ತಾರಾತಿಗಡಿ: ಓಟು ಕಳವು ಮಾಡಿದ್ದಾರಂತೆ ಅವರೇನೋ ಇವರ ಮೇಲೆ ಹಾಕುತ್ತಿದ್ದಾರಂತೆ ಇದನ್ನು ಸರಿಯಾಗಿ ಪತ್ತೆ ಹಚ್ಚಿ ಹೇಳಿದರೆ ಸೂಕ್ತ ಬಹುಮಾನ ಇದೆಯಂತೆ ಎಂದು ಹೊಟೆಲ್ ಶೇಷಮ್ಮನಿಗೆ ಯಾರದ್ದೋ ಹೆಸರಿನಲ್ಲಿ ಯಾವುದೋ ವ್ಯಕ್ತಿ ಫೋನ್ ಮಾಡಿ ಹೇಳಿದ್ದನಂತೆ. ಅಯ್ಯೋ ಅಂಥವರು ನನಗೆ ಕಾಲ್ ಮಾಡಿ ಹೇಳಿದ್ದಾರೆ ಅಂದರೆ ನನ್ನ ಲೆವೆಲ್ ಸಣ್ಣದೇನಲ್ಲ ಎಂದು ಭಾವಿಸಿದ ಶೇಷಮ್ಮ ಹೇಗಾದರೂ ಮಾಡಿ ಬಹುಮಾನವನ್ನು ಗಿಟ್ಟಿಸಬೇಕು ಎಂದು ಅಂದುಕೊಂಡಳು.
ಈ ಬಹುಮಾನ ಬಂದರೆ ಲಗ್ನಕ್ಕೆ ಮಾಡಿದ್ದ ಸಾಲ ಎಲ್ಲ ತೀರಿಸಬಹುದು ಎಂದು ಲೆಕ್ಕಹಾಕಿದಳು. ಮರುದಿನದಿಂದಲೇ ಆಕೆಯ ಪತ್ತೆದಾರಿ ಕೆಲಸ ಆರಂಭವಾಯಿತು. ಕಿವುಡನುಮಿ ಮಂಡಾಳೊಗ್ಗಣ್ಣಿ ತಿನ್ನಲು ಹೊಟೆಲ್ಗೆ ಬಂದಳು. ಆಕೆಯನ್ನು ಮಾತನಾಡಿಸಿದ ಶೇಷಮ್ಮ ನೀನೊಂತರಾ ಗೂಗಲ್ ಇದ್ದಂತೆ ಎಲ್ಲ ವಿಷಯಗಳೂ ನಿನಗೆ ಗೊತ್ತಿರುತ್ತದೆ ಅಲ್ವ ಅಂದಾಗ ಖುಷಿಯಾದ ಕಿವುಡನುಮಿ ಹೌದೌದು ಅಂದಳು…ಅಲ್ಲ ಅವರೇ ಮತಕಳು ಮಾಡಿದ್ದಾರೆ ಎಂದು ಇವರು ಅನ್ನುತ್ತಿದ್ದಾರೆ ನಿನಗೆ ಯಾರು ಕಳವು ಮಾಡಿದ್ದಾರೆ ಎಂದು ಏನಾದರೂ ಗೊತ್ತೆ? ಅಂದಳು…ನನಗೆ ಸ್ವಲ್ಪ ಟೈಂ ಕೊಡು ಅಂದಳು.
ವಗ್ಗಣಿ ತಿಂದ ಹಣ ಇಸಿದುಕೊಳ್ಳದೇ ಶೇಷಮ್ಮ ಆಕೆಯನ್ನು ಹಾಗೆ ಕಳುಹಿಸಿದಳು. ಮರುದಿನ ಲೊಂಡೆನುಮ ತನ್ನ ನಾಲೈದು ಹಿಂಬಾಲಕರ ಜತೆ ಬಂದು ಹೊಟ್ಟೆ ತುಂಬ ತಿಂದ…ಆತನನ್ನು ಸೈಡಿಗೆ ಕರೆದ ಶೇಷಮ್ಮ ಮತಕಳವಿನ ಬಗ್ಗೆ ಕೇಳಿದಳು…ಓಹೋ..ನನಗೆ ಕೆಲವರ ಮೇಲೆ ಅನುಮಾನ ಇದೆ ನಿನಗೆ ಹೇಳುತ್ತೇನೆ ಸ್ವಲ್ಪ ದಿನ ತಡಿ ಅಂದ. ಆತನ ಹತ್ತಿರವೂ ಬಿಲ್ ಇಸಿದುಕೊಳ್ಳದೇ ಕಳುಹಿಸಿದಳು.
ಶೇಷಮ್ಮ ಹೀಗೆ ಕೇಳುತ್ತಾಳೆ..ಟಿಫಿನ್ ದುಡ್ಡು ಇಸಿದುಕೊಳ್ಳುವುದಿಲ್ಲ ಎಂದು ಕಿವಿಯಿಂದ ಕಿವಿಗೆ ಸುದ್ದಿ ಹರಡಿತು…ಚಾಟಿನಿಂಗ, ಕರಿಭಾಗೀರತಿ, ಬಗೀಕಾನಿ, ಕೊಲಮಿ ಈಸ್ಕಪ್ಪ ಹೀಗೆ ಅನೇಕರು ಬಂದು ಮತಕಳ್ಳರನ್ನು ಹಿಡಿದುಕೊಡುವ ಮಾತನಾಡಿದರು..ಎಲ್ಲರ ಹತ್ತಿರವೂ ಹಣ ಇಸಿದುಕೊಳ್ಳದ ಶೇಷಮ್ಮಳಿಗೆ ಎಲ್ಲೋ ಒಂದು ಕಡೆ ಮಿಸ್ ಹೊಡೆದು… ಇನ್ನು ಸಾಕು ಮಾಡೋಣ ಎಂದುಕೊಂಡಳು. ಅಂದು ರಾತ್ರಿ ಟಿವಿ ಹಚ್ಚಿದಾಗ…ಆ ಹುಡುಗ…ಇವರೇ ಮತ ಕದ್ದದ್ದು..ಇವರೇ ಕದ್ದದ್ದು ಎಂದು ಜೋರಾಗಿ ಹೇಳುತ್ತಿದ್ದ. ಶೇಷಮ್ಮಳಿಗೆ ಎಲ್ಲವೂ ಅರ್ಥವಾಗಿ, ಬಿಲ್ ಇಸಿದುಕೊಳ್ಳದವರಿಗೆ ತಿಂದ ಹಣ ಕೊಡು ಎಂದು ಗಂಟುಬಿದ್ದಳು.
