Home ಕ್ರೀಡೆ WPL 2026: ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು RCBಯ ‘ಪಂಚತಂತ್ರ’!

WPL 2026: ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು RCBಯ ‘ಪಂಚತಂತ್ರ’!

0

WPL: ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಆವೃತ್ತಿಗೆ ವೇದಿಕೆ ಸಜ್ಜಾಗುತ್ತಿದ್ದು, ಈ ಬಾರಿ ಮೆಗಾ ಹರಾಜು ನಡೆಯಲಿರುವುದು ಫ್ರಾಂಚೈಸಿಗಳ ಪಾಳಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. 2024ರ ಚಾಂಪಿಯನ್ ಆಗಿ ಮೆರೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ, ತಮ್ಮ ಗೆಲುವಿನ ಓಟವನ್ನು ಮುಂದುವರಿಸುವ ನಿಟ್ಟಿನಲ್ಲಿ ಬಲಿಷ್ಠ ತಂಡವನ್ನು ಮರುನಿರ್ಮಿಸುವ ದೊಡ್ಡ ಸವಾಲು ಎದುರಾಗಿದೆ.

ಮೆಗಾ ಹರಾಜಿನ ನಿಯಮದ ಪ್ರಕಾರ, ಪ್ರತಿ ಫ್ರಾಂಚೈಸಿಯು ಗರಿಷ್ಠ ಐವರು ಆಟಗಾರ್ತಿಯರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದ್ದು, ನವೆಂಬರ್ 5ರೊಳಗೆ ಈ ಪಟ್ಟಿಯನ್ನು ಸಲ್ಲಿಸಬೇಕಿದೆ. ಹೀಗಾಗಿ, RCB ಯಾವ ಆಟಗಾರ್ತಿಯರನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂಬ ಚರ್ಚೆ ಜೋರಾಗಿದೆ.

ಹೊಸ ನಿಯಮದ ಪ್ರಕಾರ, ಉಳಿಸಿಕೊಳ್ಳುವ ಆಟಗಾರ್ತಿಯರಿಗೆ ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗಿದೆ. ಮೊದಲ ಆಟಗಾರ್ತಿಗೆ ರೂ.3.50 ಕೋಟಿ, ಎರಡನೇ ಆಟಗಾರ್ತಿಗೆ ರೂ.2.50 ಕೋಟಿ, ಮೂರನೆಯವರಿಗೆ ರೂ.1.75 ಕೋಟಿ, ನಾಲ್ಕನೆಯವರಿಗೆ ರೂ.1 ಕೋಟಿ ಮತ್ತು ಐದನೇ ಆಟಗಾರ್ತಿಗೆ ರೂ. 50 ಲಕ್ಷ ನಿಗದಿಯಾಗಿದೆ.

ಅಂದರೆ, ಒಟ್ಟು ರೂ.9.25 ಕೋಟಿ ಖರ್ಚು ಮಾಡಿ, ತಮ್ಮ ತಂಡದ ಪ್ರಮುಖ ಶಕ್ತಿಯನ್ನು RCB ಉಳಿಸಿಕೊಳ್ಳಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ, ಆರ್‌ಸಿಬಿ ಈ ಐದು ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

1. ಸ್ಮೃತಿ ಮಂಧಾನ (ನಾಯಕಿ): ಆರ್‌ಸಿಬಿ ತಂಡದ ಮೊದಲ ಆಯ್ಕೆ ನಿಸ್ಸಂದೇಹವಾಗಿ ನಾಯಕಿ ಸ್ಮೃತಿ ಮಂಧಾನ. ತಮ್ಮ ನಾಯಕತ್ವದಲ್ಲಿ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟಿರುವ ಸ್ಮೃತಿ, ತಂಡದ ಆಧಾರಸ್ತಂಭವಾಗಿದ್ದಾರೆ. ಆರ್‌ಸಿಬಿ ಪರ 26 ಪಂದ್ಯಗಳಲ್ಲಿ 646 ರನ್ ಗಳಿಸಿರುವ ಅವರು, ತಂಡದ ಮುಖವಾಗಿದ್ದಾರೆ. ಹೀಗಾಗಿ, ರೂ.3.50 ಕೋಟಿ ನೀಡಿ ಅವರನ್ನು ಉಳಿಸಿಕೊಳ್ಳುವುದು ಖಚಿತ.

