ಜಮಖಂಡಿ(ಬಾಗಲಕೋಟೆ): ಮಹಾಭಾರತಕ್ಕೆ ತಿರುಳನ್ನು ಕೊಟ್ಟವರು ವೇದವ್ಯಾಸರು, ವೇದವ್ಯಾಸರು ಏಳು ತಲೆಮಾರನ್ನು ಕಂಡವರು. ಮಹಾಭಾರತದಲ್ಲಿ 41 ಭಾರಿ ವೇದವ್ಯಾಸರು ಬರುತ್ತಾರೆ ಎಂದು ಶಿಕ್ಷಣತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.
ಸತ್ಯಕಾಮ ಪ್ರತಿಷ್ಠಾನ ಆಶ್ರಯದಲ್ಲಿ ಜಮಖಂಡಿ ಸಮೀಪದ ಕಲ್ಲಹಳ್ಳಿಯ ಸುಮ್ಮನೆ ತೋಟದ ಮನೆಯ ಆವರಣದ ಸಭಾಭವನದಲ್ಲಿ ಸತ್ಯಕಾಮರ ಜನ್ಮಾರಾಧನೆ ನಿಮಿತ್ತ ಶ್ರೀ ವೇದವ್ಯಾಸ ದರ್ಶನ ಕಾರ್ಯಕ್ರಮದಲ್ಲಿ ಶ್ರೀಮನ್ಮಹಾಭಾರತದಲ್ಲಿ ವೇದವ್ಯಾಸರ ಕುರಿತು ಅವರು ಉಪನ್ಯಾಸ ನೀಡಿದರು.
ಶಾಂತಿ ಮತ್ತು ತ್ಯಾಗದಿಂದ ಸಿಗುವುದೇ ಅದು ನಿಜವಾದ ಯಶಸ್ಸು. ಧರ್ಮ ಎಂದರೆ ವಿಧುರ, ವಿಧುರ ಎಂದರೆ ಧರ್ಮವಾಗಿತ್ತು. ಸೃಷ್ಟಿ ಸ್ಥಿತಿ ಲಯ ಮಾಡುವಲ್ಲಿ ವ್ಯಾಸರಾಯರು ಕೆಲಸ ಮಾಡಿದ್ದಾರೆ ಎಂದರು.
ವ್ಯಾಸರೆಂದರೆ ಜ್ಞಾನದ ತೇಜಪುಂಜ…
ಉಪನ್ಯಾಸಕ ಜಗದೀಶ ಶರ್ಮಾ ಸಂಪ ವೇದವ್ಯಾಸರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಇತಿಹಾಸ ಬೇರೆ, ಚರಿತ್ರೆ ಬೇರೆ ಭಾರತಕ್ಕೆ ಚರಿತ್ರೆ ಅಭ್ಯಾಸವಿತ್ತು. ಭಾರತೀಯರಿಗೆ ಇತಿಹಾಸ ಬೇಕಿಲ್ಲ ಚರಿತ್ರೆ ಬೇಕಿತ್ತು.
ಸತ್ಯಕಾಮರಿಗೆ ವ್ಯಾಸರೆಂದರೆ ಬಲು ಪ್ರೀತಿ. ಅಗ್ನಿಯೆಂದರೆ ಜ್ಞಾನದ ಅರ್ಥ. ವ್ಯಾಸರೆಂದರೆ ಜ್ಞಾನದ ತೇಜಪುಂಜ. ವ್ಯಾಸರಾಯರ ಜನ್ಮ ವಿಶಿಷ್ಟವಾದುದು ಎಂದರು.
