ದೇಶದಲ್ಲಿ ಈಗ ಎಲ್ಲ ಕಡೆ ಬ್ಯಾಟರಿ ಚಾಲಿತ ಸ್ಕೂಟರ್, ಕಾರುಗಳು, ಬಸ್‌ಗಳು ಲಾರಿಗಳು ಅಧಿಕಗೊಳ್ಳುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳು ಅಧಿಕಗೊಂಡಂತೆ ಹೆಚ್ಚು ದೂರ ಬ್ಯಾಟರಿ ಚಾಲಿತ ವಾಹನ ಬಳಸಲು ಜನ ಬಯಸುತ್ತಾರೆ. ಈಗ ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ ೨೫೦ ರಿಂದ ೫೦೦ ಕಿಮೀ ಹೋಗಬಹುದು. ಇದು ಕಾರನ್ನು ಯಾವ ವೇಗದಲ್ಲಿ ಬಳಸುತ್ತೇವೆ ಎಂಬುದು ಬಹಳ ಮುಖ್ಯ. ಒಮ್ಮೆ ೯೦ ಕಿಮಿ ಹೋಗುವುದು ನಂತರ ೨೦ ಕಿಮೀಗೆ ಇಳಿಸುವುದು ಮಾಡಿದರೆ ಬೇಗನೇ ಬ್ಯಾಟರಿಯಲ್ಲಿರುವ ವಿದ್ಯುತ್ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಪ್ರತಿ ರಸ್ತೆಯನ್ನು ಪ್ರವೇಶಿಸಿದ ಕೂಡಲೇ ಆ ಕಾರೇ ನಿಮಗೆ ಸರಾಸರಿ ಯಾವ ವೇಗದಲ್ಲಿ ಒಳ್ಳೆಯದು ತಿಳಿಸುತ್ತದೆ. ಅದಕ್ಕೆ ನಿಗದಿಪಡಿಸಿದರೆ ಅದಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಹೋಗುವುದಿಲ್ಲ. ಆಗ ಹೆಚ್ಚು ಕಾಲ ಒಂದೇ ವೇಗದಲ್ಲಿ ಚಲಿಸಬಹುದು. ಅದರಿಂದ ವಿದ್ಯುತ್ ಉಳಿತಾಯವಾಗುತ್ತದೆ. ಮನೆಯಲ್ಲೇ ಪೂರ್ಣ ಚಾರ್ಜಿಂಗ್ ಮಾಡಿಕೊಂಡು ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಮತ್ತೆ ಅರ್ಧ ದೂರ ಬರಬಹುದು. ಮಧ್ಯದಲ್ಲಿ ಕಾಫಿಗೆ ನಿಲ್ಲಿಸಿದಾಗ ಚಾರ್ಜ್ ಮಾಡಿಕೊಂಡಲ್ಲಿ ಬೆಂಗಳೂರನ್ನು ಸುಲಭವಾಗಿ ಸೇರಬಹುದು. ಒಂದೇ ವೇಗದಲ್ಲಿ ಹೋದರೆ ಬ್ಯಾಟರಿ ತಾನೇ ರಿಚಾರ್ಜ್ ಮಾಡಿಕೊಳ್ಳುತ್ತದೆ. ಬೇರೆಯವರು ಹೋದರು ಎಂದು ನಮ್ಮ ವಾಹನದ ವೇಗ ಹೆಚ್ಚಿಸಬಾರದು.
ಈಗ ದೇಶದಲ್ಲಿರುವ ಚಾರ್ಜಿಂಗ್ ಕೇಂದ್ರಗಳು ಸಾಲದು. ಈಗ ೫೦ ರಾಷ್ಟ್ರೀಯ ಹೆದ್ದಾರಿಗಳಲ್ಲಿ ೭೨ ಸಾವಿರ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನೆರವು ನೀಡುತ್ತಿದೆ. ಬಿಎಚ್‌ಇಎಲ್ ಈ ಕೇಂದ್ರಗಳ ಸ್ಥಾಪನೆಯ ಹೊಣೆ ಹೊತ್ತಿದೆ. ಪೆಟ್ರೋಲ್ ಬಂಕ್‌ಗಳ ಬಳಿ ಇದನ್ನು ಸ್ಥಾಪಿಸುವುದು ಅಪಾಯಕಾರಿ. ಅದಕ್ಕಾಗಿ ಹೋಟೆಲ್, ಮಾಲ್‌ಗಳಲ್ಲಿ ಇದನ್ನು ತೆರೆಯಲು ಯೋಜಿಸಲಾಗಿದೆ. ಹೆಚ್ಚು ಎಂದರೆ ೫೭೬೫ ಕೇಂದ್ರಗಳಿವೆ. ಇವುಗಳ ಸಂಖ್ಯೆ ಹೆಚ್ಚಿಸದೆ ಇದ್ದಲ್ಲಿ ಬ್ಯಾಟರಿ ಚಾಲಿತ ವಾಹನಗಳನ್ನು ದೂರದ ಪ್ರಯಾಣಕ್ಕೆ ಬಳಸುವುದು ಕಷ್ಟ. ಇಡೀ ದೇಶದಲ್ಲಿ ೨೦೨೩೦ಕ್ಕೆ ೨೯ ಲಕ್ಷ ಕೇಂದ್ರಗಳನ್ನು ಸ್ಥಾಪಿಸಬೇಕು. ಅಂದರೆ ಪ್ರತಿ ವರ್ಷ ೩.೫೦ ಲಕ್ಷ ಕೇಂದ್ರಗಳು ಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಸಂಖ್ಯೆ ಕಡಿಮೆ. ಈಗ ಬ್ಯಾಟರಿ ಚಾರ್ಜಿಂಗ್ ವಿಧಾನಗಳಲ್ಲಿ ಮೂರು ವಿಧಗಳಿವೆ. ಮೊದಲನೆಯದು ಮನೆಯಲ್ಲೇ ಚಾರ್ಜಿಂಗ್ ಮಾಡುವುದು. ಇದಕ್ಕೆ ಇಡೀ ರಾತ್ರಿ ಚಾರ್ಜಿಂಗ್ ಹಾಕಿಡಬೇಕು. ಎರಡನೇಯದು ತ್ವರಿತಗತಿಯಲ್ಲಿ ಚಾರ್ಜಿಂಗ್ ಮಾಡುವುದು. ಇದಕ್ಕೆ ೭ ರಿಂದ ೨೨ ಕೆವಿವರೆಗೆ ವಿದ್ಯುತ ಬೇಕು. ಇವುಗಳು ಎಸಿ ವಿದ್ಯುತ್ ನಡೆಯುತ್ತದೆ. ಇನ್ನು ವೇಗದಲ್ಲಿ ಚಾರ್ಜಿಂಗ್ ಆಗಬೇಕು ಎಂದರೆ ಡಿಸಿ ಕರೆಂಟ್ ೫೦- ೩೦೦ ಕೆವಿ ಬೇಕು. ಆಗ ಅರ್ಧಗಂಟೆಯಲ್ಲಿ ಪೂರ್ಣ ಚಾರ್ಜ್ ಮಾಡಬಹುದು. ಇದಕ್ಕಾಗಿ ಪ್ರತ್ಯೇಕ ಆಪ್ ಇದೆ. ಇದರಲ್ಲಿ ಸಮೀಪ ಇರುವ ಚಾರ್ಜಿಂಗ್ ಕೇಂದ್ರದ ವಿವರ ಲಭಿಸುತ್ತಿದೆ. ಎಲ್ಲವೂ ಡಿಜಿಟಲ್ ಪೇ ಮಾಡಬೇಕು. ಹಣ ತೆಗೆದುಕೊಳ್ಳುವವರು ಯಾರೂ ಇರುವುದಿಲ್ಲ. ನೀವು ಎಷ್ಟು ಹಣ ಪಾವತಿಸುತ್ತೀರೋ ಅಷ್ಟು ವಿದ್ಯುತ್ ಆ ಕೇಂದ್ರ ನೀಡುತ್ತದೆ. ಇವುಗಳು ಸ್ವಯಂಚಾಲಿತ. ಮನೆಯಲ್ಲಿ ೨೦ ಗಂಟೆ ಚಾರ್ಜ್ ಮಾಡಿದರೆ ೧೨೦ ಕಿಮೀ ಹೋಗಬಹುದು. ಮನೆಯಲ್ಲಿ ಚಾರ್ಜ್ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಹಣ ನೀಡಬೇಕಿಲ್ಲ. ಯೂನಿಟ್ ಲೆಕ್ಕದಲ್ಲಿ ಮಾಸಿಕ ಬಿಲ್‌ನಲ್ಲಿ ಬರುತ್ತದೆ. ಅದರಲ್ಲಿ ಚಾರ್ಜಿಂಗ್ ವಿವರ ಇರುವುದಿಲ್ಲ. ಮನೆ ಬಳಕೆಯಲ್ಲೇ ಅದು ಸೇರುತ್ತದೆ. ಆದರೆ ಹೊರಗಡೆ ವಿದ್ಯುತ್ ಚಾರ್ಜಿಂಗ್ ಮಾಡಿಸಿದರೆ ವಿದ್ಯುತ್ ದರವೂ ಹೆಚ್ಚು. ಜತೆಗೆ ಜಿಎಸ್‌ಟಿ ಶೇ.