ಇದ್ದಂತೆ-ಇದ್ದು ಹೋದವರು, ಆದೇಶ ಆಜ್ಞೆಗಳನ್ನು ನೀಡಿ ಮೆರೆದವರು, ಉಪದೇಶ ನೀಡಿ ಪಂಡಿತರಾದವರು ಅನೇಕರು. ಆದರೆ ನುಡಿದಂತೆ ನಡೆದವರು, ಬರೆದಂತೆ ಬದುಕಿದವರು ಅತೀ ವಿರಳ. ಸಮಾಜ ಸುಧಾರಣೆಗೆ ತಾವೇ ಉದಾಹರಣೆಯಾಗಿ ಬದುಕಿ ಬಾಳಿದ ಮಹಾತ್ಮರು, ಶರಣರು ಸಂತರು, ಪ್ರವಾದಿಗಳು ಎಲ್ಲ ಧರ್ಮಗಳಲ್ಲಿದ್ದಾರೆ.
ಬೆಲ್ಲ ತಿನ್ನಬಾರದು ಎಂದು ಬೋಧಿಸುವಾಗ ದಾರ್ಶನಿಕರೊಬ್ಬರು ಮೊದಲು ತಾವು ಬೆಲ್ಲ ತಿನ್ನುವುದನ್ನು ತ್ಯಜಿಸಿದರಂತೆ. ಆಗ ಅವರ ಉಪದೇಶ ಉಪದೇಶಾಮೃತವಾಯಿತು. ಅಂತೆಯೇ ಅಂಥವರ ನಿದರ್ಶನಾತ್ಮಕ ಜೀವನವು ಸಾವಿರಾರು ಅನುಯಾಯಿಗಳಿಗೆ ಮಾರ್ಗದರ್ಶಿಯಾಯಿತು. ಸುಧಾರಣೆ ಬೇಕೆನ್ನುವವರು ಉದಾಹರಣೆ ಆಗಬೇಕೆಂಬ ಸಂದೇಶ ನೀಡಿದರು.
ಔಷಧವು ರೋಗವನ್ನು ಗುಣಪಡಿಸುವಂತೆ, ಉಪದೇಶವು ಸಮಾಜದ ರೋಗಗಳನ್ನು ಗುಣಪಡಿಸುವುದು. ಕುರಾನಿನ ೩೧ನೆಯ ಅಧ್ಯಾಯ ಲುಕ್ಮಾನ ಎಂದಿದೆ. ಲುಕ್ಮಾನ ಅವರು ಪ್ರವಾದಿಯಾಗಿರಲಿಲ್ಲ. ಆದರೆ, ಅವರು ತಮ್ಮ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿಯಾಗಿದ್ದರು. ಅವರು ಇಸ್ಲಾಂ ಧರ್ಮ ಹುಟ್ಟುವ ಮೊದಲೇ ಆಗಿಹೋದ ದಾರ್ಶನಿಕರು. ಅವರು ತಮ್ಮ ಮಗನಿಗೆ ಮಾಡಿದ ಉಪದೇಶವನ್ನು ಕುರಾನಿನಲ್ಲಿ ಪ್ರಸ್ತಾಪಿಸಲಾಗಿದೆ (೩೧:೬-೧೯); ಓ ಮಗನೆ, ದೇವರಿಗೆ ಎಲ್ಲವೂ ತಿಳಿದಿದೆ. ಅವನಿಗೆ ಗುಪ್ತವಾದುದು ಬಹಿರಂಗವಾದುದು ಎಲ್ಲವೂ ಗೊತ್ತಿದೆ. ಈ ನಂಬಿಕೆಯಿಂದ ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೋ. ಶಿಸ್ತಿನ ಜೀವನ ಅಳವಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಇತರರ ಬಗ್ಗೆ ಎಚ್ಚರದಿಂದಿರು. ಒಳ್ಳೆಯ ನಡತೆಯುಳ್ಳವನಾಗಿ, ಕೆಟ್ಟ ನಡತೆಯ ಬಗ್ಗೆ ಇತರರಿಗೆ ಹೇಳು. ಪ್ರಾಮಾಣಿಕ ವ್ಯಕ್ತಿಯಾಗಿ ಸಮಾಜದ ಮುಖ್ಯ ಸದಸ್ಯನಾಗು.' ಕುರಾನಿನ ಇನ್ನೂ ಅನೇಕ ಅಧ್ಯಾಯಗಳಲ್ಲಿ;