2. ಎಲ್ಲಿಸ್ ಪೆರ್ರಿ (ಆಲ್‌ರೌಂಡರ್): ಆಸ್ಟ್ರೇಲಿಯಾದ ಅನುಭವಿ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ, ಆರ್‌ಸಿಬಿಯ ಬೆನ್ನೆಲುಬು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಥಿರ ಪ್ರದರ್ಶನ ನೀಡಿರುವ ಅವರು, 2024ರ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆಡಿರುವ 25 ಪಂದ್ಯಗಳಿಂದ 972 ರನ್ ಮತ್ತು 14 ವಿಕೆಟ್‌ಗಳನ್ನು ಪಡೆದಿರುವ ಪೆರ್ರಿ, ತಂಡದ ಎರಡನೇ ಪ್ರಮುಖ ಆಯ್ಕೆಯಾಗಲಿದ್ದಾರೆ.

3. ರಿಚಾ ಘೋಷ್ (ವಿಕೆಟ್ ಕೀಪರ್-ಬ್ಯಾಟರ್): ಭಾರತದ ಯುವ ವಿಕೆಟ್ ಕೀಪರ್ ಮತ್ತು ಸ್ಫೋಟಕ ಬ್ಯಾಟರ್ ರಿಚಾ ಘೋಷ್, ತಂಡದ ಭವಿಷ್ಯದ ತಾರೆಯಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಆಟವಾಡಿ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವರು, 26 ಪಂದ್ಯಗಳಲ್ಲಿ 625 ರನ್ ಕಲೆಹಾಕಿದ್ದಾರೆ. ಹೀಗಾಗಿ, ಯುವ ಪ್ರತಿಭೆಯನ್ನು ತಂಡ ಉಳಿಸಿಕೊಳ್ಳಲಿದೆ.

4. ರೇಣುಕಾ ಸಿಂಗ್ ಠಾಕೂರ್ (ವೇಗದ ಬೌಲರ್): ಆರ್‌ಸಿಬಿ ತಂಡದ ಪ್ರಮುಖ ವೇಗದ ಬೌಲರ್ ರೇಣುಕಾ ಸಿಂಗ್, ಆರಂಭಿಕ ಓವರ್‌ಗಳಲ್ಲಿ ವಿಕೆಟ್ ಪಡೆಯುವಲ್ಲಿ ನಿಪುಣೆ. ತಂಡದ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬುವ ರೇಣುಕಾ ಅವರನ್ನು ಹರಾಜಿಗೆ ಬಿಟ್ಟುಕೊಡುವುದು ಅಸಂಭವ.

5. ಶ್ರೇಯಾಂಕಾ ಪಾಟೀಲ್ (ಸ್ಥಳೀಯ ಪ್ರತಿಭೆ): “ನಮ್ಮ ಹುಡುಗಿ” ಎಂದೇ ಖ್ಯಾತರಾಗಿರುವ ಕರುನಾಡಿನ ಪ್ರತಿಭೆ ಶ್ರೇಯಾಂಕಾ ಪಾಟೀಲ್, ಆರ್‌ಸಿಬಿ ಅಭಿಮಾನಿಗಳ ನೇಚ್ಚಿನ ಆಟಗಾರ್ತಿ. ತಮ್ಮ ಸ್ಪಿನ್ ಬೌಲಿಂಗ್ ಮತ್ತು ಕೆಳ ಕ್ರಮಾಂಕದ ಉಪಯುಕ್ತ ಬ್ಯಾಟಿಂಗ್‌ನಿಂದ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಸ್ಥಳೀಯ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ಅವರ ಆಲ್‌ರೌಂಡ್ ಸಾಮರ್ಥ್ಯವನ್ನು ಪರಿಗಣಿಸಿ, ಶ್ರೇಯಾಂಕಾರನ್ನು ಐದನೇ ಆಟಗಾರ್ತಿಯಾಗಿ ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಈ ಐವರು ಆಟಗಾರ್ತಿಯರನ್ನು ಉಳಿಸಿಕೊಂಡರೆ, ನಾಯಕತ್ವ, ಅನುಭವ, ಯುವ ಪ್ರತಿಭೆ ಮತ್ತು ಸ್ಥಳೀಯ ಆಟಗಾರ್ತಿಯ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಇದು ಮೆಗಾ ಹರಾಜಿನಲ್ಲಿ ಉಳಿದ ಆಟಗಾರ್ತಿಯರನ್ನು ಖರೀದಿಸಿ, ಮತ್ತೊಮ್ಮೆ ಬಲಿಷ್ಠ ತಂಡವನ್ನು ಕಟ್ಟಲು ಆರ್‌ಸಿಬಿಗೆ ಉತ್ತಮ ಅಡಿಪಾಯವನ್ನು ಒದಗಿಸಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version