುತ್ತಿದ್ದೀರಿ. ಆದರೆ ಜನರ ಜೀವ ನಿಮಗೆ ಲೆಕ್ಕಕ್ಕಿಲ್ಲ. ಬಿಜೆಪಿಯ ದೈವಿಪುರುಷರು ನಾಗರಿಕರನ್ನು ಚದುರಂಗದ ದಾಳಗಳಂತೆ ಪರಿಗಣಿಸುತ್ತಿದ್ದಾರೆ” ಎಂದು ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಟೀಕಿಸಿದ್ದಾರೆ. ಬಿಜೆಪಿ ತೊಲಗಿಸಿ ಜೀವ ಉಳಿಸಿ ಎಂಬ ಹ್ಯಾಶ್‌ಟ್ಯಾಗ್ ಕೂಡಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದಾರೆ. ಜೊತೆಗೆ ೨೦೨೧ರಲ್ಲಿ ಬಿಜೆಪಿಯ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿಯವರ ಪುತ್ರ ಆಶೀಶ್ ಮಿಶ್ರಾ ಲಖಿಮ್‌ಪುರ ಖೀರಿ ಎಂಬಲ್ಲಿ ಪ್ರತಿಭಟನಾನಿರತ ರೈತರ ಮೇಲೆ ವಾಹನ ಹರಿಸಿದ ಘಟನೆಯನ್ನೂ ನೆನಪಿಸಿದ್ದಾರೆ.

Exit mobile version