ಬಸವಕಲ್ಯಾಣ: ಬೇಸಿಗೆ ಬಿಸಿಲಿನಿಂದ ಬೇಸತ್ತ ಯುವಕರಿಬ್ಬರು ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋಗಿ, ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಲಸೂರ ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ರವಿವಾರ ಮಧ್ಯಾಹ್ನ ಜರುಗಿದೆ.
ಮುಚಳಂಬ ಗ್ರಾಮದ ಅವಿನಾಶ್ ಮಚಕೂರೆ (16), ಭಾಲ್ಕಿ ತಾಲ್ಲೂಕಿನ ಕೋಟಗೇರಾ ಗ್ರಾಮದ ಭಾಗೇಶ ಮಾನೆ (16) ಮೃತ ಬಾಲಕರು ಎಂದು ತಿಳಿದು ಬಂದಿದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾಗಿದ್ದ ಈ ಇಬ್ಬರು ಬಾಲಕರು ಪರೀಕ್ಷೆ ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ರಜಾ ಇರುವುದರಿಂದ ಭಾಗೇಶ ಮಾನೆ ಮುಚಳಂಬ ಗ್ರಾಮದಲ್ಲಿ ತನ್ನ ಸಂಬಂಧಿಕರ ಮನೆಗೆ ಆಗಮಿಸಿದ್ದು, ಮಧ್ಯಾಹ್ನ ಐದು ಜನ ಸ್ನೇಹಿತರೊಂದಿಗೆ ಗ್ರಾಮದ ಸಮೀಪದ ಬಾವಿಯೊಂದರಲ್ಲಿ ಈಜಲು ಹೋಗಿದ್ದರು.
ಈಜಲು ಬಾರದ ಓರ್ವ ಬಾಲಕ ನೀರಿಗೆ ಇಳಿದಿದ್ದಾನೆ, ಈಜು ಬಾರದಕ್ಕೆ ಬಾಲಕ ಮುಳುಗುತ್ತಿರುವುದನ್ನು ಕಂಡು ಆತನನ್ನು ರಕ್ಷಿಸಲು ಇನ್ನೊಬ್ಬ ಬಾಲಕ ಬಾವಿಗೆ ಜಿಗಿದಿದ್ದಾನೆ. ಈ ವೇಳೆ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಠಾಳ ಸಿಪಿಐ ಕೃಷ್ಣಕುಮಾರ್ ಪಾಟೀಲ್, ಬಸವಕಲ್ಯಾಣ ಗ್ರಾಮೀಣ ಠಾಣೆಯ ಪಿಎಸ್‌ಐ ನಾಗೇಂದ್ರ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರ ನೆರವಿನಿಂದ ಮೃತದೇಹ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.