Home ಅಂಕಣ 2ನೇ ಅಣು ವಿದ್ಯುತ್ ಸ್ಥಾಪನೆ ಚರ್ಚೆ: ಅಣು ವಿದ್ಯುತ್ ಸೆರಗಿನಲ್ಲಿ ಕೆಂಡ

2ನೇ ಅಣು ವಿದ್ಯುತ್ ಸ್ಥಾಪನೆ ಚರ್ಚೆ: ಅಣು ವಿದ್ಯುತ್ ಸೆರಗಿನಲ್ಲಿ ಕೆಂಡ

0

ಸೋಮವಾರದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಎಚ್‌.ಆರ್‌. ಶ್ರೀಶ ಅವರ ಅಂಕಣ ಬರಹ

ಈಗ ರಾಜ್ಯದಲ್ಲಿ ಎರಡನೇ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ. ಹಿಂದೆ ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಮುನ್ನ ಇದೇ ರೀತಿ ಚರ್ಚೆ, ಹೋರಾಟಗಳು ನಡೆದಿದ್ದವು. ಕೊನೆಗೆ ಕೇಂದ್ರ ಸರ್ಕಾರ ಕೈಗಾ ಸ್ಥಾಪಿಸಿತು. ಈಗ ಅದರ ವಿಸ್ತರಣೆಯೂ ನಡೆದಿದೆ. ಕೈಗಾ ಸ್ಥಳವನ್ನು ಆಯ್ಕೆ ಮಾಡಿದವರು ಡಾ. ರಾಜಾರಾಮಣ್ಣ. ಅವರೇ ಹೆಲಿಕಾಪ್ಟರ್ ಸಮೀಕ್ಷೆ ನಡೆಸಿ ಎಲ್ಲ ದೃಷ್ಟಿಯಿಂದ ಇದು ಸೂಕ್ತ ಎಂದು ಹೇಳಿದರು. ಅದರಂತೆ ಯೋಜನೆ ಕಾರ್ಯಗತವಾಯಿತು.

ಈಗ ಎರಡನೇ ಸ್ಥಾವರ ಕರ್ನಾಟಕದಲ್ಲಿ ಬರಬೇಕಿದೆ. ಅದಕ್ಕೆ ಸ್ಥಳ ಹುಡುಕುವ ಕೆಲಸ ನಡೆದಿದೆ. ನಮ್ಮ ಜಿಲ್ಲೆಗೆ ಬೇಡ ಎಂದು ವಿರೋಧಿಸುವವರೂ ಇದ್ದಾರೆ. ಯಾರೂ ಸೆರಗಿನಲ್ಲಿ ಕೆಂಡ ಕಟ್ಟಿಕೊಳ್ಳಲು ಬಯಸುವುದಿಲ್ಲ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅಣು ವಿದ್ಯುತ್ ಸ್ಥಾವರ ಬೇಡ ಎಂದು ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ವಿದ್ಯುತ್ ಯಾವ ಮೂಲದಿಂದಲಾದರೂ ಪಡೆಯಬಹುದು. ಅದರಲ್ಲಿ ಅಣು ವಿದ್ಯುತ್ ಕೂಡ ಒಂದು.

ಹಾಗಾಗಿ ಬೇರೆ ಮೂಲದಿಂದ ವಿದ್ಯುತ್ ಪಡೆಯಲು ಆಗುವುದಿಲ್ಲವೆ ಎಂದು ವಾದ ಮಾಡುವವರೂ ಇದ್ದಾರೆ. ಅವರ ವಾದದಲ್ಲಿ ಹುರುಳಿದೆ. ಅದರೆ ಡಾ. ರಾಜಾರಾಮಣ್ಣ ಕೆಪಿಸಿ ಸಂಸ್ಥಾಪನಾ ದಿನ ಭಾಷಣ ಕೇಳಿದ ಮೇಲೆ ಅಣು ವಿದ್ಯುತ್ ಬೇಡವೇ ಬೇಡ ಎಂದು ಹೇಳುವ ಮನಸ್ಥಿತಿಯಲ್ಲಿ ನಾವಿಲ್ಲ. ಅಂದು ರಾಜಾರಾಮಣ್ಣ ಭಾಷಣ ಪತ್ರಿಕಾ ಮಾಧ್ಯಮಕ್ಕೆ ಅಲ್ಲ ಎಂದು ಷರತ್ತು ವಿಧಿಸಿದ್ದರಿಂದ ಆಗ ವರದಿ ಮಾಡಲು ಆಗಲಿಲ್ಲ. ದೇಶದ ಹಿತದ ದೃಷ್ಟಿಯಿಂದ ಅವರು ಷರತ್ತು ವಿಧಿಸಿದ್ದರು.

