Home ಸಂಪಾದಕೀಯ ಮೊದಲು ಶಿಕ್ಷಕರ ವರ್ಗಾವಣೆ ಆಮೇಲೆ ಹೊಸ ನೇಮಕ

ಮೊದಲು ಶಿಕ್ಷಕರ ವರ್ಗಾವಣೆ ಆಮೇಲೆ ಹೊಸ ನೇಮಕ

0

ಸಂಯುಕ್ತ ಕರ್ನಾಟಕ ದಿನಪತ್ರಿಕೆ ಗುರುವಾರದ ಸಂಪಾದಕೀಯ

ರಾಜ್ಯದಲ್ಲಿ ಶಿಕ್ಷಕರ ಬರ ಹಾಗೂ ಪ್ರವಾಹ ಎರಡೂ ಇದೆ. 6529 ಶಾಲೆಗಳಲ್ಲಿ ಏಕೋಪಾಧ್ಯಾಯರಿದ್ದಾರೆ. ಪ್ರತಿ 30 ವಿದ್ಯಾರ್ಥಿಗೆ ಒಬ್ಬ ಶಿಕ್ಷಕ ಎಂದು ನಿಯಮ ಹೇಳುತ್ತದೆ. ನಗರಗಳಲ್ಲಿ ಸರಾಸರಿ 20 ಮಕ್ಕಳಿಗೆ ಒಬ್ಬರು ಶಿಕ್ಷಕರಿದ್ದಾರೆ. ಹಳ್ಳಿ ಮೇಷ್ಟ್ರಾಗಲು ಯಾರೂ ಬಯಸುವುದಿಲ್ಲ. ವರ್ಗಾವಣೆ ತಪ್ಪಿಸಿಕೊಳ್ಳಲು ಪ್ರತಿಯೊಬ್ಬ ಶಿಕ್ಷಕರು ವೈದ್ಯಕೀಯ ಕಾರಣಗಳನ್ನು ಕೊಡುತ್ತಾರೆ.

ಸಾಮಾನ್ಯವಾಗಿ ಗಂಡ-ಹೆಂಡತಿ ಶಿಕ್ಷಕರಾಗಿರುತ್ತಾರೆ. ಅದರಿಂದ ಅವರನ್ನು ಒಂದೇ ಕಡೆ ನೇಮಿಸಬೇಕು. ಬಹುತೇಕ ಶಿಕ್ಷಕರು ತಮ್ಮ ತಂದೆತಾಯಿ ಹೃದ್ರೋಗಿಗಳು. ಅವರಿಗೆ ಜಯದೇವದಲ್ಲೇ ಚಿಕಿತ್ಸೆಕೊಡಿಸಬೇಕು ಎನ್ನುತ್ತಾರೆ. ಹೀಗಾಗಿ ನಗರ ಬಿಟ್ಟು ಹೋಗದ ಶಿಕ್ಷಕರೇ ಹೆಚ್ಚು. ಇನ್ನು ಹಳ್ಳಿಯಲ್ಲಿರುವ ಶಿಕ್ಷಕರು ಅಲ್ಲಿ ಇರುವುದೇ ಇಲ್ಲ. ಸಮೀಪದ ಪಟ್ಟಣದಲ್ಲೇ ವಾಸ. ಶಿಕ್ಷಕರ ವರ್ಗಾವಣೆಯಲ್ಲಿರುವಷ್ಟು ಲಂಚದ ಹಾವಳಿ ಬೇರೆ ಎಲ್ಲೂ ಇಲ್ಲ. ವರ್ಗಾವಣೆ ಪಡೆಯುವ ಇಬ್ಬರೂ ಲಂಚ ಕೊಡುತ್ತಾರೆ.

ರಾಜ್ಯದಲ್ಲಿ ಒಟ್ಟು 1.99 ಲಕ್ಷ ಶಿಕ್ಷಕರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. 55 ಸಾವಿರ ಅತಿಥಿ ಶಿಕ್ಷಕರಿದ್ದಾರೆ. ಈಗ 15 ಸಾವಿರ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಆಗಬೇಕು. ಲಂಚ ಅಥವಾ ರಾಜಕೀಯ ಪ್ರಭಾವ ಬಳಸಿ ಬಹುತೇಕ ಶಿಕ್ಷಕರು ಇದ್ದ ಜಾಗದಿಂದ ಕದಲುವುದಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಒಬ್ಬರ ಆಯುಕ್ತರ ಕೈಯಲ್ಲಿ ನಿರ್ವಹಣೆ ಕಷ್ಟ. ಮತ್ತೊಬ್ಬರು ವರ್ಗಾವಣೆಗೇ ನೇಮಕಗೊಂಡರೆ ಇಡೀ ವರ್ಷ ಅವರಿಗೆ ಕೆಲಸ ಇದ್ದೇ ಇರುತ್ತದೆ.

