ಬಂದೂಕಿನಲ್ಲಿ 6 ರಂಧ್ರಗಳಿರುತ್ತವೆ. 6 ಬುಲೆಟ್‌ಗೆ 6 ಛೇಂಬರ್. ಒಂದೊಂದೂ ತನ್ನನ್ನು ತಾನು ಸುಟ್ಟುಕೊಳ್ಳುತ್ತಾ ಅನ್ಯರನ್ನು ದಹಿಸಲು ಮುನ್ನುಗುವುದು ಬುಲೆಟ್‌ನ ಹುಟ್ಟುಗುಣ. ಅದೇ ರೀತಿ ಕ್ಯಾರೆಕ್ಟರ್‌ಗಳನ್ನು ಸೃಷ್ಟಿ ಮಾಡಿ ತಮ್ಮ ಸಿನಿಮಾದಲ್ಲಿ ತೋರಿಸಿರುವುದಾಗಿ ಹೇಳಿದ್ದಾರೆ ನಿರ್ದೇಶಕ ಮಹೇಶ್ ರವಿಕುಮಾರ್.
ಶುಕ್ರವಾರ ಚಿತ್ರಮಂದಿರಕ್ಕೆ ‘ಬಂದೂಕ್’ ಬರುತ್ತಿದೆ. ಸಿನಿಮಾಗೆ ‘ಬಂದೂಕ್’ ಎಂದು ಏಕೆ ಹೆಸರಿಟ್ಟಿದ್ದೀರಿ? ಎಂದು ಪ್ರಶ್ನಿಸಿದಾಗ ಈ ರೀತಿಯ ವಿವರಣೆ ಕೊಟ್ಟರು. ಇವರ ಬಂದೂಕಿನಲ್ಲಿ 5ದೇ ಛೇಂಬರ್‌ಗಳಿವೆ. ಆ 5 ಎಲ್ಲಾ ಪಾತ್ರಗಳನ್ನೂ ಸಂಧಿಸಿ ಮಾಡಬೇಕಾದ ಅನಾಹುತ ಮಾಡಿ ಕೈಬಿಡುತ್ತದೆಯಂತೆ ಎಂಬುದು ನಿರ್ದೇಶಕರ ಮಾತು.
ಚೊಚ್ಚಲ ಪ್ರಯತ್ನ: ಈ ಸಿನಿಮಾದ ಟ್ರೇಲರ್ ಕೆಲವು ದಿನಗಳ ಹಿಂದೆ ರಿಲೀಸ್ ಮಾಡಲಾಗಿದೆ. ಜುಲೈ 25ರಂದು ಚಿತ್ರ ಬಿಡುಗಡೆಯಾಗುತ್ತಿದೆ. ‘ಬಂದೂಕ್’ ಎಂಬ ಹಳೆ ಹೆಸರಿದ್ದರೂ ಸಿನಿಮಾದಲ್ಲಿ ಬಹುತೇಕ ಹೊಸಬರೇ ಕೆಲಸ ಮಾಡಿದ್ದಾರೆ. ಸೌಂಡ್ ಜೋರಾಗಿ ಮಾಡಬೇಕೆನ್ನುವುದು ಎಲ್ಲರ ಹುಮ್ಮಸ್ಸು.
ಗನ್ನು, ಬುಲೆಟ್ಸು, ಬ್ಲಡ್ಡು ಎಂದ ಮೇಲೆ ಸಿನಿಮಾ ಕ್ರೈಂ ಮಾದರಿಯಲ್ಲೇ ಇರಬಹುದು ಎಂಬುದನ್ನು ಯಾರು ಬೇಕಾದರೂ ಅಂದಾಜಿಸಬಹುದು. ಆ ನಂಬಿಕೆಯನ್ನು ನಿರ್ದೇಶಕರೂ ಹುಸಿಗೊಳಿಸಲಿಲ್ಲ. ಜೊತೆಗೆ ಆ್ಯಕ್ಷನ್ ಕೂಡಾ ಸೇರಿಕೊಂಡಿದೆಯಂತೆ.
ಶ್ರೀನಿವಾಸ ಮೂರ್ತಿ ಮತ್ತು ಚಂದ್ರಶೇಖರ್ ‘ಬಂದೂಕ್’ ಚಿತ್ರದ ನಿರ್ಮಾಪಕರು. ಹೊನ್ನಾವರ, ಉಡುಪಿ, ಮಲ್ಪೆ, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆಸಲಾಗಿದೆ. ಪಾರ್ಥ ಎಂಬ ನವ ನಟ ಈ ಸಿನಿಮಾದ ಮುಖ್ಯಪಾತ್ರಧಾರಿ.
ಅವರಿಗೆ ಹೆಗಲು ಕೊಟ್ಟು ಬಾಲಾಜಿ ಮನೋಹರ್, ಶ್ವೇತಾ ಪ್ರಸಾದ್, ಗೋಪಾಲಕೃಷ್ಣ ದೇಶಪಾಂಡೆ, ಶಂಕರ ಅಶ್ವಥ್, ಹರೀಶ್ ರೈ ಮುನ್ನಡೆದಿದ್ದಾರೆ. ‘ಬಂದೂಕ್’ ನೋಡಬೇಕುನ್ನುವವರು ಶುಕ್ರವಾರ ಚಿತ್ರಮಂದಿರತ್ತ ಹೆಜ್ಜೆ ಹಾಕಿ.