Home ನಮ್ಮ ಜಿಲ್ಲೆ ನಮ್ಮ ಮೆಟ್ರೋ ದರ ಏರಿಕೆ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಏರಿಕೆ

ನಮ್ಮ ಮೆಟ್ರೋ ದರ ಏರಿಕೆ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಏರಿಕೆ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಜನರ ಜೀವನಾಡಿ ಬಿಎಂಟಿಸಿ ಬಸ್ ಮತ್ತು ನಮ್ಮ ಮೆಟ್ರೋ. ಪ್ರಯಾಣಿಕರನ್ನು ಸೆಳೆಯುವ ವಿಚಾರದಲ್ಲಿ ಎರಡೂ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಆದರೆ ಸಂಪರ್ಕದ ವಿಚಾರದಲ್ಲಿ ಬಿಎಂಟಿಸಿ ಮುಂದಿದೆ. ಇದರಿಂದಾಗಿ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗಿದೆ.

ಮಾಹಿತಿಗಳ ಪ್ರಕಾರ ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ 2 ಲಕ್ಷದಷ್ಟು ಅಧಿಕವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ ಜನರು ಬಿಎಂಟಿಸಿ ಬಸ್‌ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ.

ಸುಮಾರು 40 ಲಕ್ಷ ಪ್ರಯಾಣಿಕರು ಬಿಎಂಟಿಸಿಯಲ್ಲಿ ಸಂಚಾರವನ್ನು ನಡೆಸುತ್ತಿದ್ದರು. ಮಾಸಿಕ ಆದಾಯ 6.90 ಕೋಟಿ ರೂ. ಇತ್ತು. ಆದರೆ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ 42 ಲಕ್ಷಕ್ಕೆ ಏರಿಕೆಯಾಗಿದೆ. ಮಾಸಿಕ ಆದಾಯ 7.25 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ.

ಬೆಂಗಳೂರು ನಗರದಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮಾತ್ರ ನಮ್ಮ ಮೆಟ್ರೋ ಸಂಚಾರವನ್ನು ನಡೆಸುತ್ತಿದೆ. ಪ್ರಯಾಣ ದರ ಏರಿಕೆ ಮಾಡಿದ ಬಳಿಕ ಜನರು ಬಿಎಂಆ‌ರ್‌ಸಿಎಲ್ ವಿರುದ್ಧ ಆಕ್ರೋವನ್ನು ಹೊರ ಹಾಕಿದ್ದರು. ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸಲಾಗಿತ್ತು. ದರ ಏರಿಕೆ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, ಅಂಕಿ ಸಂಖ್ಯೆಗಳಿಂದ ತಿಳಿದುಬಂದಿತ್ತು.

‘ಶಕ್ತಿ’ಯೋಜನೆ ಜಾರಿ ಬಳಿಕ ಬಿಎಂಟಿಸಿ ನಷ್ಟದಲ್ಲಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಆದರೆ ಈಗ ನಮ್ಮ ಮೆಟ್ರೋ ದರ ಏರಿಕೆ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ, ಆದಾಯ ಹೆಚ್ಚಳವಾಗಿದೆ ಎಂದು ತಿಳಿದುಬರುತ್ತಿದೆ. ಅಲ್ಲದೇ ಹೊಸ ಹೊಸ ಮಾರ್ಗದಲ್ಲಿಯೂ ಬಸ್ ಸಂಚಾರನ್ನು ಬಿಎಂಟಿಸಿ ಆರಂಭಿಸುತ್ತಿದೆ.

ನಮ್ಮ ಮೆಟ್ರೋದಲ್ಲಿ ಪ್ರತಿದಿನ ಸುಮಾರು 7 ಲಕ್ಷ ಜನರು ಸಂಚಾರವನ್ನು ನಡೆಸುತ್ತಾರೆ. ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಸಂಚಾರ ಆರಂಭವಾದರೆ ಇನ್ನೂ ಸುಮಾರು 3 ಲಕ್ಷ ಜನರು ಸಂಚಾರವನ್ನು ನಡೆಸುತ್ತಾರೆ ಎಂದು ಅಂದಾಜಿಸಲಾಗಿದೆ.

ಬಿಎಂಟಿಸಿ ಸುಮಾರು 6,500 ಬಸ್‌ಗಳನ್ನು ಹೊಂದಿದ್ದು, ಕಟ್ಟ ಕಡೆಯ ಪ್ರದೇಶಗಳ ಸಂಪರ್ಕಕ್ಕೆ ಅನುಕೂಲಕರವಾಗಿದೆ. ಆದರೆ ನಮ್ಮ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ಮತ್ತು ನಿಲ್ದಾಣದಿಂದ ಬೇರೆ ಕಡೆ ತೆರಳಲು ಬೇರೆ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಬೇಕಿದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಬಿಎಂಟಿಸಿ ಸಹ ಮೆಟ್ರೋ ಫೀಡರ್ ಸೇವೆಗಳನ್ನು ಪರಿಚಸಿದೆ. ಪ್ರಯಾಣದರ ಏರಿಕೆ ಬಳಿಕ ಮೆಟ್ರೋಗೆ ಲಾಭವಾಗುತ್ತಿದ್ದರೂ ಸಹ ಪ್ರಯಾಣಿಕರ ಸಂಖ್ಯೆ ಕುಸಿತವಾಗಿರುವುದು ತಿಳಿಯುತ್ತಿದೆ.

Exit mobile version