ತಾರಾತಿಗಡಿ: ರಾಜ್ಯದಲ್ಲಿ ಏನೇನೋನಡೀತಾ ಇದೆ ಇವರಿಗೇನು ಕೆಲಸವಿಲ್ಲವೇ ಎಂದು ಅಮೆರಿಕದಲ್ಲಿ ಭಯಂಕರ ಸಿಟ್ಟಿಗೆದ್ದಿದ್ದಾನಂತೆ. ತನಗೆ ಸಂಬಂಧಿಸಿದ್ದು ಅಲ್ಲದಿದ್ದರೂ ಮುಂದೊಂದು ದಿನ ನಾನು ಕರೆ ಮಾಡಿ ಎಲ್ಲ ಬಗೆಹರಿಸಿದೆ ಎಂದು ಹೇಳಲು ಬರುತ್ತದೆ ಎಂದು ಟ್ರಂಪೇಸಿಯ ಪ್ಲಾನಾಗಿತ್ತು.
ಟ್ರಂಪೇಸಿಯ ಬಗ್ಗೆಯೂ ಎಲ್ಲರಿಗೂ ತಿಳಿದಿತ್ತು. ಎಲ್ಲದರಲ್ಲೂ ನಾನು ನಾನು ಎಂದು ಅಂತಿದೆ. ಬರೋಬ್ಬರಿ ಪಾಠ ಕಲಿಸಬೇಕು ಎಂದು ಪ್ರತಿಯೊಬ್ಬರು ನಿರ್ಧರಿಸಿದ್ದರು. ಟ್ರಂಪೇಸಿ ಅವತ್ತು ಫೋನ್ ತೆಗೆದು ನಂಬರ್ ಡೈಲ್ ಮಾಡಿದ ಆ ಕಡೆಯಿಂದ ರಿಂಗಾಗಿ ಎತ್ತಿದ ಕೂಡಲೇ…
ಟ್ರಂಪೇಸಿ ಎದುರಿಗೆ ಇದ್ದವರಿಗೆ ಕಣ್ಣು ಹೊಡೆದು…ಹಲೋ ಸೋದಿ ಮಾಮೋರಾ? ಎಂದು ಕೇಳಿದ…ಅದಕ್ಕೆ ಸೋದಿ ಮಾಮಾ..ಏಯ್ ಈಗ ಮಾಡಿದ್ಯಾ ನೀನು..ಮೊನ್ನೆ ಬಸ್‌ಚಾರ್ಜಿಗೆ ಅಂತ ನೂರು ರೂಪಾಯಿ ಇಸಿದುಕೊಂಡಿದ್ದು ಯಾವಾಗ ಕೊಡುತ್ತಿ? ಅಂದಾಗ…
ಸಾ…ಸಾರಿ ರಾಂಗ್ ನಂಬರ್ ಎಂದು ಕಟ್ ಮಾಡಿದ ಟ್ರಂಪೇಸಿ ಮೊಬೈಲ್ ನಂಬರ್ ಮತ್ತೊಮ್ಮೆ ಪರಿಶೀಲಿಸಿಕೊಂಡು ಇದೇ ನಂಬರ್ ಅಲ್ವಾ ಮಾಮೋರದ್ದು ಅಂದುಕೊಂಡ..ಯಾಕಿದ್ದೀತು ಬಿಡು ಅಲ್ಲಿನವರಿಗೇ ಕಾಲ್ ಮಾಡುತ್ತೇನೆ ಎಂದು ಪಂ. ಲೇವೇಗೌಡರಿಗೆ ಕಾಲ್ ಮಾಡಿದ….
ಹಲೋ ನಾನು ಟ್ರಂಪೇಸಿ ಅಂದ ಕೂಡಲೇ…ಲೇವೇಗೌಡರು…ಲೇ ತಿಪ್ಪೇಸಿ…ನೀ ಎಲ್ಲಿದ್ದೀಯ? ಮೊನ್ನೆ ಬೆಳ್ಳಿಹಬ್ಬದಲ್ಲಿ ನೀರು ತಂದು ಕೊಡು ಅಂತ ನಾ ಹೇಳಿದರೆ ಆ ಕಡೆ ಹೋದವನು ಬರಲೇ ಇಲ್ಲ..
ಇಲ್ಲಿ ಬಾ ಮಾಡ್ತೀನಿ ನಿಂಗೆ ತಿಪ್ಪೇಸಿ ಅಂದ ಕೂಡಲೇ ಗಾಬರಿಯಾದ ಟ್ರಂಪೇಸಿ..ಅಲಾ ಇ…ಇವರಿಗ್ಯಾರಿಗೂ ಬೇಡ ಎಂದು ಬಂಡೇಸಿಗೆ ಕಾಲ್ ಮಾಡಿ..ಅಲೋ ನಾನು ಟ್ರಂಪೇಸಿ ಅಂತ ಹೇಳಿದರು. ಅದಕ್ಕೆ ಬಂಡೇಸಿ…
ಹೇಳಪಾ ದನಿ ಚೇಂಜ್ ಮಾಡಿದರೆ ನನಗೇನೂ ಗೊತ್ತಾಗುವುದಿಲ್ಲವೇ? ನಿನಗೆ ಬೇಲ್ ಕೊಡಿಸೋಕೆ ಸಹಾಯ ಮಾಡಲ್ಲ ಕಣೋ ಅಂದರು. ತಥ್ ಎಂದುಕೊಂಡು..ಇನ್ನು ಏನಿದ್ದರೂ ಮದ್ರಾಮಣ್ಣನವರಿಗೆ ಕಾಲ್ ಮಾಡಿ ತಿಳಿದುಕೊಳ್ಳೋಣ ಎಂದು ಮದ್ರಾಮಣ್ಣನವರ ನಂಬರ್ ತಿರುಗಿಸಿ ಹಲೋ ಅಂದಾಕ್ಷಣಾ…
ಅವತ್ತು ಪಂಕ್ಸನ್ ನಲ್ಲಿ ಏನೇನೋ ಅಂದಿದ್ದಿ..ಪೊಲೀಸರಿಗೆ ಹೇಳಿ ಟ್ರ್ಯಾಕ್ ಮಾಡಸ್ತೀನಿ ಅಂದ ಕೂಡಲೇ ಇವರಾರೂ ಯಾರ ಪಟ್ಟಿಗೂ ಬಗ್ಗುವವರಲ್ಲ ಎಂದು ಸ್ವಿಚ್ಚಾಫ್ ಮಾಡಿದ ಟ್ರಂಪೇಸಿ.
