ಬೆಂಗಳೂರು: ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯವಲಯದ ಆಸ್ಪತ್ರೆಗಳಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆಯಡಿ ಭರ್ತಿ ಮಾಡುವ ಬಗ್ಗೆ ಆದೇಶವನ್ನು ಹೊರಡಿಸಿದೆ. ಶೇ 80ರಷ್ಟು ಖಾಲಿ ಹುದ್ದೆಗಳ ಪೈಕಿ ಶೇ 40ರಷ್ಟನ್ನು ಷರತ್ತುಗಳ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಪ್ರದೀಪ್ ಕುಮಾರ್ ಬಿ. ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ. ಸರ್ಕಾರದ ಆದೇಶ ಮತ್ತು ಆಯುಕ್ತಾಲಯದ ಕಡತಗಳನ್ನು ಉಲ್ಲೇಖಿಸಲಾಗಿದೆ.
2019-20ನೇ ಸಾಲಿಗೆ ಆಸ್ಪತ್ರೆಗಳಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳಲ್ಲಿ ಶೇ 30ರಷ್ಟು ನಾನ್-ಕ್ಲಿನಿಕಲ್ ಹಾಗೂ ಶೇ 45ರಷ್ಟು ಗ್ರೂಪ್-ಡಿ ಹುದ್ದೆಗಳನ್ನು ಒಟ್ಟಾರೆಯಾಗಿ ಶೇ.75 ಮೀರದಂತೆ ಈ ಹಿಂದಿನ ಟೆಂಡರ್ ನಿಯಮಗಳನ್ನು ಪಾಲಿಸಿಕೊಂಡು ಹಾಗೂ ಹೊರಗುತ್ತಿಗೆ ಸಂಪನ್ಮೂಲದಡಿ ಟೆಂಡರ್ ಕರೆಯಲು ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಲಾಗಿತ್ತು.
ದಿನಾಂಕ 09.01.2025ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯವಲಯದ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ರೋಗಿಗಳ ಹಿತದೃಷ್ಟಿಯಿಂದ ಆಸ್ಪತ್ರೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಸಾರ್ವಜನಿಕರಿಗೆ ಹೆಚ್ಚಿನ/ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ಗ್ರೂಪ್-ಡಿ ಖಾಲಿ ಹುದ್ದೆಗಳಿಗೆ ಎದುರಾಗಿ ಪಡೆದುಕೊಳ್ಳುತ್ತಿರುವ ಶೇ 75ರಷ್ಟರ ಬದಲಿಗೆ ಶೇ 100 ರಷ್ಟು ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಬಗ್ಗೆ ಚರ್ಚಿಸಲಾಗಿತ್ತು.
ಪ್ರಸ್ತುತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯವಲಯದ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿನ ಗ್ರೂಪ್-ಡಿ ಹುದ್ದೆಗಳ ವಿವರ. ಒಟ್ಟು ಮಂಜೂರಾಗಿರುವ ಹುದ್ದೆಗಳು 6770. ಕಾರ್ಯ ನಿರತ ಹುದ್ದೆಗಳು 1065 ಮತ್ತು ಖಾಲಿ ಇರುವ ಹುದ್ದೆಗಳು 5705 ಆಗಿದೆ.
ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಲಿ ಖಾಲಿ ಇರುವ ಗ್ರೂಪ್ -ಡಿ ಹುದ್ದೆಗಳಿಗೆ ಎದುರಾಗಿ ಶೇ 75 ರಷ್ಟು ಹುದ್ದೆಗಳ ಬದಲಾಗಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಮೂಲಕ ಒದಗಿಸಿಕೊಳ್ಳಲಾಗುತ್ತಿರುವ ಗ್ರೂಪ್- ಡಿ ಹಾಗೂ ನಾನ್ ಕ್ಲಿನಿಕಲ್ ಸೇವೆಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಆಸ್ಪತ್ರೆಗಳಲ್ಲಿನ ಖಾಲಿ ಹುದ್ದೆಗಳ ಶೇ 100 ರಷ್ಟು ಪೂರ್ಣ ಪ್ರಮಾಣದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಲು ಕೋರಲಾಗಿತ್ತು.
ಈ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ ಆದೇಶವನ್ನು ಹೊರಡಿಸಿದೆ. 2025-26ನೇ ಸಾಲಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ರಾಜ್ಯವಲಯದ ಆಸ್ಪತ್ರೆಗಳಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳ ಪೈಕಿ ಶೇಕಡ 80 ರಷ್ಟು ಹುದ್ದೆಗಳನ್ನು ಮಾತ್ರ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಷರತ್ತುಗಳಿಗೊಳಪಟ್ಟು ಅನುಮತಿ ನೀಡಿದೆ.