Home ಆರೋಗ್ಯ ರಾಜ್ಯದಲ್ಲಿ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳು ಕಣ್ಣಿನ ಆರೋಗ್ಯ ಸೇವೆ ನೀಡಲು ಸಜ್ಜು

ರಾಜ್ಯದಲ್ಲಿ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳು ಕಣ್ಣಿನ ಆರೋಗ್ಯ ಸೇವೆ ನೀಡಲು ಸಜ್ಜು

ಬೆಂಗಳೂರು: ಇದೇ ತಿಂಗಳು 3 ರಂದು ಬುಧವಾರ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನೂತನ ದೃಷ್ಟಿ ಕೇಂದ್ರಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ದೃಷ್ಟಿದೋಷ ನಿವಾರಣೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ‘ಆಶಾಕಿರಣ’ ಯೋಜನೆಯನ್ನು ಮರುವಿನ್ಯಾಸಗೊಳಿಸಲಾಗಿದೆ. ಶಾಶ್ವತ ಪರಿಹಾರಕ್ಕಾಗಿ ನಿರಂತರ ಕಣ್ಣಿನ ಆರೋಗ್ಯ ಸೇವೆ ಒದಗಿಸುವ ‘ಆಶಾಕಿರಣ ದೃಷ್ಟಿ ಕೇಂದ್ರಗಳನ್ನು’ ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಎಲ್ಲ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ 393 ಆಶಾಕಿರಣ ದೃಷ್ಟಿ ಕೇಂದ್ರಗಳು ಕಣ್ಣಿನ ಆರೋಗ್ಯ ಸೇವೆ ಒದಗಿಸಲು ಸಜ್ಜಾಗಿ ನಿಂತಿವೆ.

ಇದೇ ತಿಂಗಳು 3 ರಂದು ಬುಧವಾರ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನೂತನ ದೃಷ್ಟಿ ಕೇಂದ್ರಗಳಿಗೆ ಚಾಲನೆ ನೀಡಲಿದ್ದು, ಏಕಕಾಲಕ್ಕೆ ಎಲ್ಲ ಕೇಂದ್ರಗಳಲ್ಲೂ ಆರೋಗ್ಯ ಸೇವೆ ಪ್ರಾರಂಭವಾಗಲಿದೆ. ಸಾರ್ವಜನಿಕರು ಕೇಂದ್ರಗಳಿಗೆ ಭೇಟಿ ನೀಡಿ ಕಣ್ಣಿನ ತಪಾಸಣೆ ನಡೆಸಿಕೊಂಡು, ದೃಷ್ಟಿ ದೋಷ ಇರುವವರು ಉಚಿತ ಕನ್ನಡಕಗಳನ್ನು ಪಡೆಯಬಹುದು.‌

ಈ ಮೊದಲು 8 ಜಿಲ್ಲೆಗಳಲ್ಲಿ ಆಶಾಕಿರಣ ಯೋಜನೆ ಯಶಸ್ವಿಯಾಗಿದ್ದು, 1.40 ಕೋಟಿ ಜನರು ನೇತ್ರ ತಪಾಸಣೆಗೆ ಒಳಗಾಗಿದ್ದರು. 24.50 ಲಕ್ಷ ಜನರಿಗೆ ನೇತ್ರದ ತೊಂದರೆಗಳನ್ನ ಪತ್ತೆ ಹಚ್ಚಿ ಸೂಕ್ತ ಉಚಿತ ಚಿಕಿತ್ಸೆ ಒದಗಿಸಲಾಗಿದೆ. ಇವರಲ್ಲಿ 4.3 ಲಕ್ಷ ಜನರಿಗೆ ಉಚಿತ ಕನ್ಮಡಕ ವಿತರಿಸಲಾಗಿದ್ದು, 1.05 ಲಕ್ಷ ಜನರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.. ಇನ್ಮುಂದೆ ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲೂ ಹೆಚ್ಚು ಪರಿಣಾಮಕಾರಿಯಾಗಿ ಕಣ್ಣಿನ ಆರೋಗ್ಯ ಸೇವೆ ಮುಂದುವರಿಯಲಿದೆ ಎಂದಿದ್ದಾರೆ.

Exit mobile version