ಅಲ್ಲದೆ ಆ ಹುದ್ದೆಗೆ ಬರಲು ತೀವ್ರ ಪೈಪೋಟಿಯಂತೂ ಇದ್ದೇ ಇರುತ್ತದೆ. ಭಾರತೀಯ ವಾಯಪಡೆಯೂ ಸೇರಿದಂತೆ ಹಲವು ಕಡೆ ಬಹಳ ಕಟ್ಟುನಿಟ್ಟಾದ ವರ್ಗಾವಣೆ ನೀತಿ ಪಾಲನೆಯಾಗುತ್ತಿದೆ. ಅಲ್ಲಿ ಒಂದೂ ವರ್ಗಾವಣೆ ಬದಲಾಗುವುದಿಲ್ಲ. ನಮ್ಮಲ್ಲಿ ಶಿಕ್ಷಣ ಇಲಾಖೆಯಲ್ಲಿ ಆಗುವಷ್ಟು ಬದಲಾವಣೆ ಬೇರೆ ಯಾವ ಇಲಾಖೆಯಲ್ಲೂ ಇಲ್ಲ ಎಂದು ಧಾರಾಳವಾಗಿ ಹೇಳಬಹುದು.

ಹಿಂದೆ ಶಿಕ್ಷಣ ಸಚಿವರಾಗಿ ಗೋವಿಂದೇಗೌಡರಿದ್ದಾಗ ಕೌನ್ಸೆಲಿಂಗ್ ಮೂಲಕ ಶಿಕ್ಷಕರ ವರ್ಗಾವಣೆ ಸಾಮೂಹಿಕ ನಡೆಯಿತು. ಶಿಕ್ಷಕರೇ ತಮಗೆ ಬೇಕಾದ ಶಾಲೆಯನ್ನು ಖಾಲಿ ಇರುವ ಜಾಗ ನೋಡಿಕೊಂಡು ಆಯ್ಕೆ ಮಾಡಿಕೊಳ್ಳುವ ಅವಕಾಶ ಇತ್ತು. ಅಲ್ಲದೆ 1 ಲಕ್ಷ ಶಿಕ್ಷಕರ ನೇಮಕಾತಿ ಕೂಡ ಅತ್ಯಂತ ಪಾರದರ್ಶಕವಾಗಿ ನಡೆಯಿತು. ಈಗಲೂ ಅದೇ ಪದ್ಧತಿ ಅನುಸರಿಸಲು ಅವಕಾಶವಿದೆ. ಐಎಎಸ್ ಕೂಡ ತನ್ನ ಸೇವೆಯನ್ನು ಗ್ರಾಮೀಣ ಭಾಗದಲ್ಲಿ ಆರಂಭಿಸಿ ಕೊನೆಗೆ ವಿಧಾನಸೌಧಕ್ಕೆ ಬರುತ್ತಾರೆ.

ಕೆಲವು ಶಿಕ್ಷಕರು ನಗರದಲ್ಲೇ ಕೆಲಸಕ್ಕೆ ಸೇರಿ ನಗರದಲ್ಲೇ ನಿವೃತ್ತರಾಗುತ್ತಾರೆ. ಅದೇರೀತಿ ಕೆಲವು ಶಿಕ್ಷಕರು ಹೆಚ್ಚು ವರ್ಗಾವಣೆ ಕಾಣುತ್ತಾರೆ. ಹೀಗಾಗಿ ಗ್ರಾಮಗಳಲ್ಲಿ ಶಿಕ್ಷಕರ ಕೊರತೆ, ನಗರಗಳಲ್ಲಿ ಹೆಚ್ಚಿನ ಶಿಕ್ಷಕರು ಇರುವುದು ಕಂಡು ಬರುತ್ತದೆ. ಮೊದಲು ಈಗ ಇರುವ ಶಿಕ್ಷಕರನ್ನು ನಿರ್ದಾಕ್ಷಿಣ್ಯವಾಗಿ ವರ್ಗಾಯಿಸಬೇಕು. ಆಮೇಲೆ ಉಳಿದ ಕಡೆ ಅತಿಥಿ ಶಿಕ್ಷಕರನ್ನು ನೇಮಿಸಬೇಕು.

