ಹುಬ್ಬಳ್ಳಿ : ಹಾಸನ, ತುಮಕೂರು, ದಾವಣಗೆರೆ ಸೇರಿದಂತೆ ಹಲವು ಕಡೆ ಹೃದಯಾಘಾತಕ್ಕೆ ಕಡಿಮೆ ವಯಸ್ಸಿನವರು ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲಿಯೇ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಇಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ನವಲಗುಂದ ತಾಲೂಕಿನ ಯಮನೂರು ಗ್ರಾಮದ ನಿವಾಸಿ ಫಕ್ಕೀರಪ್ಪ ಮಲ್ಲಪ್ಪ ಬಣಗಾರ (೪೫) ಸೋಮವಾರ ಸಂಜೆ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ಟಿವಿ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಇವರು ನಿತ್ಯ ಬೈಕಿನಲ್ಲಿ ಹೋಗಿ ಸ್ವ ಗ್ರಾಮಕ್ಕೆ ವಾಪಸಾಗುತ್ತಿದ್ದರು. ಸೋಮವಾರ ಸಂಜೆ ೫ ಗಂಟೆ ಮನೆಗೆ ಬಂದು ಊರಾಚೆ ಶೌಚಾಲಯಕ್ಕೆ ( ಬಯಲು ಶೌಚ) ತೆರಳಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ಸುಧಾರಿಸಿಕೊಂಡು ಬರುವಷ್ಟರಲ್ಲಿ ಸುಸ್ತಾಗಿದೆ. ಪತ್ನಿಗೆ ಮೊಬೈಲ್ ಕರೆ ಎದೆ ನೋವಿನ ವಿಷಯ ತಿಳಿಸಿದ್ದಾರೆ. ಪತ್ನಿ, ಕುಟುಂಬಸ್ಥರು ಸ್ಥಳಕ್ಕೆ ತೆರಳಿ ನವಲಗುಂದಕ್ಕೆ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ಅವರ ಸಹೋದರ ಸುಭಾಸ ಬಣಗಾರ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದರು.
ಕುಟುಂಬಕ್ಕೆ ಇವರೇ ಆಧಾರವಾಗಿದ್ದರು. ತಾಯಿ, ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗ ಇದ್ದಾನೆ. ಚಿಕ್ಕ ಮನೆ ಇದೆ. ಜಮೀನೂ ಇಲ್ಲ ಎಂದು ಕಣ್ಣೀರು ಹಾಕಿದರು.
ಅದೇ ರೀತಿ ನವಲಗುಂದ ಪಟ್ಟಣದ ಸಿದ್ದಾಪುರ ಓಣಿಯ ನಿವಾಸಿ ಮುತ್ತು ಶಂಕರಪ್ಪ ಪೂಜಾರ (೪೪) ಅವರು ಮಂಗಳವಾರ ಬೆಳಗಿನ ಜಾವ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಅವರಿಗೆ ತಾಯಿ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.
ಮುತ್ತು ಅವರು ಪೂಜಾರ ಅವರು ಪಟ್ಟಣದಲ್ಲಿ ಗಿರಣಿ ನಡೆಸುತ್ತಿದ್ದು, ಸೋಮವಾರ ರಾತ್ರಿ ೯ ರವರೆಗೆ ಹಿಟ್ಟಿನ ಗಿರಣಿ ನಡೆಸಿದ್ದಾರೆ. ಬಳಿಕ ಮನೆಗೆ ಬಂದು ಕೈಕಾಲು ಮುಖ ತೊಳೆದು ಊಟ ಮಾಡಿದ್ದಾರೆ. ಬಳಿಕ ತಾಯಿ, ಮಕ್ಕಳು, ಪತ್ನಿಯ ಜೊತೆ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಮಾತನಾಡಿಕೊಂಡಿದ್ದರು. ಬಳಿಕ ರಾತ್ರಿ ೧೧ ರ ಸುಮಾರು ಮಲಗಿದ್ದರಂತೆ. ಬೆಳಿಗ್ಗೆ ೫.೩೦ ರ ಸುಮಾರಿಗೆ ಅವರ ಪತ್ನಿ ಎಬ್ಬಿಸಿದಾಗ ಮುತ್ತು ಅವರು ಎದ್ದಿಲ್ಲ. ಗಾಬರಿಗೊಂಡು ಪದೇ ಪದೇ ಎಬ್ಬಿಸಲು ಕುಟುಂಬದ ಸದಸ್ಯರು ಮುಂದಾದಾಗ ಅವರು ಹೃದಯಾಘಾತದಿಂದ ಮೃತಪಟ್ಟಿರುವುದು ಗೊತ್ತಾಗಿದೆ.
ಯಾವುದೇ ಒತ್ತಡಗಳಿರಲಿಲ್ಲ. ತಾವಾಯಿತು ತಮ್ಮ ದುಡಿಮೆಯಾಯಿತು. ಆರೋಗ್ಯ ಸಮಸ್ಯೆಯೂ ಇರಲಿಲ್ಲ. ಯಾವ ಇತರೆ ಅಭ್ಯಾಸಗಳೂ ಇರಲಿಲ್ಲ. ನಾವು ಪಟ್ಟಣದ ಲಾಲಗುಡಿ ದೇವಸ್ಥಾನದ ಪೂಜಾರ ಮನೆತನದವರು. ಆದರೆ, ದೇವರು ಈ ರೀತಿ ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿಬಿಟ್ಟ ಎಂದು ಅವರ ಸಹೋದರ ಮಾರುತಿ ಪೂಜಾರ ದುಃಖ ವ್ಯಕ್ತಪಡಿಸಿದರು.
ರಾಜ್ಯದ ಇತರೆ ಜಿಲ್ಲೆಗಳಲ್ಲಿ ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿರುವುದನ್ನು ಕೇಳಿದ್ದ ಜಿಲ್ಲೆಯ ಜನಕ್ಕೆ ಈಗ ಧಾರವಾಡ ಜಿಲ್ಲೆಯಲ್ಲಿಯೇ ಒಂದೇ ರಾತ್ರಿ ಒಬ್ಬರು, ಬೆಳಿಗ್ಗೆ ಒಬ್ಬರಂತೆ ಇಬ್ಬರು ಹೃದಯಾಘಾತಕ್ಕೆ ಬಲಿಯಾಗಿರುವುದು ಆತಂಕ ಸೃಷ್ಟಿಸಿದೆ.