ಬಂಟ್ವಾಳ: ಪಾಗಲ್ ಪ್ರೇಮಿಯೋರ್ವ ತನ್ನ ಪ್ರಿಯತಮೆಯ ಮನೆಗೆ ನುಗ್ಗಿ ಆಕೆಗೆ ಮಾರಣಾಂತಿಕವಾಗಿ ಹಲ್ಲೆಗೈದು, ಆ ಬಳಿಕ ಆಕೆ ಮೃತಪಟ್ಟಿರಬೇಕೆಂದು ಭಾವಿಸಿ ಆಕೆಯ ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಬಂಟ್ವಾಳ ತಾಲೂಕಿನ ಸುಜೀರು ದೈಯಡ್ಕ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಡ್ಮಾಣ್ ಗ್ರಾಮದ ಕಾಂಜಿಲಕೋಡಿ ನಿವಾಸಿ ಸುಧೀರ್ (30) ಎಂದು ಗುರುತಿಸಲಾಗಿದೆ. ಯುವತಿ ದಿವ್ಯ ಎಂಬಾಕೆ ಗಂಭೀರ ಸ್ಥಿತಿಯಲ್ಲಿ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.
ಇವರಿಬ್ಬರು ಕಳೆದ 8 ವರ್ಷಗಳಿಂದ ಪ್ರೀತಿಸುತ್ತಾ ಇದ್ದರು ಎನ್ನಲಾಗಿದ್ದು, ಯಾವುದೋ ಕ್ಷುಲ್ಲಕ ಕಾರಣಕ್ಕೆ ಇವರಿಬ್ಬರ ಮಧ್ಯೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಸುಧೀರ್ ದಿವ್ಯಳಿಗೆ ಚೂರಿಯಿಂದ ಇರಿದುದಲ್ಲದೆ ಮನಬಂದಂತೆ ಥಳಿಸಿದ್ದಾನೆ. ಇದರಿಂದಾಗಿ ದಿವ್ಯ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಗಾಯಾಳು ದಿವ್ಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳೆನ್ನಲಾಗಿದ್ದು, ಸೋಮವಾರ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದಳೆನ್ನಲಾಗಿದೆ. ಮಧ್ಯಾಹ್ನ ಏಕಾಏಕಿ ಸುಜೀರ್ನಲ್ಲಿರುವ ಆಕೆಯ ಮನೆಗಾಗಮಿಸಿ ಚೂರಿಯಿಂದ ಇರಿದು ಮಾರಣಾಂತಿಕವಾಗಿ ಹಲ್ಲೆಗೈದು ಅಲ್ಲೆ ತಪ್ಪಿಸಿಕೊಂಡು ಕುಳಿತಿದ್ದ, ಬೊಬ್ಬೆ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ಆಕೆಯ ತಾಯಿಗೆ ಕರೆ ಮಾಡಿದ್ದು, ಮನೆಗೆ ಆಗಮಿಸಿದ ತಾಯಿ ದಿವ್ಯಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮಧ್ಯೆ ತನ್ನ ಪ್ರೇಯಸಿ ದಿವ್ಯ ಸಾವನ್ನಪ್ಪಿರಬೇಕೆಂದು ಭಾವಿಸಿ ತನ್ನತಪ್ಪಿನ ಅರಿವಾಗಿ ಸುಧೀರ್ ಆಕೆಯ ಮನೆಯೊಳಗೆ ಪ್ರವೇಶಿಸಿ ನೇಣು ಹಾಕಿಕೊಂಡಿದ್ದಾನೆ.
ಸುಧೀರ್ ಈ ಹಿಂದೆ ಕೂಡ ಟವರ್ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಈಕೆಯನ್ನು ಹೆದರಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.