ತಾರಾತಿಗಡಿ: ಗಿಳಿಶಾಸ್ತ್ರದ ಮೂಲಕವೇ ಭರ್ಜರಿ ಪ್ರಸಿದ್ದಿ ಪಡೆದಿದ್ದ ಗಿರ್ಕಿ ಗುಂಡಪನ ಗತ್ತು ವರ್ಣಿಸಲು ಅಸಾಧ್ಯವೆಂಬಂತೆ ಆಗಿತ್ತು. ಶಾಲೆಗಂತೂ ಹೋಗಲೇ ಇಲ್ಲ. ಗೈರತ್ತು ವಣಿ ಸುಮ್ಮನೇ ತಿರುಗಾಡುತ್ತಿದ್ದ ಗುಂಡ ಕೆಟ್ಟು ಕೆರಹಿಡಿದು ಹೋಗುತ್ತಾನೆ ಎಂದು ಆತನ ಸೋದರಮಾವ ಸೀನಪ್ಪ ಬಹಳ ಚಿಂತೆ ಮಾಡುತ್ತಿದ್ದ.
ಅವತ್ತು ಆತನನ್ನು ಮಾರುಕಟ್ಟೆಗೆ ಕರೆದುಕೊಂಡು ಹೋದಾಗ..ಅಲ್ಲಿ ಗಿಳಿಮರಿ ಬೇಕೆಂದು ಗುಂಡಪ್ಪ ಹಠ ಮಾಡಿದಾಗ ಹಾಳಾಗಿ ಹೋಗಲಿ ಎಂದು ಸೀನಪ್ಪ ಆತನಿಗೆ ಗಿಳಿ ಕೊಡಿಸಿದ. ಅಂದಿನಿಂದ ಗುಂಡನ ಟೈಮ್ಟೇಬಲ್ಲೇ ಬದಲಾಯಿತು. ದಿನಾಲೂ ಗಿಳಿ ಜತೆ ಆಟ ಆಡುತ್ತಿದ್ದ. ಸೀಟಿ ಹೊಡೆದರೆ ಅದೂ ಸೀಟಿ ಹೊಡೆಯುತ್ತಿತ್ತು.
ತಾನು ಇಸ್ಪೀಟು ಆಡಲು ಹೋದಾಗ ಅದನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದ. ಇದು ಲಕ್ಕಿಗಿಳಿ ಎಂದು ಅದರ ಕಡೆಯಿಂದಲೇ ಇಸ್ಪೀಟ್ ಎಲೆ ತೆಗೆಸುತ್ತಿದ್ದಾಗಲೆಲ್ಲ ಗೆಲ್ಲುತ್ತಿದ್ದ. ಮುಂದೆ ಹಲವು ಕಾರ್ಡುಗಳನ್ನು ಮಾಡಿಸಿ ಪಂಜರದೊಳಗೆ ಗಿಳಿಯನ್ನು ಹೊರಗೆ ಕರೆದು ಕಾರ್ಡು ತೆಗೆದುಕೊಡು ಎಂದು ಹೇಳುತ್ತಿದ್ದ.
ಅದು ಹಾಗೆ ಮಾಡುತ್ತಿತ್ತು. ಹೀಗೆ ಯಾರ್ಯಾರಿಗೋ ಏನೇನೋ ಹೇಳಿದ. ನೋಡ ನೋಡುತ್ತಿದ್ದಂತೆ ಗಿಳಿಶಾಸ್ತ್ರದ ಗುಂಡಪ್ಪನಾಗಿ ಪ್ರಸಿದ್ಧಿ ಪಡೆದಿದ್ದ. ಚುನಾವಣೆ ಸಂದರ್ಭದಲ್ಲಂತೂ ಮನೆಯ ಮುಂದೆ ಜನ ಜಾತ್ರೆಯಂತೆ ಸೇರುತ್ತಿದ್ದರು. ಈಗೀಗಂತೂ ಕುರ್ಚಿ ಯಾರಿಗೆ ಎಂದು ಕೇಳಲು ಬರುವವರ ಸಂಖ್ಯೆ ಹೆಚ್ಚಾಯಿತು.