೫ ರಷ್ಟು ತೆರಿಗೆ ಪಾವತಿಸಬೇಕು. ಅದರಿಂದ ಮನೆಯಲ್ಲಿ ಕಡಿಮೆ ದರದಲ್ಲಿ ಚಾರ್ಜಿಂಗ್ ಮಾಡಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಮನೆಗಳಲ್ಲೇ ಅನಧಿಕೃತ ಚಾರ್ಜಿಂಗ್ ಬರಬಹುದು. ಮಾರ್ಗದ ಮಧ್ಯದಲ್ಲೇ ನೆಂಟರ ಮನೆ ಇದ್ದಲ್ಲಿ ಅಲ್ಲೇ ಕಾಫಿ ಕುಡಿದು ವಾಹನ ಚಾರ್ಜಿಂಗ್ ಮಾಡಿಕೊಂಡು ಮುಂದಕ್ಕೆ ಪ್ರಯಾಣ ಮಾಡಬಹುದು. ಇದರಿಂದ ಗಂಟು-ನಂಟು ಎರಡೂ ಉಳಿಯುತ್ತೆ. ರಾಷ್ಟ್ರೀಯ ಹೆದ್ದಾರಿಗಳು ವಿಶಾಲವಾಗಿ ಇರುವುದರಿಂದ ವೇಗದಲ್ಲಿ ನಿಗದಿತ ಸ್ಥಳವನ್ನು ತಲುಪಬಹುದು. ಅದರಲ್ಲೂ ಬ್ಯಾಟರಿ ಚಾಲಿತ ವಾಹನದಿಂದ ಪೆಟ್ರೋಲ್-ಡೀಸೆಲ್ ಬಳಕೆ ಇಳಿಯುತ್ತದೆ. ಪರಿಸರ ಮಾಲಿನ್ಯ ಕೂಡ ಇರುವುದಿಲ್ಲ. ಅಲ್ಲದೆ ಉತ್ತಮ ರಸ್ತೆಯಿಂದ ವಾಹನ ಬಾಳ್ವಿಕೆ ಅವಧಿ ಹೆಚ್ಚುತ್ತದೆ. ಈಗ ದೂರ ಪ್ರಯಾಣಕ್ಕೆ ಹೆಚ್ಚು ಜನ ರೈಲು ಬಯಸುತ್ತಾರೆ. ಅದಿಲ್ಲ ಎಂದರೆ ಬ್ಯಾಟಿರಿ ಚಾಲಿತ ವಾಹನ ಸುರಕ್ಷಿತ. ಅಲ್ಲದೆ ಹೊಗೆರಹಿತ ಮತ್ತು ಸದ್ದಲ್ಲದ ಪ್ರಯಾಣ. ಇದೆಲ್ಲವನ್ನೂ ದೃಷ್ಟಿಯಲ್ಲಿಟ್ಟು ಕೇಂದ್ರ ಸರ್ಕಾರ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ ಹೆಚ್ಚಿಸುತ್ತಿದೆ. ಇದರ ಸಂಖ್ಯೆ ಅಧಿಕಗೊಂಡಂತೆ ವಿದ್ಯುತ್ ಜಾಲಿತ ವಾಹನಗಳ ಸಂಖ್ಯೆ ಅಧಿಕಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ದ್ವಿಚಕ್ರವಾಹನಗಳೆಲ್ಲ ಬ್ಯಾಟರಿ ಚಾಲಿತ ಆಗಲಿದೆ. ಇದರಿಂದ ಪರಿಸರ ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗುತ್ತದೆ. ಈಗ ಹೆಚ್ಚಿನ ಬಂಡವಾಳ ಹೂಡುವುದು ಅನಿವಾರ್ಯ. ಸೋಲಾರ್ ಮೂಲಕ ವಿದ್ಯುತ್ ಪಡೆದು ಚಾರ್ಜಿಂಗ್ ಕೇಂದ್ರ ನಡೆಯುವ ಹಾಗಾದರೆ ಶೂನ್ಯ ವೆಚ್ಚದಲ್ಲಿ ವಿದ್ಯುತ್ ಪಡೆಯಬಹುದು. ಅಲ್ಲದೆ ಇಂಗಾಲಾಮ್ಲ ಸೂಸುವಿಕೆ ಇರುವುದಿಲ್ಲ.