ತಮ್ಮ ಲ್ಯಾಪ್‌ಟಾಪ್‌ನಿಂದ ಅಣುಬಾಂಬ್ ಬಗ್ಗೆ ಎಲ್ಲ ವಿವರ ನೀಡಿದರು. ಪಾಕ್, ಚೀನಾ ಮತ್ತು ಭಾರತದ ಸಾಮರ್ಥ್ಯವನ್ನು ವಿವರಿಸಿ ಏನಾದರೂ ಯುದ್ಧದ ಕಾಲ ಬಂದಲ್ಲಿ ಈ ಅಣು ವಿದ್ಯುತ್ ಕೇಂದ್ರಗಳನ್ನು ನಮ್ಮ ರಕ್ಷಣೆಗೆ ಬಳಸಿಕೊಳ್ಳಬಹುದು ಎಂಬುದನ್ನು ಸೂಚ್ಯವಾಗಿ ಹೇಳಿ ಅಣು ವಿದ್ಯುತ್ ಸ್ಥಾವರಗಳ ಸ್ಥಾಪನೆಯನ್ನು ವಿರೋಧಿಸಬೇಡಿ. ಅಣು ವಿದ್ಯುತ್ ಸ್ಥಾವರದ ಬಗ್ಗೆ ಆತಂಕ ನಿಜ ಎಂದೂ ಹೇಳಿದರು. ಅವರ ಭಾಷಣ ಕೇಳಿದ ಮೇಲೆ ನಿಜ ಎನಿಸಿತು. ಇದು ವಿಚಾರಕ್ಕೆ ಯೊಗ್ಯವಾದ ಸಂಗತಿಯೂ ಹೌದು.

ಅಣು ವಿದ್ಯುತ್‌ಗೆ ಬಳಸುವುದೂ ಯುರೇನಿಯಂ. ಅದನ್ನು ಶೇ. 3-5 ರಷ್ಟು ಶುದ್ಧೀಕರಿಸಿದರೆ ವಿದ್ಯುತ್ ಉತ್ಪಾದಿಸಬಹುದು. ಇದನ್ನು ಯುರೇನಿಯಂ 235 ಎಂದು ಕರೆಯುತ್ತಾರೆ. ಅದೇ ಯುರೇನಿಯಂ ಶೇ. 90ರಷ್ಟು ಶುದ್ಧೀಕರಿಸಿದರೆ ಎಚ್‌ಇಯು 12 ಆಗುತ್ತದೆ. ಇದರಿಂದ ಬಾಂಬ್ ತಯಾರಿಸಬಹುದು. ಆದರೆ ಅಣು ವಿದ್ಯುತ್ ಕೇಂದ್ರದಲ್ಲಿ ಸುಲಭವಾಗಿ ಬಾಂಬ್ ತಯಾರಿಸಲು ಬರುವುದಿಲ್ಲ, ತಯಾರಿಸಲು ಅವಕಾಶವಿದೆ ಎಂಬುದು ನಿಜ.

ಅಂತಾರಾಷ್ಟ್ರೀಯ ಸಂಸ್ಥೆಗಳು ಅಣು ವಿದ್ಯುತ್ ಕೇಂದ್ರಗಳ ಮೇಲೆ ನಿಗಾವಹಿಸಿರುತ್ತವೆ. ಯುರೇನಿಯಂ ಬಳಸಿದಾಗ ಅದರಿಂದ ಪ್ಲುಟೊನಿಯಂ ಬರುತ್ತದೆ. ಅದನ್ನು ಯುದ್ದೋಪಕರಣಗಳಲ್ಲಿ ಬಳಸಬಹುದು. ಇದಿಷ್ಟು ಅಣು ವಿದ್ಯುತ್ ಕೇಂದ್ರಗಳ ಅಗತ್ಯದ ಬಗ್ಗೆ ಇರುವ ಮಾತುಗಳು. ಇನ್ನು ವಿದ್ಯುತ್ ಉತ್ಪಾದನೆಯ ಕಡೆ ನೋಡಿದರೆ ಇದು ಅತ್ಯಂತ ಶುದ್ಧ ವಿದ್ಯುತ್ 24 ಗಂಟೆ 40 ವರ್ಷ ನಿರಂತರ ಕೆಲಸ ಮಾಡುವ ಕೇಂದ್ರ. ಇದರಲ್ಲಿ ದೊಡ್ಡ ತೊಂದರೆ ಎಂದರೆ ಅಣು ವಿಕಿರಣ. ಜನವಸತಿಯಿಂದ ದೂರ ಈ ಕೇಂದ್ರ ಇರಬೇಕು. ಆದರೆ ಶತ್ರುಗಳ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಬೇಕು.