ಆ ಕಡೆಯವರಿಗೆ ಈ ಬಾರಿ ಕುರ್ಚಿ ನಿಮ್ಮ ಬಾಸ್ಗೆ ಗ್ಯಾರಂಟಿ ಎಂದು ಹೇಳುತ್ತಿದ್ದ. ಈ ಕಡೆಯವರು ಬಂದರೆ…ನಿಮ್ಮ ಬಾಸ್ನನ್ನು ಕುರ್ಚಿ ಬಿಟ್ಟು ಇಳಿಸಲು ಹರಿಬ್ರಹ್ಮನಿಂದಲೂ ಸಾಧ್ಯವಿಲ್ಲ ಅನ್ನುತ್ತಿದ್ದ. ಈ ಮಧ್ಯೆ ಕಮಲೇಸಿ ಗಾಂಗಿನವರು ಬಂದರೆ…ಬಾರೋ ಗಿಣಿರಾಮಾ…ಸಾಹೇಬು ಬಂದಾರೆ.
ಬಾ ಎಂದು ಕರೆದು ಕಾರ್ಡು ತೆಗೆಸಿ…ಕುರ್ಚಿ ಸಲುವಾಗಿ ಕಾಳಗ ನಡೆದು ಕೊನೆಗೆ ನಿಮ್ಮವರ ಪಾಲು ಆಗೇ ಆಗುತ್ತದೆ ನೋಡುತಿರಿ ಎಂದು ಹೇಳಿ ಮೂವರ ಕಡೆಯೂ ಹಣ ಇಸಿದುಕೊಳ್ಳುತ್ತಿದ್ದ. ಮೊದಲಿನಿಂದಲೂ ಕೈ ನೋಡಿ ಭವಿಷ್ಯ ಹೇಳುತ್ತಿದ್ದ ಕರಿಲಕ್ಷುಂಪತಿ ಗುಂಡಪ್ಪನಿಂದಾಗಿ ಬಕ್ಕಬಾರಲೆ ಬಿದ್ದು ಹೋಗಿದ್ದ.
ಅದೇ ಸಿಟ್ಟು ಆತನಲ್ಲಿತ್ತು. ಒಂದು ದಿನ ಯಾರು ಇಲ್ಲದ ಸಮಯ ನೋಡಿ ಪಂಜರದಿಂದ ಆ ಗಿಣಿಯನ್ನು ಕದ್ದುಕೊಂಡು ಮೂರನೇ ಅಂತಸ್ತಿನ ಬಿಲ್ಡಿಂಗ್ನಲ್ಲಿರುವ ಸಾಹೇಬರ ಕೊಠಡಿ ಮುಂದೆ ಬಿಟ್ಟ. ಅಂದಿನಿಂದ ಅಲ್ಲಿಯೇ ಇರುವ ಆ ಗಿಣಿ…ಅವರ ಕಡೆಯವರು ಬಂದರೆ ಈ ಬಾರಿ ನಿಮ್ಮದೇ ಕುರ್ಚಿ ಅನ್ನುತ್ತಿದೆ.
ಇವರ ಕಡೆಯವರು ಬಂದರೆ ನಿಮ್ಮದೇ ಗ್ಯಾರಂಟಿ ಅನ್ನುತ್ತಿದೆ. ಕಮಲೇಸಿ ಕಡೆಯವರು ಬಂದರೆ ಅವರಿಗೂ ಇಲ್ಲ–ಇವರಿಗೂ ಇಲ್ಲ..ನಿಮಗೇ ಎಲ್ಲ ಅನ್ನುತ್ತಿದೆ. ಈಗ ಎಲ್ಲರಿಗೂ ಆ ಗಿಣಿ ಭಯಂಕರ ಪ್ರಿಯವಾಗಿದೆ.
