Home ತಾಜಾ ಸುದ್ದಿ ಗೋಕಾಕ ಗ್ರಾಮದೇವಿಯರ ಜಾತ್ರೆ ಸಂಭ್ರಮ

ಗೋಕಾಕ ಗ್ರಾಮದೇವಿಯರ ಜಾತ್ರೆ ಸಂಭ್ರಮ

ಒಂಬತ್ತು ದಿನ ವೈವಿಧ್ಯಮಯ ಕಾರ್ಯಕ್ರಮ
ಗೋಕಾಕ: ೫ ವರ್ಷಗಳಿಗೊಮ್ಮೆ ಆಚರಿಸಲಾಗುವ ಗೋಕಾಕ ಗ್ರಾಮ ದೇವತೆಯರ ಜಾತ್ರೆ ಈ ಬಾರಿ ಹತ್ತು ವರ್ಷಗಳ ನಂತರ ನಡೆಯುತ್ತಿದ್ದು, ಗೋಕಾಕ ಜನತೆ ಸಡಗರ ಸಂಭ್ರಮದಿಂದ ಜಾತ್ರಾ ಮಹೋತ್ಸವ ಆಚರಣೆಯಲ್ಲಿ ತೊಡಗಿದ್ದಾರೆ.
ಜೂನ್ ೩೦ ರಿಂದ ಜುಲೈ ೮ರವರೆಗೆ ೯ ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮೊದಲನೆ ದಿನ ಜೂ.೩೦ ರಂದು ದ್ಯಾಮವ್ವ ದೇವಿಯರನ್ನು ಜಿನಗಾರರ ಮನೆಯಿಂದ ಸಂಜೆ ೪ ಗಂಟೆಗೆ ಕರೆತಂದು ಅಂಬಿಗೇರ ಗಲ್ಲಿಯಲ್ಲಿ ಪ್ರತಿಷ್ಠಾನಗೊಳಿಸಲಾಗುವುದು. ಜುಲೈ.೧ ರಂದು ಮಹಾಲಕ್ಷ್ಮೀ ದೇವಿಯರಿಗೆ ಅಭಿಷೇಕ ಹಾಗೂ ಪೂಜೆ ಸಲ್ಲಿಸುವುದು, ಮಧ್ಯಾಹ್ನ ಪುರಜನರಿಂದ ನೈವೇದ್ಯ ನೀಡಲಾಗುವುದು. ನಂತರ ರಾತ್ರಿ ಮದ್ದು ಹಾರಿಸುವುದು ಮತ್ತು ದೇವಿಯರ ಹೊನ್ನಾಟ ನಡೆಯಲಿದೆ.

ಜು.೨ರಂದು ಮುಂಜಾನೆ ೭ಕ್ಕೆ ದ್ಯಾಮವ್ವ ದೇವಿಯರನ್ನು ರಥದಲ್ಲಿ ಕೂಡ್ರಿಸುವುದು, ಮಧ್ಯಾಹ್ನ ೨ಕ್ಕೆ ಸೋಮವಾರ ಪೇಠೆಯಿಂದ ಎರಡು ರಥಗಳ ರಥೋತ್ಸವ ಸಕಲ ವಾದ್ಯ ಮೇಳದೊಂದಿಗೆ ನಡೆದು ಸಂಜೆ ೬ಕ್ಕೆ ದ್ಯಾಮವ್ವ ಗುಡಿ ತಲುಪುವುದು. ರಾತ್ರಿ ಬಯಲಾಟ, ಮಧ್ಯ ಹಾರಿಸುವುದು, ೩ರಂದು ಮಧ್ಯಾಹ್ನ ಎರಡು ರಥಗಳು ಹಳೆ ಮುನ್ಸಿಪಾಲ್ಟಿ ಮತ್ತು ಚಾವಡಿ ರಸ್ತೆಯಿಂದ ಹಾಯ್ದು ಮೊದಲ ರಥ ಅಜಂತಾ ಕೂಟಗೆ, ಎರಡನೇ ರಥ ಭಾಫನಾ ಕೂಟಗೆ ತಲುಪಲಿದೆ. ರಾತ್ರಿ ಬಯಲಾಟ ಮಧ್ಯ ಹಾರಿಸುವುದು. ೪ರಂದು ಮುಂಜಾನೆ ೮ಗಂಟೆಗೆ ಅಜಂತಾ ಕೂಟದಿಂದ ಮೊದಲ ರಥ ಹೊರಟು ಮೆರಕನಟ್ಟಿ ಮಹಾಲಕ್ಷ್ಮೀ ದೇವಿ ದೇವಸ್ಥಾನ ತಲುಪುವುದು. ಮಧ್ಯಾಹ್ನ ೩ಗಂಟೆಗೆ ಎರಡನೇ ರಥ ಬಾಫನಾ ಕೂಟದಿಂದ ಸಂಜೆ ೬ಗಂಟೆಗೆ ಗುರುವಾರ ಪೇಠ ಮಹಾಲಕ್ಷ್ಮೀ ದೇವಿ ದೇವಸ್ಥಾನ ತಲುಪಲಿದೆ. ರಾತ್ರಿ ಬಯಲಾಟ ಮಧ್ಯ ಹಾರಿಸುವುದು.