ಉಪದೇಶ ಹೇಗಿರಬೇಕು, ಅದನ್ನು ಯಾರಿಗೆ ಬೋಧಿಸಬೇಕು’ ಎಂದು ಮುಂತಾಗಿ ಉಪದೇಶಿಸಲಾಗಿದೆ. ಕುರಾನಿನ ಅಧ್ಯಾಯ ಅನ್ನಿಸಾ(೬೩)ದಲ್ಲಿ, ಜನರ ಸಾಮರ್ಥ್ಯ, ತಿಳಿವಳಿಕೆಯ ಮಟ್ಟಕ್ಕೆ ಅನುಗುಣವಾಗಿ ಮಾತನಾಡಿ. ಅವರ ತಪ್ಪುಗಳನ್ನು ಎತ್ತಿ ತೋರಿಸುವ ಬದಲು ಅವರನ್ನು ಸಮಾಧಾನಿಸಿ ಹೇಳಿ. ಯಾರಾದರೂ ಅಸ್ವಸ್ಥರಾಗಿದ್ದರೆ ಮೊದಲಿಗೆ ಅವರು ಗುಣಮುಖರಾಗುವಂತೆ ಪ್ರಾರ್ಥಿಸಿ. ತಪ್ಪು ಭಾವನೆಗಳು ಉಂಟಾಗುವಂತಹ ಉಪದೇಶಗಳನ್ನು ನೀಡಬೇಡಿ...',
ಅವರನ್ನು ಕಡೆಗಣಿಸದೆ, ಅವರ ಜೊತೆ ಅವರ ಅಂತರಾಳಕ್ಕೆ ನಾಟುವಂತಹ ಮಾತುಗಳನ್ನಾಡಿ’ ಎಂದು ಮುಂತಾದ ವಚನಗಳನ್ನು ಗಮನಿಸಬಹುದು.
ಉಪದೇಶವನ್ನು ಕೇಳಲು ಯಾರೂ ಸಿದ್ಧರಿರುವುದಿಲ್ಲ. ಸಾಮಾನ್ಯವಾಗಿ ಗಾಯವಾದ ನಂತರ ಬಹಳಷ್ಟು ಉಪದೇಶಗಳು ಬರುತ್ತವೆ, ಮರಣದ ನಂತರ ನಡೆಯುವ ಶವ ಪರೀಕ್ಷೆಯಂತೆ. ಎಲ್ಲರೂ ಉಪದೇಶಗಳ ಮಳೆಯನ್ನೇ ಸುರಿಸುತ್ತಾರೆ. ನಾವು ಉಪದೇಶವನ್ನು ಪಡೆಯುತ್ತೇವೆ, ಪಾಲಿಸುವುದಿಲ್ಲ.
ಎಷ್ಟೋ ಸಾರೆ ಉಪಯೋಗಿಸುವುದೂ ಇಲ್ಲ. ಉಪದೇಶ ನೀಡಲು ಹೋಗಿ ವೈರತ್ವ ಬೆಳೆಸಿಕೊಂಡ ಉದಾಹರಣೆಗಳೂ ಉಂಟು. ಉಪದೇಶ ಮಾಡುವಾಗ ಅಥವಾ ಸಲಹೆ ಸೂಚನೆಗಳನ್ನು ಕೊಡುವಾಗ ದಾರ್ಶನಿಕರು ಹೇಳಿದ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಗಮನಿಸಬಹುದು: ಸಲಹೆ ಉಪದೇಶ ನೀಡುವಾಗ ಪ್ರಾಮಾಣಿಕರಾಗಿರಬೇಕು. ಯಾವುದೇ ವಂಚನೆ, ದ್ರೋಹದಿಂದ ಮುಕ್ತವಾಗಿರಬೇಕು.
ಉಪದೇಶ ಪಡೆಯುವರನ್ನು ನಾಚಿಕೆಪಡಿಸಬಾರದು. ಅವರನ್ನು ಕೀಳಾಗಿ ಕಾಣಬಾರದು. ಉಪದೇಶ ಖಾಸಗಿಯಾಗಿದ್ದಷ್ಟೂ ಒಳ್ಳೆಯದು. ಉಪದೇಶದ, ಸಲಹೆಯ ವಿಷಯಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಉಪದೇಶ, ಖಂಡನೆಗಳು ಕಠೋರ ಮಾತುಗಳಿಂದ ಕೂಡಿರಬಾರದು.
ಎಲ್ಲಕ್ಕಿಂತ ಹೆಚ್ಚಾಗಿ ಉಪದೇಶ, ಸಲಹೆ ನೀಡುವವರು ಮೊದಲು ಸ್ವತಃ ಇನ್ನೊಬ್ಬರಿಗೆ ಉದಾಹರಣೆಯಾದ ಜ್ಞಾನ, ಸ್ಪಷ್ಟತೆ ಹೊಂದಿರಬೇಕು. ಆಗ ಉಪದೇಶ ಎಂಬುದು ಉಪದೇಶಾಮೃತ ಎನಿಸುವುದು.