ಎಲ್ಲೆಡೆ ಕ್ರಾಂತಿಗೀತೆಗಳು ಮೊಳಗುತ್ತಿವೆ. ಎಲ್ಲರೂ ಕ್ರಾಂತಿ ಬಗ್ಗೆ ಮಾತನಾಡುತ್ತಿದ್ದಾರೆ. ‘ಲೊಂಡೆನುಮನಿಗಂತೂ ಕೂತರೂ ಕ್ರಾಂತಿ-ನಿಂತರೂ ಕ್ರಾಂತಿ. ಹೀಗೆ ಕ್ರಾಂತಿಯ ಬಗ್ಗೆ ಎಲ್ಲ ಕಡೆ ಸುದ್ದಿಯಾದಾಗ… ಇನ್ನೊಂದೆಡೆ…ಯಾವ ಕ್ರಾಂತಿನೂ ಇಲ್ಲ ಭ್ರಾಂತಿನೂ ಇಲ್ಲ ಎಂದು ಹಲವರು ಜೋರು ಜೋರಾಗಿ ಮಾತನಾಡು ತ್ತಿದ್ದರು.
ಅಲಾ ಇನ್ನ ಇದರ ಹಿಂದೆ ಇರುವುದಾದರೂ ಏನು ಎಂದು ಚಿಂತೆ ಹಚ್ಚಿಕೊಂಡ ಕರಿಲಕ್ಷುಂಪತಿ ಈ ಕ್ರಾಂತಿ ಸುದ್ದಿಯ ಮೂಲ ಯಾರು? ಇದನ್ನು ಯಾಕೆ ಹಬ್ಬಿಸಿದರು…ಇದರ ಹಿಂದೆ ಇರುವುದಾದರೂ ಏನು ಎಂದು ಪತ್ತೆ ಹಚ್ಚಲು ಊರೂರು ಅಲೆಯತೊಡಗಿದ. ಮೊದಲಿಗೆ ಲಾದುಂಚಿಗೆ ಹೋಗಿ ಅಲ್ಲಿ ಪಂ. ಲೇವೇಗೌಡರನ್ನು ಕಂಡು ನೋಡಿ ಸ್ವಾಮಿ ನೀವು ಅನುಭವಸ್ಥರು..ಹಿಂಗೆ ಸುದ್ದಿ ಹಬ್ಬಿಸಿದ್ದಾರೆ…
ಇದರ ಹಿಂದೆ ಯಾರಿದ್ದಾರೆ ಎಂದು ಕೇಳಿದಕ್ಕೆ ಅವರು…ನೊಡಪಾ ಇದರ ಹಿಂದೆ ಇದ್ದಾರೊ ಇಲ್ಲೋ ಗೊತ್ತಿಲ್ಲ. ಅಕ್ಕ-ಪಕ್ಕ ಮಾತ್ರ ಇದ್ದಾರೆ ಎಂದು ಹೇಳಿದರು… ಇದು ಕರಿಲಕ್ಷುಂಪತಿಗೆ ಏನೇನೂ ಅರ್ಥವಾಗಲಿಲ್ಲ. ನಂತರ ಸಿಟ್ಟೂರಪ್ಪನವರ ಹತ್ತಿರ ಹೋಗಿ ಸಾ…ಕ್ರಾಂತಿ ಹಿಂದೆ ಯಾರಿದ್ದಾರೆ…ಆಗಲೇ ಎರಡನೇ ಶನಿವಾರ ಬಂತು…
ಇನ್ನೂ ಏನು ಸುದ್ದಿ ಬರುತ್ತಿಲ್ಲ…ಹೆಂಗೆ ಸ್ವಾಮಿ ಅಂದರು…ಅವರು…ನನಗೆ ಮೊದಲೇ ಗೊತ್ತಿತ್ತು..ಹೀಗಾಗುತ್ತದೆ ಎಂದು ನೀನು ಸುಮ್ಮನೇ ನಿನ್ನ ಕೆಲಸ ಮಾಡಿಕೊಂಡಿರು ಎಂದು ಬೈಯ್ದರು… ಅಲ್ಲಿಂದ ಗುತ್ನಾಳ್ ಸಾಹೇಬನ ಹತ್ತಿರ ಬಂದು ಇಂಗಿಂಗೆ ಇದರ ಬಗ್ಗೆ ತಮಗೇನಾದರೂ ಗೊತ್ತ? ಎಂದು ಕೇಳಿದಾಗ…ಇದಕ್ಕೆ ಕಾರಣ ಪೂಜ್ಯ ತಂದೆಯವರು ಅಂದರು.
ಓಹೋ ಅಂದ ಕರಿಲಕ್ಷುಂಪತಿ…ಇದರ ಬಗ್ಗೆ ಯಾರೂ ಏನೂ ಹೇಳುತ್ತಲೇ ಇಲ್ಲ…ಈ ತಿಂಗಳ ಕ್ರಾಂತಿ ಅಂದಿದ್ದರು…ಲೊಂಡೆನುಮ ಮನಸ್ಸಿಗೆ ಹಚ್ಚಿಕೊಂಡು ಊಟ ಕಡಿಮೆ ಮಾಡಿದ್ದಾನೆ…ನನ್ನದೋ ತೀರ ಹಠ…ಎಂದು ಅಲ್ಲಿಂದ ಕಂಟ್ರಂಗಮ್ಮನ ಹತ್ತಿರ ಹೋಗಿ…ಇದರ ಹಿಂದೆ ಯಾರಿದ್ದಾರೆ ಎಂದು ಕೇಳಿದಾಗ….
ಇಲ್ಲಿಂದ ಏಳು ಮೈಲಿ…ಏಳು ಮರ, ಏಳು ಬೆಟ್ಟ…ಏಳು ನದಿ ದಾಟಿದರೆ ಏಳು ಆಲದ ಮರಗಳು ಸಿಗುತ್ತವೆ…ಏಳನೇ ಮರದಲ್ಲಿ ಗಿಳಿ ಇದೆ…ಅಲ್ಲಿಗೆ ಹೋಗಿ ಆ ಗಿಳಿ ಹಿಡಿದುಕೊಂಡು ಬಾ ನಾನು ಹೇಳುವೆ ಅಂದಳು…ಕರಿಲಕ್ಷುಂಪತಿ ಮೂರ್ಛ ಹೋದ.
