Home News ಗಾಳಿಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸಿ: ಕರ್ಣಾಟಕ ಬ್ಯಾಂಕ್ ಸ್ಪಷ್ಟನೆ

ಗಾಳಿಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸಿ: ಕರ್ಣಾಟಕ ಬ್ಯಾಂಕ್ ಸ್ಪಷ್ಟನೆ

ಸಂ. ಕ. ಸಮಾಚಾರ, ಮಂಗಳೂರು: ೧೦೧ ವರುಷಗಳ ಇತಿಹಾಸವಿರುವ, ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ಬಗ್ಗೆ ವಿವೇಚನಾರಹಿತವಾಗಿ ಕೆಲವು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದೆ. ಈ ಸುದ್ದಿಗಳು ಸಂಪೂರ್ಣವಾಗಿ ದುರುದ್ದೇಶಪೂರಿತವಾಗಿದ್ದು, ವಿಷಯವನ್ನು ಗೊಂದಲಗೊಳಿಸಲು ಮತ್ತು ಬ್ಯಾಂಕಿನ ಗ್ರಾಹಕರ ಮನಸ್ಸಿನಲ್ಲಿ ಆತಂಕವನ್ನು ಸೃಷ್ಟಿಸುವ ಉದ್ದೇಶದಿಂದ ಮಾಡಲಾಗಿದೆ.
ಠೇವಣಿದಾರರ ಹಣದ ಸುರಕ್ಷತೆ ಮತ್ತು ಭದ್ರತೆಯೇ ನಮ್ಮ ಬ್ಯಾಂಕಿನ ಮೊದಲ ಆದ್ಯತೆಯಾಗಿದ್ದು, ೧೦೧ ವರುಷಗಳಿಂದ ಇದನ್ನು ಪಾಲಿಸಿಕೊಂಡು ಬರುತ್ತಿದ್ದೇವೆ, ಮುಂದೆಯೂ ಈ ಬದ್ಧತೆ ಹಾಗೆಯೇ ಇರುತ್ತದೆ. ಗ್ರಾಹಕರ ನಂಬಿಕೆ ವಿಶ್ವಾಸಗಳನ್ನು ಗಳಿಸಿರುವ, ಸಾಮಾಜಿಕ ಬದ್ಧತೆಗೆ ಪ್ರಸಿದ್ಧಿಯಾಗಿರುವ ಕರ್ಣಾಟಕ ಬ್ಯಾಂಕ್ ಸುದೃಢವಾಗಿದೆ ಎಂದು ನಾವು ಈ ಮೂಲಕ ನಮ್ಮ ಬ್ಯಾಂಕಿನ ಆದರಣೀಯ ಗ್ರಾಹಕರಿಗೆ ತಿಳಿಸಬಯಸುತ್ತೇವೆ. ೧೦೧ ವರುಷಗಳಿಂದಲೂ ಸತತ ಲಾಭದಾಯಕ ವ್ಯವಹಾರ ಮಾಡುತ್ತಿರುವ ಕರ್ಣಾಟಕ ಬ್ಯಾಂಕ್ ಉತ್ತಮ ಬಂಡವಾಳವನ್ನೂ ಹೊಂದಿದ್ದು, ೧೯.೮೫% ಕ್ಕಿಂತ ಹೆಚ್ಚಿನ ಬಂಡವಾಳ ಸಾಮರ್ಥ್ಯ ಅನುಪಾತವನ್ನು ಹೊಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಹೇಳಿಕೆಯು ಯಾವುದೇ ಆಧಾರವಿಲ್ಲದ, ಸಂಪೂರ್ಣ ದುರುದ್ದೇಶಪೂರಿತ ಹೇಳಿಕೆಯಾಗಿದೆ. ಬ್ಯಾಂಕಿನ ಮೂಲಭೂತ ಆರ್ಥಿಕ ಸ್ಥಿತಿಯು ಬಹಳ ಗಟ್ಟಿಯಾಗಿದೆ ಮತ್ತು ಸುದೃಢವಾಗಿದೆ ಎಂಬುವುದನ್ನು ಸ್ಪಷ್ಟಪಡಿಸುತ್ತಿದ್ದೇವೆ.
ಬ್ಯಾಂಕಿಗೆ ಹಾನಿಯನ್ನುಂಟುಮಾಡಲು ಉದ್ದೇಶಿಸಿ ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಗಾಳಿಸುದ್ದಿಗಳನ್ನು ಹಬ್ಬಿಸಿರುವ ಚಾನೆಲ್, ಇಂತಹ ಆಧಾರರಹಿತ ಗಾಳಿಸುದ್ದಿಗಳನ್ನು ಹಬ್ಬಿಸುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸಲು ಬ್ಯಾಂಕಿನ ಯಾವುದೇ ಅಧಿಕಾರಿಗಳನ್ನು ಸಂಪರ್ಕಿಸಿಲ್ಲ. ಇದು ಜವಾಬ್ದಾರಿಯುತ ಪತ್ರಿಕೋದ್ಯಮದ ಮೂಲ ತತ್ವವನ್ನೇ ಧಿಕ್ಕರಿಸಿರುವುದಕ್ಕೆ ಸಾಕ್ಷಿ. ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಚಾನೆಲ್‌ನ ವಿರುದ್ಧ ಬ್ಯಾಂಕ್ ಕಾನೂನು ಕ್ರಮ ಕೈಗೊಳ್ಳುತಿದೆ. ಹೀಗಾಗಿ, ಸಾರ್ವಜನಿಕರು ಮತ್ತು ನಮ್ಮ ಗ್ರಾಹಕರು, ಬ್ಯಾಂಕ್‌ನ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಪರಿಗಣಿಸಿ, ವದಂತಿಗಳನ್ನು ನಿರ್ಲಕ್ಷಿಸಬೇಕಾಗಿ ವಿನಂತಿ. ನಂಬಿಕೆ, ಸ್ಥಿರತೆ ಮತ್ತು ಸೇವೆಯು ಕರ್ಣಾಟಕ ಬ್ಯಾಂಕ್‌ನ ಆಧಾರಸ್ತಂಭವಾಗಿದೆ ಹಾಗೂ ಬ್ಯಾಂಕ್ ಸುಭದ್ರವಾಗಿದೆ ಎಂದು ಕರ್ಣಾಟಕ ಬ್ಯಾಂಕ್ ಮುಖ್ಯ ಪ್ರಬಂಧಕಿ/ಸಾರ್ವಜನಿಕ ಸಂಪರ್ಕಾಧಿಕಾರಿ ಪಲ್ಲವಿ ಟಿ. ಎಸ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Exit mobile version