ಒಂದು ಗಿಗಾವ್ಯಾಟ್ ಅಣು ವಿದ್ಯುತ್ ಪಡೆಯಲು 100 ಎಕರೆ ಬೇಕು. 69000 ಕೋಟಿ ರೂ. ಮೂಲ ಬಂಡವಾಳ ಹೆಚ್ಚಾದರೂ ವಿದ್ಯುತ್ ಉತ್ಪಾದನೆ ದರ ಕಡಿಮೆ. ಪ್ರತಿ ಯೂನಿಟ್ ದರ 3 ರೂ. ನಿಂದ ಹಿಡಿದು 15 ರೂವರೆಗೆ ಇದೆ. ರಿಯಾಕ್ಟರ್ ಹಳೆಯದಾಗುತ್ತಿದ್ದಂತೆ ಅದರ ನಿರ್ವಹಣಾ ಕಡಿಮೆ. ಹೀಗಾಗಿ 4.50ರೂ. ಪ್ರತಿ ಯೂನಿಟ್ ವಿದ್ಯುತ್ ಬರುತ್ತದೆ. ಒಟ್ಟಿಗೆ 700 ಮೆಗಾವ್ಯಾಟ್ 4 ಘಟಕ ಸ್ಥಾಪಿಸಿದರೆ ಸಾಕು. ವಿದ್ಯುತ್ ಕೊರತೆ ಇರುವುದಿಲ್ಲ. ಹೆಚ್ಚು ಸಿಬ್ಬಂದಿಯೂ ಬೇಕಿಲ್ಲ. ಎಲ್ಲವೂ ರೋಬೊಟ್ ಮೂಲಕ ನಡೆಯುತ್ತದೆ.

ಕೇಂದ್ರ ಸರ್ಕಾರ 2047 ವೇಳೆಗೆ 100 ಗಿಗಾವ್ಯಾಟ್ ಅಣು ವಿದ್ಯುತ್‌ನಿಂದ ಪಡೆಯಲು ಯೋಜಿಸಿದೆ. ಈಗ ಎನ್‌ಟಿಪಿಸಿ ಇದಕ್ಕಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿದೆ. ಅದು ಕರ್ನಾಟಕದಲ್ಲಿ ಎರಡನೇ ಅಣು ಸ್ಥಾವರ ಸ್ಥಾಪಿಸಲು ಮುಂದೆ ಬಂದಿದೆ. ರಾಜ್ಯ ಸರ್ಕಾರ ಭೂಮಿ ನೋಡಬೇಕಿದೆ. ಆದರೆ ಜನರ ಆಕ್ರೋಶಕ್ಕೆ ಹೆದರಿ ರಾಜ್ಯ ಸರ್ಕಾರ ಎನ್‌ಟಿಪಿಸಿ ಅವರಿಗೆ ನೀವೇ ಸ್ಥಳ ಗುರುತಿಸಿ ಎಂದು ಹೇಳಿದೆ. ಭೀಮಾ ನದಿ ಸಮೀಪ ಬಂಜರು ಭೂಮಿ ಇರುವಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಎನ್‌ಟಿಪಿಸಿ ಆಸಕ್ತಿ ತೋರಿದೆ.

ಭೀಮಾ ನದಿ ಕರ್ನಾಟಕವನ್ನು ಪ್ರವೇಶಿಸುವುದು ಮಣ್ಣೂರು ಗ್ರಾಮದ ಬಳಿ. ಅದಕ್ಕೆ ಮೇಲೆ ಮಹಾರಾಷ್ಟ್ರದ ಅಕ್ಕಲಕೋಟ ಇದೆ. ಕೆಳಗೆ ಬಂದರೆ ಅಫಜಲಪುರ ಇದೆ. ಭೀಮಾ ನದಿಯ ಮತ್ತೊಂದು ದಡದಲ್ಲಿ ಇಂಡಿ ತಾಲೂಕು ಇದೆ. ಅಫಜಲಪುರ ತಾಲೂಕು ಮೇಲೆ ಮಹಾರಾಷ್ಟ್ರದ ಗಡಿಯವರೆಗೆ ಬಂಜರು ಭೂಮಿ ಇದೆ. ರೈಲಿನಲ್ಲಿ ಹೋದರೆ ಇದನ್ನು ನೋಡಬಹುದು. ಇಲ್ಲಿ ಜನ ವಸತಿಯೂ ಇಲ್ಲ. ಹಿಂದೆ ರಾತ್ರಿ ವೇಳೆ ಇಲ್ಲಿ ರೈಲಿನ ದರೋಡೆ ನಡೆಯುತ್ತಿತ್ತು. ಈಗ ಎಲ್ಲವೂ ನಿಂತಿದೆ. ಬೇಸಾಯ ಮಾತ್ರ ಇಲ್ಲ. ಈ ಸ್ಥಳ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಸೂಕ್ತವಾಗಬಹುದು ಎಂಬ ಅಧಿಕಾರಿಗಳಲ್ಲಿ ಮೂಡಿದೆ. ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡು ಸ್ಥಳವನ್ನು ಎನ್‌ಟಿಪಿಸಿಗೆ ನೀಡಬೇಕಿದೆ. ಎನ್‌ಟಿಪಿಸಿ ಮೂಲ ಬಂಡವಾಳ ಹೂಡಲು ಸಿದ್ಧತೆ ಮಾಡಿಕೊಂಡಿದೆ.

