ಬಾಗಲಕೋಟೆ(ಕುಳಗೇರಿ ಕ್ರಾಸ್): ಆಧಾರ್ ಕಾರ್ಡ್ ಪಡೆಯಲು ಅಲೆದು ಸುಸ್ತಾದ ವಿಕಲಚೇತನ ಯುವತಿ ಸರಕಾರದ ಸವಲತ್ತುಗಳಿಂದ ವಂಚಿತಳಾಗಿದ್ದಾಳೆ.
ಹೌದು, ಐಶ್ವರ್ಯ ಎಂಬಾಕೆಗೆ ಸರಕಾರದ ಸವಲತ್ತುಗಳಿಂದ ವಂಚಿತಳಾಗಿದ್ದು, ಇವಳಿಗೆ ಬೇಕಿರುವುದು ಸರಕಾರದ ಆಧಾರ್ ಕಾರ್ಡ್. ಆಧಾರ್ ಕಾರ್ಡ್ ಇಲ್ಲದೆ ಒಂದುವರೆ ವರ್ಷದಿಂದ ನನಗೆ ಬರುವ ಸರಕಾರದ ಮಾಸಾಶನವು ಬರುತ್ತಿಲ್ಲ. ಸರಕಾರದ ಸವಲತ್ತು ಸಂಪೂರ್ಣ ಬಂದ್ ಆಗಿವೆ. ಆಧಾರ್ ಕಾರ್ಡ್ ನೋಂದಣಿಗಾಗಿ ಸಾಕಷ್ಟು ಅಲೆದಿದ್ದೇನೆ ಏನೂ ಪ್ರಯೋಜನವಾಗಿಲ್ಲ ಎಂದು ಪತ್ರಿಕೆ ಜೊತೆ ತನ್ನ ಸಮಸ್ಯೆಯನ್ನು ಹೇಳಿದ್ದಾಳೆ.
ಆಲೂರ ಎಸ್‌ಕೆ ಗ್ರಾಮದ 18 ವರ್ಷದ ಯುವತಿ ಐಶ್ವರ್ಯ ಗುರಪ್ಪ ಹಿರ್ಲವರ ಸರಕಾರದ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಬೇಕಾಗಿದೆ. ಸುಮಾರು ಒಂದುವರೆ ವರ್ಷದಿಂದ ಇತಳ ಆಧಾರ್ ಕಾರ್ಡ್ ಅಪ್ಡೇಟ್ ಆಗಿಲ್ಲ. ಆಧಾರ್ ಇಲ್ಲದೆ ಬ್ಯಾಂಕ್ ಖಾತೆ ಇ ಕೆವೈಸಿ ಆಗುತ್ತಿಲ್ಲ. ಸರಕಾರದ ಮಾಸಾಶನವೂ ಬರುತ್ತಿಲ್ಲ. ಸಾಕಷ್ಟು ಬಾರಿ ಆಧಾರ್ ಕಾರ್ಡ್ ನೋಂದಣಿಗಾಗಿ ಪೋಷಕರು ಅಲೆದು ಸುಸ್ತಾಗಿದ್ದಾರೆ.
35 ಕೆಜಿ ತೂಕ ಇರುವ ವಿಕಲಚೇತನ ಐಶ್ವರ್ಯಳನ್ನು ಆಧಾರ್ ನೋಂದಣಿಗಾಗಿ ಹೆಗಲ ಮೇಲೆ ಹೊತ್ತುಕೊಂಡು ಹೋಬಳಿ, ತಾಲೂಕು ಸೇರಿದಂತೆ ಜಿಲ್ಲೆಯ ಆಧಾರ್ ಕೇಂದ್ರಕ್ಕೂ ಹೋಗಿ ಪ್ರಯತ್ನಿಸಿದ್ದಾರಂತೆ. ಆದರೆ ಅವಳ ಬೆರಳಚ್ಚು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾರಂತೆ. ಆಧಾರ್ ಇಲ್ಲದೆ ಕುಟುಂಬಕ್ಕೆ ಪಡಿತರ ಅಕ್ಕಿಯೂ ಸಿಗುತ್ತಿಲ್ಲ. ಹೆತ್ತ ಮೂರೂ ಮಕ್ಕಳು ವಿಕಲಚೇತನರಾಗಿದ್ದು ಸದ್ಯ ಹೆತ್ತ ತಾಯಿಗೆ ತನ್ನ ಮಕ್ಕಳ ಮುಂದಿನ ಭವಿಷ್ಯದ ಚಿಂತೆ ಕಾಡತೊಡಗಿದೆ.
ಆಲೂರ ಎಸ್‌ಕೆ ಗ್ರಾಮದ 18 ವರ್ಷದ ಯುವತಿ ಐಶ್ವರ್ಯ ಹಿರ್ಲವರ, 15 ವರ್ಷದ ಸಿದ್ದಾರೂಢ ಹಿರ್ಲವರ, 12 ವರ್ಷದ ನಾಗರಾಜ ಹಿರ್ಲವರ ಶಾಶ್ವತ ಅಂಗವಿಕಲರು. ಈ ಮೂರು ಜನ ಮಕ್ಕಳ ಜೀವನ ಹತ್ತು ಅಡಿ ಜಾಗದಲ್ಲೇ. ತಮ್ಮ ಮನೆಯ ಮುಂದಿರುವ 10 ಅಡಿ ಕಟ್ಟೆ ಮೇಲೆಯೇ ಕುಳಿತು ಮಲಗಿದಲ್ಲೇ ಇವರು ತಮ್ಮ ಜೀವನ ನಡೆಸುತ್ತಿದ್ದಾರೆ. ಮನೆಯ ಅಂಗಳದಲ್ಲಿ ಹೋಗಿ ಬರುವ ಜನರನ್ನ ನೋಡುತ್ತ ಕಾಲ ಕಳೆಯುತ್ತಿರುವ ಇವರು ವಿಕಲಚೇತನರಾದರೂ ಮಾತನಾಡಲು ಬಲು ಬುದ್ದಿವಂತರು.
ಶಾಲೆ ಕಲಿಯಲು ಮಹಾದಾಸೆ ಇಟ್ಟುಕೊಂಡಿದ್ದ ಐಶ್ವರ್ಯಗೆ ಈಗ 18 ವರ್ಷ. ಮನೆಯಲ್ಲೇ ಪ್ರೌಢ ಶಿಕ್ಷಣ ಮುಗಿಸಿದ ಅಂಗವಿಕಲೆ ಐಶ್ವರ್ಯ ಒಂದು ದಿನವೂ ಶಾಲೆಗೆ ಹೋಗಿಲ್ವಂತೆ. ತಮ್ಮ ಇಬ್ಬರು ತಮ್ಮಂದಿರ ಜೊತೆ ದಿನ ಕಳೆಯುತ್ತಿದ್ದಾಳೆ. ಸದ್ಯ ಮೂರು ಜನ ವಿಕಲಚೇತನರು ಸರಕಾರದ ಸೌಲಭ್ಯದಿಂದ ದೂರ ಉಳಿದಿದ್ದಾರೆ.