ಉಳಿದ ಹುದ್ದೆಗಳಿಗೆ ನೇಮಕಾತಿ ಕೊನೆಯಲ್ಲಿ ನಡೆಯಬೇಕು. ಮೊದಲು ಗ್ರಾಮದ ಎಲ್ಲ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಬೇಕು. ಆಮೇಲೆ ಅವರ ಸೇವಾ ಹಿರಿತನದ ಆಧಾರದ ಮೇಲೆ ನಗರಗಳಿಗೆ ನೇಮಿಸಬೇಕು. ಆಗ ಕೊರತೆ ನಿವಾರಣೆಯಾಗುವುದಲ್ಲದೆ ವರ್ಗಾವಣೆ ಪ್ರಕ್ರಿಯೆ ಕೂಡ ಮುಕ್ತಾಯಗೊಳ್ಳುತ್ತದೆ.

ಗ್ರಾಮೀಣ ಶಾಲೆಗಳಿಗೆ ಹೋಗಲು ಶಿಕ್ಷಕರು ಹಿಂಜರಿಯಲು ಪ್ರಮುಖ ಕಾರಣ ಅವರ ಮಕ್ಕಳು ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿರುತ್ತಾರೆ. ಅವರಿಗೆ ತಮ್ಮ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವುದು ಬೇಕಿರುವುದಿಲ್ಲ. ಅವರ ಸಂಬಳಕ್ಕಾಗಿ ದುಡಿಯುತ್ತಾರೆ ಅಷ್ಟೆ. ಕೆಲವೇ ಕೆಲವು ಶಿಕ್ಷಕರು ಮುತುವರ್ಜಿವಹಿಸಿ ಪಾಠ ಮಾಡುತ್ತಾರೆ. ಅವರು ವರ್ಗಾವಣೆಗೆ ಹೆದರುವುದಿಲ್ಲ.

ಸರ್ಕಾರಿ ಶಾಲೆ ಶಿಕ್ಷಣ ಮಟ್ಟ ಉತ್ತಮಗೊಂಡಲ್ಲಿ ಜನ ತಾವೇ ಶಾಲೆ ಹುಡುಕಿಕೊಂಡು ಬರುತ್ತಾರೆ. ಈಗ ದಾನಿಗಳು ತಾವು ಓದಿದ ಶಾಲೆಗೆ ಹೊಸ ಕಟ್ಟಡ ಕಟ್ಟಿಸಿಕೊಡುವ ಕೆಲಸ ಕೈಗೊಂಡಿದ್ದಾರೆ. ಇದು ಉತ್ತಮ ಲಕ್ಷಣ. ಅದೇರೀತಿ ಶಿಕ್ಷಕರು ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಬರುವುದರಲ್ಲಿ ಸಂದೇಹವಿಲ್ಲ.

ಗ್ರಾಮೀಣ ಶಾಲೆ ಎಂದು ಮೂಗು ಮುರಿಯುವ ಕಾಲ ಈಗ ಇಲ್ಲ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಗಳಿಗೆ ಭೇಟಿಕೊಟ್ಟು ಪರಿಶೀಲಿಸುವ ಹೊಸ ಪದ್ಧತಿ ಬೆಳೆದಿದೆ.ಇದರಿಂದ ಶಾಲೆಯ ಫಲಿತಾಂಶ ಅಧಿಕಗೊಳ್ಳುತ್ತದೆ. ಶಿಕ್ಷಕರ ವರ್ಗಾವಣೆಯಲ್ಲಿ ರಾಜಕಾರಣಿಗಳು ಮೂಗು ತೂರಿಸುವುದನ್ನು ಮೊದಲು ಕೈಬಿಡಬೇಕು. ಸಮಾಜನ ಗಣ್ಯರು ಕೂಡ ಶಾಲೆ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಉತ್ತಮ ಶಿಕ್ಷಣ ವ್ಯವಸ್ಥೆ ಇಲ್ಲ ಫಲಿತಾಂಶ ಕೂಡ ಕಳಪೆಯಾಗಿರುವುದು ಸಹಜ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾವ ಯಾವ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಅಲ್ಲಿಯ ಎಲ್ಲ ಶಿಕ್ಷಕರ ವಾರ್ಷಿಕ ಬಡ್ತಿ ನಿಲ್ಲಿಸುವುದು ಅಗತ್ಯ. ಶಿಕ್ಷಕರು ಪಾಠ ಮಾಡಿದ್ದರೆ ಒಬ್ಬನಾದರೂ ಪಾಸಾಗಬೇಕು. ಒಬ್ಬನೂ ಪಾಸಾಗಿಲ್ಲ ಎಂದರೆ ಶಿಕ್ಷಕರ ಸಾಧನೆ ಶೂನ್ಯ ಎಂದೇ ಅರ್ಥ.

NO COMMENTS

LEAVE A REPLY

Please enter your comment!
Please enter your name here

Exit mobile version