ಚಿತ್ರದುರ್ಗ: ಲಾರಿಗೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಬಸ್ನಲ್ಲಿದ್ದ 5 ಜನರು ಸಾವನ್ನಪ್ಪಿರುವ ಭೀಕರ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150(ಎ) ರಲ್ಲಿ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.
ಮೃತಪಟ್ಟವರನ್ನು ಬೆಂಗಳೂರು ಮೂಲದ ಪಾರ್ವತಮ್ಮ(45) , ರಾಯಚೂರು ಜಿಲ್ಲೆಯ ಮಸ್ಕಿ ಮೂಲದ ರಮೇಶ್(40), ಮಾನವಿ ಮೂಲದ ನರಸಪ್ಪ(5), ಆಲಾಪುರ ಮೂಲದ ರವಿ(23) ಹಾಗೂ ರಾಯಚೂರಿನ ಮಾಬಮ್ಮ (35) ಎಂದು ಗುರುತಿಸಲಾಗಿದ್ದು, ಪಾರ್ವತಮ್ಮ ಹಾಗೂ ರಮೇಶ್ ಎಂಬುವವರು ಅಪಘಾತ ನಡೆದ ಸ್ಥಳದಲ್ಲೇ ಮೃತಪಟ್ಟಿದ್ದು, ನರಸಪ್ಪ, ರವಿ ಹಾಗೂ ಮಾಬಮ್ಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಕಳೆದ ಮಧ್ಯ ರಾತ್ರಿ ರಾಯಚೂರಿನಿಂದ ಬೆಂಗಳೂರಿಗೆ ಹೊರಟ ಕೆಎ-36, ಎಫ್-1628 ಕೆಎಸ್ಆರ್ ಟಿಸಿ ಬಸ್ ರಾಷ್ಟ್ರೀಯ ಹೆದ್ದಾರಿ 150(ಎ) ರಲ್ಲಿ ಸಾಗುತ್ತಿರುವಾಗ ಬೆಳಗಿನ ಜಾವ 3.30. ರ ಸುಮಾರಿನಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 150(ಎ) ರಲ್ಲಿ ದಾಸ್ತಾನು ತುಂಬಿಕೊಂಡು ಮುಂದೆ ಹೋಗುತ್ತಿದ್ದ ಕೆಎ-35, ಡಿ-0304 ನಂಬರಿನ ಲಾರಿಗೆ ಬಸ್ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯಿಂದಲಾರಿಯ ಹಿಂಬಾಗಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ಸಿನ ಎಡ ಭಾಗದಲ್ಲಿ ಕುಳಿತಿದ್ದ ಪಾರ್ವತಮ್ಮ, ರಮೇಶ್ ಅವರಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನರಸಪ್ಪ, ರವಿ ಹಾಗೂ ಮಾಬಮ್ಮ ಅವರುಗಳು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಬಸ್ಸಿನಲ್ಲಿದ್ದ ಇನ್ನೂ 8 ಜನರು ಗಾಯಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ 5 ಜನರನ್ನು ಮತ್ತು ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ 3 ಜನರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