ಅಣು ವಿದ್ಯುತ್-ಸೋಲಾರ್: ಅಣು ವಿದ್ಯುತ್‌ಗಿಂತ ಸೋಲಾರ್ ಸುರಕ್ಷಿತ ಎಂದು ಹಲವರು ಈಗ ವಾದಿಸಲು ಆರಂಭಿಸಿದ್ದಾರೆ. ಸೋಲಾರ್‌ನಿಂದ ಅಪಾಯವೇನೂ ಇಲ್ಲ. ಎಲ್ಲಿ ಬೇಕಾದರೂ ಅಳವಡಿಸಬಹುದು. 1 ಮೆಗಾವ್ಯಾಟ್ ಸೋಲಾರ್ ಪಡೆಯಲು 4-6 ಕೋಟಿ ರೂ.ಬಂಡವಾಳ ಬೇಕು. 1 ಗಿಗಾವ್ಯಾಟ್ ಸೋಲಾರ್ ಎಂದರೆ 600ಕೋಟಿ ರೂ. ಬೇಕು. 5ಸಾವಿರ ಎಕರೆ ಭೂಮಿ ಬೇಕು. 12 ಗಂಟೆ ಮಾತ್ರ ವಿದ್ಯುತ್. ರಾತ್ರಿ ಇಲ್ಲ. ಇದರ ಬೆಲೆಯೂ ಪ್ರತಿ ಯೂನಿಟ್‌ಗೆ ಈಗ 6 ರೂ. ತಲುಪಿದೆ.

ಸೋಲಾರ್ ದಾಸ್ತಾನು ಮಾಡಬೇಕು ಎಂದರೆ ಪಂಪ್ಡ್ ಸ್ಟೋರೇಜ್ ಅಥವಾ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆಗೆ ಹೋಗಬೇಕು. ಅದಕ್ಕೆ ಹೆಚ್ಚುವರಿ ಬಂಡವಾಳ ಹೂಡಬೇಕು. ಅಣು ವಿದ್ಯುತ್‌ಗೆ ಈ ಸಮಸ್ಯೆ ಇಲ್ಲ. ಸೋಲಾರ್‌ಗೆ ಹೆಚ್ಚಿನ ರಕ್ಷಣೆ ಬೇಕಿಲ್ಲ. ನೀರಿನ ಪ್ರಮಾಣವೂ ಕಡಿಮೆ. ಆದರೆ 25 ವರ್ಷ ಮಾತ್ರ. ಆಮೇಲೆ ಹೊಸ ಸೌರಫಲಕ ಅಳವಡಿಸಬೇಕು. ಈಗ ಖಾಸಗಿ ಕಂಪನಿಗಳು ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚು ಬಂಡವಾಳ ಹೂಡಿಕೆ ಮಾಡುತ್ತಿವೆ.

ಇದರಿಂದ ಮುಂಬರುವ ದಿನಗಳಲ್ಲಿ ಗ್ರೀಡ್ ವ್ಯವಸ್ಥೆಯಲ್ಲಿ ಅಸಮತೋಲನ ಕಂಡು ಬರುತ್ತದೆ. ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ಅಣು ವಿದ್ಯುತ್ ಉತ್ಪಾದನೆಯನ್ನು ಖಾಸಗಿರಂಗಕ್ಕೂ ತೆರೆಯಲು ತೀರ್ಮಾನಿಸಿದೆ. ಅದರಿಂದ ಕಡಿಮೆ ಸಾಮರ್ಥ್ಯದ ಭಾರಜಲ ರಿಯಾಕ್ಟರ್‌ಗಳನ್ನು ತಯಾರಿಸಲು ತೀರ್ಮಾನಿಸಿದೆ. ಇದು ಕೈಗಾರಿಕೆಗಳಾದ ಸಿಮೆಂಟ್, ಉಕ್ಕು ತಯಾರಿಕೆಗಳಲ್ಲಿ ಉಪಯೋಗಕ್ಕೆ ಬರಲಿದೆ. 220 ಮೆಗಾವ್ಯಾಟ್ ಸಾಮರ್ಥ್ಯದ ಭಾರಜಲದ ರಿಯಾಕ್ಟರ್‌ಗಳು ಮಾರುಕಟ್ಟೆಗೆ ಬರಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version