Home ನಮ್ಮ ಜಿಲ್ಲೆ ಬೆಂಗಳೂರಲ್ಲಿ ಖಾಸಗಿ ಫ್ಲೈ ಓವರ್ ನಿರ್ಮಾಣ: ಯೋಜನೆ ವಿವರ

ಬೆಂಗಳೂರಲ್ಲಿ ಖಾಸಗಿ ಫ್ಲೈ ಓವರ್ ನಿರ್ಮಾಣ: ಯೋಜನೆ ವಿವರ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಬಿಬಿಎಂಪಿ, ಬಿಡಿಎ ಫ್ಲೈ ಓವರ್‌ಗಳನ್ನು ನಿರ್ಮಾಣ ಮಾಡುತ್ತದೆ. ಆದರ ಈಗ ಖಾಸಗಿ ಕಂಪನಿಯೊಂದು ಫ್ಲೈ ಓವರ್ ನಿರ್ಮಾಣ ಮಾಡುವ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು, ಬಿಬಿಎಂಪಿ ಈ ಯೋಜನೆಗೆ ಒಪ್ಪಿಗೆಯನ್ನು ನೀಡಿದೆ.

ಪ್ರೆಸ್ಟಿಜ್ ಗ್ರೂಪ್ ಬೆಳ್ಳಂದೂರು ಹೊರ ವರ್ತುಲ ರಸ್ತೆಯಿಂದ ಟೆಕ್‌ ಪಾರ್ಕ್ ತನಕ 1.5 ಕಿ. ಮೀ. ಉದ್ದದ ಖಾಸಗಿ ಫ್ಲೈ ಓವರ್ ನಿರ್ಮಾಣ ಮಾಡಲಿದೆ. ಈ ಯೋಜನೆಗಾಗಿ ಬಿಬಿಎಂಪಿಗೆ 2022, 2023ರಲ್ಲಿ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಆದರೆ ಒಪ್ಪಿಗೆ ಸಿಕ್ಕಿರಲಿಲ್ಲ. ಈಗ ಬಿಬಿಎಂಪಿ ಅನುಮತಿ ಕೊಟ್ಟಿದೆ.

ರಸ್ತೆಯ ಪಕ್ಕದಲ್ಲಿ ಮಳೆ ನೀರು ಚರಂಡಿ ಮೇಲ್ಭಾಗದಲ್ಲಿ ಈ ಖಾಸಗಿ ಫ್ಲೈ ಓವರ್ ನಿರ್ಮಾಣವಾಗಲಿದೆ. ಇದಕ್ಕೆ ಪ್ರತಿಯಾಗಿ ಕರಿಯಮ್ಮನ ಅಗ್ರಹಾರ ರಸ್ತೆ ವಿಸ್ತರಣೆಯ ವೆಚ್ಚವನ್ನು ಗ್ರೂಪ್ ಭರಿಸಲಿದೆ.

ಬೆಂಗಳೂರು ನಗರದಲ್ಲಿ ಸುಲಭವಾಗಿ ತಮ್ಮ ಕ್ಯಾಂಪಸ್‌ ಪ್ರವೇಶ ಮಾಡಲು ಮಾನ್ಯತಾ ಎಂಬೆಸಿ ಬ್ಯುಸಿನೆಸ್ ಪಾರ್ಕ್‌, ಲುಲೂ ಮಾಲ್, ಬಾಗ್ಮನೆ ಗ್ರೂಪ್ ಈಗಾಗಲೇ ಖಾಸಗಿ ಫ್ಲೈ ಓವರ್ ನಿರ್ಮಾಣ ಮಾಡಿವೆ. ಈಗ ಈ ಸಾಲಿಗೆ ಪ್ರೆಸ್ಟಿಜ್ ಗ್ರೂಪ್ ಸಹ ಸೇರಲಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಈ ಯೋಜನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ಒಪ್ಪಿಗೆ ನೀಡಿದ್ದರು. ಬಳಿಕ ಬಿಬಿಎಂಪಿಯೂ ಒಪ್ಪಿಗೆ ನೀಡಿದ್ದು, ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.

ಪ್ರೆಸ್ಟಿಜ್ ಬೀಟಾ ಟೆಕ್‌ ಪಾರ್ಕ್‌ ಅನ್ನು ಹಳೆ ಏರ್‌ಪೋರ್ಟ್‌ ರಸ್ತೆ ಮತ್ತು ಕರಿಯಮ್ಮನ ಅಗ್ರಹಾರ ರಸ್ತೆಗಳು ಸಂಪರ್ಕಿಸುತ್ತವೆ. 5000ಕ್ಕೂ ಅಧಿಕ ಉದ್ಯೋಗಿಗಳು ಇರುವ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಇದೆ. ಆದ್ದರಿಂದ ಉದ್ಯೋಗಿಗಳ ಅನುಕೂಲಕ್ಕಾಗಿ ಖಾಸಗಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ.

ಈ ಫ್ಲೈ ಓವರ್ ನಿರ್ಮಾಣಕ್ಕೆ ಅನುಮತಿ ನೀಡಿದರೆ ಕರಿಯಮ್ಮನ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಕೊಡಲಾಗುತ್ತದೆ ಎಂದು ಗ್ರೂಪ್‌ ಬಿಬಿಎಂಪಿಗೆ ಹೇಳಿತ್ತು. ಹೊಸ ರಸ್ತೆಯು ಸಕ್ರಾ ಆಸ್ಪತ್ರೆಗೆ ಪ್ರಯಾಣನ್ನು 2.5 ಕಿ. ಮೀ. ಕಡಿಮೆ ಮಾಡಲಿದೆ.

Exit mobile version