ಲೋಕಕ್ಕೆ ಬೇಕು ಒಂದು ಅರಿವು ಅರಿವಿಗೆ ಆಕೃತಿ ಜ್ಞಾನ, ನಿರಾಕಾರ. ಅರಿವಿಗೆ ಒಂದು ಆಕಾರ ಕೊಡಬೇಕಾಗಿತ್ತು. ನಮ್ಮ ಸಾಮರ್ಥ್ಯ ಕಡಿಮೆಯಾದಂತೆ ಅರಿವಿನ ಕ್ಷೇತ್ರ ವಿಭಾಗಿಸಬೇಕಾಗುತ್ತದೆ. ನಾಲ್ಕು ವೇದಗಳು ಮನುಷ್ಯನ ದೇಹದಲ್ಲಿರುವ ಅಂಗಗಳಂತೆ. ತಾತ್ವಿಕ ಆಧಾರಗಳು ಬ್ರಹ್ಮಸೂತ್ರವನ್ನೇ ಅವಲಂಬಿಸಿವೆ. ಮಹಾಭಾರತ ಎಂದರೆ ವ್ಯಾಸರು ಮಹಾಭಾರತ ಒಂದು ವಿಶ್ವಕೋಶ ಎಲ್ಲ ಭಾವನೆಗಳನ್ನು ಸಂಕಷ್ಟಗಳನ್ನು ಒಳಗೊಂಡಿದೆ. ಅವುಗಳಿಗೆ ಪರಿಹಾರಗಳು ಇವೆ ಎಂದರು.
ಉಪಕಾರವೇ ಪುಣ್ಯ…
ಬೆಂಗಳೂರಿನ ಸಂಸ್ಕೃತಿ ಚಿಂತಕ ಡಾ.ಜಿ.ಬಿ. ಹರೀಶ ಮಹಾಭಾರತ ಮತ್ತು ಭಾರತೀಯ ಇತಿಹಾಸ ಕುರಿತು ಮಾತನಾಡಿದರು. ರಾಮಾಯಣ ಆಗಬೇಕಾದದ್ದು, ಮಹಾಭಾರತ ಆಗಿಹೋಗಿದೆ. ಭವಿಷ್ಯದಲ್ಲಿ ಬರುವ ಪೀಳಿಗೆಗೆ ರಾಮಾಯಣ ಬೇಕಾಗಿದೆ. ಧರ್ಮಕ್ಷೇತ್ರದಲ್ಲಿ ಕುರುಕ್ಷೇತ್ರವಾಗುತ್ತೆ, ಪ್ರವೃತ್ತಿ ನಿವೃತ್ತಿಗಳ ಸಂಘರ್ಷ ಧರ್ಮ ಎಂದರು.
ಬೇರೊಬ್ಬರಿಗೆ ಉಪಕಾರ ಮಾಡುವುದೆ ಪುಣ್ಯ. ಅಪಕಾರ ಮಾಡುವುದೇ ಪಾಪ. ಮಹಾಬಾರತದಲ್ಲಿ ಉಪ ಕಥೆಗಳಿವೆ. ಅವುಗಳ ಬಗ್ಗೆ ತಿಳಿದರೆ ಮಾತ್ರ ಮೂಲ ಕಥೆೆ ತಿಳಿಯುವುದು ಎಂದರು.
ಮಹಾಭಾರತದುದ್ದಕ್ಕೂ ವ್ಯಾಸರು ತೀರ್ಥಯಾತ್ರೆಯ ಕಲ್ಪನೆ ಕೊಟ್ಟಿದ್ದಾರೆ. ಭಾರತೀಯ ಇತಿಹಾಸ ಪ್ರಾರಂಭವಾಗುವುದೇ ವೇದಕಾಲ ಎಂದರು. ವೇದಗಳ ಕಾಲದಲ್ಲಿ ಮುಖ್ಯ ನದಿ ಸರಸ್ವತಿಯಾಗಿತ್ತು. ಕಾಲಕ್ರಮೇಣ ನದಿಗಳು ತಮ್ಮ ಪಾತ್ರ ಬದಲಿಸಿವೆ. ನಮ್ಮ ದೇಶಕ್ಕೆ ನಾಗಾ(ಸರ್ಪಗಳ) ಕೊಡುಗೆ ಅಪಾರವಾಗಿದೆ. ನಾಗಾ ಗರುಡ ಸಂಘರ್ಷದಿಂದ ಮಹಾಭಾರತವಾಗಿದೆ ಎಂದರು.
ಪ್ರತಿಷ್ಠಾನದ ಸಂಚಾಲಕಿ ಡಾ.ವೀಣಾ ಬನ್ನಂಜೆ ಸ್ವಾಗತಿಸಿ ನಿರೂಪಿಸಿದರು. ಚಿಂತಕ, ಸಾಹಿತಿ ಬಿ.ಎಲ್.ಶಂಕರ ವಂದಿಸಿದರು.