Home ತಾಜಾ ಸುದ್ದಿ ನಮ್ಮ ಮೆಟ್ರೋ ಹಳದಿ ಲೈನ್ ಅಪ್‌ಡೇಟ್‌:ಟೆಕ್ಕಿಗಳಿಗೆ ಸಿಹಿಸುದ್ದಿ

ನಮ್ಮ ಮೆಟ್ರೋ ಹಳದಿ ಲೈನ್ ಅಪ್‌ಡೇಟ್‌:ಟೆಕ್ಕಿಗಳಿಗೆ ಸಿಹಿಸುದ್ದಿ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯ‌ರ್‌ಗಳಿಗೆ ಬಿಎಂಆರ್‌ಸಿಲ್‌ ಸಿಹಿಸುದ್ದಿ ನೀಡಿದೆ. ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವಿನ ಮೆಟ್ರೋ ಸಂಚಾರದ ಕುರಿತು ಅಪ್‌ಡೇಟ್‌ ನೀಡಿದೆ. ನಗರದ ಬಹುನಿರೀಕ್ಷಿತ ಮಾರ್ಗ ಇದಾಗಿದ್ದು, ಈ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕಾಗಿ ಜನರು ಕಾದು ಕುಳಿತಿದ್ದಾರೆ.

ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ ಆರ್. ವಿ. ರಸ್ತೆ- ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದ 18.8 ಕಿ.ಮೀ ಉದ್ದದ ಮಾರ್ಗದಲ್ಲಿ ಜುಲೈ 15, 16ರಂದು ನಮ್ಮ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರದ ಅಂತಿಮ ಪರೀಕ್ಷೆಗಳು ನಡೆಯಲಿವೆ.

ಈ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಸುಮಾರು ಒಂದು ತಿಂಗಳಿನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಈ ಮೆಟ್ರೋ ಮಾರ್ಗ ಐಟಿ ಕಂಪನಿಗಳು ಹೆಚ್ಚಿರುವ ಎಲೆಕ್ಟ್ರಾನಿಕ್‌ ಸಿಟಿಯನ್ನು ನಗರಕ್ಕೆ ಸಂಪರ್ಕಿಸಲಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಸುಮಾರು 3 ಲಕ್ಷ ಪ್ರಯಾಣಿಕರು ಸಂಚಾರ ನಡೆಸಬಹುದು ಎಂದು ಅಂದಾಜಿಸಲಾಗಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 2024ರ ಡಿಸೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರವನ್ನು ಪೂರ್ಣಗೊಳಿಸಿ 2025ರ ಜನವರಿಯಲ್ಲಿ ರೈಲು ಸಂಚಾರ ಆರಂಭಿಸಲಾಗುತ್ತದೆ ಎಂದು ಮೊದಲು ನಿರೀಕ್ಷೆ ಮಾಡಲಾಗಿದೆ. ಬಳಿಕ ಮೇ ತಿಂಗಳಿನಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ವರದಿಗಳು ಬಂದಿದ್ದವು. ಈಗ ಆಗಸ್ಟ್‌ನಲ್ಲಿ ರೈಲು ಸಂಚಾರ ಪ್ರಾರಂಭಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಈ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಆದರೆ ರೈಲುಗಳ ಕೊರತೆಯ ಕಾರಣ ಸಂಚಾರವನ್ನು ಇನ್ನೂ ಸಹ ಆರಂಭಿಸಿಲ್ಲ. ಈ ಮಾರ್ಗದಲ್ಲಿ ಸಂಚಾರ ನಡೆಸಲು 14 ರೈಲುಗಳು ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಇರುವ ರೈಲುಗಳನ್ನು ಬಳಕೆ ಮಾಡಿಕೊಂಡು ಪ್ರತಿ 15 ನಿಮಿಷಕ್ಕೆ ಒಂದು ರೈಲು ಓಡಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.

ಆರ್. ವಿ. ರಸ್ತೆ- ಬೊಮ್ಮಸಂದ್ರ ನಮ್ಮ ಮೆಟ್ರೋ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್‌ ಮೂಲಕ ಈ ಮೆಟ್ರೋ ರೈಲು ಸಂಚಾರವನ್ನು ನಡೆಸಲಿದೆ. ಈಗಾಗಲೇ ಫ್ಲೈ ಓವರ್‌ನ ಒಂದು ಕಡೆ ವಾಹನಗಳ ಸಂಚಾರ ಆರಂಭವಾಗಿದೆ. ಮೆಟ್ರೋ ರೈಲು ಆರಂಭವಾದರೆ ಬನಶಂಕರಿ, ಜಯದೇವ, ಸಿಲ್ಕ್ ಬೋರ್ಡ್‌ ಮಾರ್ಗದಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಸದ್ಯ ಬೆಂಗಳೂರು ನಗರದಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳನ್ನು ಓಡಿಸುವುದು ಮತ್ತೊಂದು ವಿಶೇಷತೆಯಾಗಿದೆ. ಈ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಂಡರೆ ನಗರದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರ್. ವಿ. ರಸ್ತೆ- ಬೊಮ್ಮಸಂದ್ರ ಮೆಟ್ರೋ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್, ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್‌, ಬಿಟಿಎಂ ಲೇಔಟ್, ಜಯದೇವ, ರಾಗಿಗುಡ್ಡ ಮತ್ತು ಆರ್. ವಿ. ರಸ್ತೆ ನಿಲ್ದಾಣಗಳಿವೆ.

ಬಿಎಂಆರ್‌ಸಿಎಲ್‌ ಮತ್ತು ವಿವಿಧ ತಂಡದ ಅಧಿಕಾರಿಗಳು ಈಗಾಗಲೇ ಆರ್. ವಿ. ರಸ್ತೆ- ಬೊಮ್ಮಸಂದ್ರ ಮಾರ್ಗದಲ್ಲಿ ರೈಲುಗಳ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರು ಅಂತಿಮ ಪರಿಶೀಲನೆಯನ್ನು ನಡೆಸಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆಯನ್ನು ನೀಡುವುದು ಬಾಕಿ ಇದೆ.

Exit mobile version