Home ತಾಜಾ ಸುದ್ದಿ ಸುಹಾಸ್ ಶೆಟ್ಟಿ ಹತ್ಯೆ: ವಿದೇಶಿ ಹಣ ಬಳಕೆ – ಎನ್‌ಐಎ ತನಿಖೆ

ಸುಹಾಸ್ ಶೆಟ್ಟಿ ಹತ್ಯೆ: ವಿದೇಶಿ ಹಣ ಬಳಕೆ – ಎನ್‌ಐಎ ತನಿಖೆ

ಸಂ. ಕ. ಸಮಾಚಾರ, ಮಂಗಳೂರು: ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ವಿದೇಶಿ ಹಣ ಬಳಕೆಯಾಗಿರುವ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ಆರಂಭಿಸಿದೆ.
ಪ್ರಕರಣದಲ್ಲಿರುವ ಬಂಧಿತರಾಗಿರುವ ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ವಿದೇಶಿ ಹಣ ಪಾವತಿಯಾಗಿರುವ ಬಗ್ಗೆ ಎನ್‌ಐಎ ಪರಿಶೀಲಿಸುತ್ತಿದೆ.
ಬಂಧಿತರಾಗಿರುವ ೧೨ ಆರೋಪಿಗಳ ಬ್ಯಾಂಕ್ ಖಾತೆ ವಿವರ ಸಂಗ್ರಹಿಸಿದ್ದು, ಬೇರೆ ಬೇರೆ ಬ್ಯಾಂಕ್ ಗಳ ವಿವರಗಳನ್ನು ಕಲೆಹಾಕಿದೆ. ಅಲ್ಲದೆ ಕೆಲವು ಸ್ಥಳೀಯ ವ್ಯಕ್ತಿಗಳಿಂದಲೂ ಆರೋಪಿಗಳ ಬ್ಯಾಂಕ್ ಖಾತೆಗೆ ಹಣ ರವಾನೆಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಪ್ರಸಕ್ತ ಆರೋಪಿಗಳು ಎನ್‌ಐಎ ಕಸ್ಟಡಿಯಲ್ಲಿದ್ದು, ಬೆಂಗಳೂರಿನಲ್ಲೇ ತನಿಖೆ ನಡೆಯುತ್ತಿದೆ.
ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಕೈವಾಡದ ಶಂಕೆ ಮೇರೆಗೆ ಎನ್‌ಐಎ ಅಧಿಕಾರಿಗಳು ವಿಸ್ತೃತ ತನಿಖೆ ಕೈಗೆತ್ತಿಕೊಂಡಿದ್ದಾರೆ. ಆರೋಪಿಗಳ ಬ್ಯಾಂಕ್ ಖಾತೆಗೆ ಸಂಬಂಧಿಸಿ ಎನ್‌ಐಎ ಡಿಜಿ ರಾಹುಲ್ ಹಾಗೂ ಎಸ್ಪಿ ಶಿವಕುಮಾರ್ ಪೂರ್ಣ ಪ್ರಮಾಣದ ಮಾಹಿತಿಗೆ ಮುಂದಾಗಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಎನ್‌ಐಎ ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದ ತಂಡ ನಡೆಸುತ್ತಿದೆ. ಮೂಲಗಳ ಪ್ರಕಾರ ಸುಹಾಸ್ ಹತ್ಯೆಯಲ್ಲಿ ಭಾಗಿಯಾದ ಬಹುತೇಕರಿಗೆ ನಿಷೇಧಿತ ಪಿಎಫ್‌ಐ ನಂಟಿನ ಬಗ್ಗೆ ಸಾಕ್ಷ್ಯ ಲಭ್ಯವಾಗಿದೆ. ಪಿಎಫ್‌ಐ ಜೊತೆ ಗುರುತಿಸಿಕೊಂಡು ವಿದೇಶದಲ್ಲಿ ಇರುವ ಕೆಲವರಿಂದ ಹತ್ಯೆಗೆ ಹಣಕಾಸು ನೆರವು ಪಡೆದಿರುವ ಬಗ್ಗೆ ತನಿಖೆ ನಡೆಯುತ್ತಿದೆ.
ಬಂಧಿತ ಆರೋಪಿಗಳು ಮಂಗಳೂರು ಹಾಗೂ ವಿದೇಶದಲ್ಲಿ ಇರುವ ಕೆಲವರ ಹೆಸರು ಬಾಯಿಬಿಟ್ಟಿರುವುದಾಗಿ ಹೇಳಲಾಗಿದೆ. ಇದ್ದಲ್ಲದೆ ಹತ್ಯೆಗೆ ನೆರವು ನೀಡಿದ ಒಂದಷ್ಟು ಮಂದಿಯ ಖಚಿತ ಮಾಹಿತಿಯನ್ನುಎನ್‌ಐಎ ಕಲೆ ಹಾಕಿದೆ. ಇದೇ ವೇಳೆ ನಿಗೂಢ ವ್ಯಕ್ತಿಗಳ ಬಂಧನಕ್ಕೆ ಎನ್‌ಐಎ ಅಧಿಕಾರಿಗಳು ಬಲೆ ಬೀಸಿದ್ದಾರೆ ಎನ್ನಲಾಗಿದೆ.

Exit mobile version