೫ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ರಾತ್ರಿ ಬಯಲಾಟ ಮಧ್ಯ ಹಾರಿಸುವುದು, ೬ರಂದು ಭಾರಿ ಜೋಡೆತ್ತಿನ ಬಂಡಿ ಶರ್ತು ಪ್ರಥಮ ೫ಲಕ್ಷ, ದ್ವಿತೀಯ ೩ಲಕ್ಷ, ತೃತೀಯ ೨ಲಕ್ಷ ರೂಗಳ ಬಹುಮಾನವಿದೆ. ೭ರಂದು ಸೈಕಲ್ ಶರ್ತು ಪ್ರಥಮ ೧ಲಕ್ಷ, ದ್ವಿತೀಯ ೭೫ಸಾವಿರ, ತೃತೀಯ ೫೦ಸಾವಿರ ರೂಗಳ ಬಹುಮಾನ ಮತ್ತು ಜೋಡು ಕುದುರೆ ಗಾಡಿ ಶರ್ತು ಪ್ರಥಮ ೨ಲಕ್ಷ, ದ್ವಿತೀಯ ೧ಲಕ್ಷ, ತೃತೀಯ ೫೦ಸಾವಿರ ರೂಗಳ ಬಹುಮಾನ. ಮಂಗಳವಾರದಂದು ಮಹಾಲಕ್ಷ್ಮೀ ದೇವಿಯರಿಗೆ ಅಭಿಷೇಕ ಹಾಗೂ ಪೂಜೆ ಸಲ್ಲಿಸುವುದು, ಮಧ್ಯಾಹ್ನ ಪುರಜನರಿಂದ ನೈವೇದ್ಯ ನೀಡಲಾಗುವುದು
ಗೋಕಾಕ ಗ್ರಾಮ ದೇವತೆಯರ ಜಾತ್ರೆಗೆ ದಿ.ಲಕ್ಷ್ಮಣರಾವ ಜಾರಕಿಹೊಳಿ, ದಿ.ದೇವಪ್ಪಾ ಬಾ.ಉಳ್ಳಾಗಡ್ಡಿ, ದಿ.ಎಸ್.ಎ. ಕೋತವಾಲ, ದಿ.ಅಶೋಕ ನಾಯಿಕ, ದಿ.ವಿ.ಎಲ್. ಹೆಜ್ಜೆಗಾರ ಸೇರಿದಂತೆ ಅನೇಕ ಹಿರಿಯರು ಅಧ್ಯಕ್ಷರು, ಸದಸ್ಯರಾಗಿದ್ದು ಜಾತ್ರಾ ಮಹೋತ್ಸವವನ್ನು ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಆಚರಿಸುತ್ತ ಬಂದಿದ್ದರು.

Exit mobile version