Home ಕ್ರೀಡೆ ಚಾಂಪಿಯನ್ಸ್ ಟ್ರೋಫಿ ಆಡಿದ 6 ಆಟಗಾರರಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ ಅವಕಾಶವಿಲ್ಲ!

ಚಾಂಪಿಯನ್ಸ್ ಟ್ರೋಫಿ ಆಡಿದ 6 ಆಟಗಾರರಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ ಅವಕಾಶವಿಲ್ಲ!

0

ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅಜಿತ್ ಅಗರ್ಕರ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ತಂಡವನ್ನು ಘೋಷಿಸಿದ್ದು, ಈ ಬಾರಿ ಶುಭ್ಮನ್ ಗಿಲ್ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಕ್ಟೋಬರ್ 19 ರಿಂದ ಪ್ರಾರಂಭವಾಗುವ ಮೂರು ಏಕದಿನ ಪಂದ್ಯಗಳು ಪರ್ತ್, ಅಡಿಲೇಡ್ ಮತ್ತು ಸಿಡ್ನಿಯಲ್ಲಿ ನಡೆಯಲಿವೆ. ಇದರ ನಂತರ ಐದು ಟಿ20 ಪಂದ್ಯಗಳು ಸಹ ಆಯೋಜನೆಯಾಗಲಿವೆ.

ಈ ಸರಣಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಯುಎಇ ಮತ್ತು ಪಾಕಿಸ್ತಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆರು ಆಟಗಾರರಿಗೆ ಈ ಬಾರಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವಕಾಶ ಸಿಕ್ಕಿಲ್ಲ.

ಆಯ್ಕೆ ಸಮಿತಿ ನೀಡಿದ ಮಾಹಿತಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದ ರಿಷಬ್ ಪಂತ್ (ಕಾಲ್ಬೆರಳಿನ ಮೂಳೆ ಮುರಿತ), ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ (ಫಿಟ್‌ನೆಸ್ ಸಮಸ್ಯೆ), ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಮತ್ತು ಜಸ್ಪ್ರೀತ್ ಬುಮ್ರಾ (ವಿಶ್ರಾಂತಿ?) ಈ ಸರಣಿಗೆ ಆಯ್ಕೆಯಾಗಿಲ್ಲ.

ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಸಮಸ್ಯೆಯಿಂದಾಗಿ ಅವರನ್ನು ಪರಿಗಣಿಸಲಾಗಿಲ್ಲ ಎಂದು ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ. ಆದರೆ, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ರವೀಂದ್ರ ಜಡೇಜಾ ಅವರನ್ನು ತಂಡದಿಂದ ಹೊರಗಿಟ್ಟಿರುವುದು ಹಲವರಿಗೆ ಅಚ್ಚರಿ ತಂದಿದೆ.

ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿಗೆ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಆಧಾರವಾಗಿದ್ದರು ಮತ್ತು ಹೆಚ್ಚಿನ ವಿಕೆಟ್‌ಗಳನ್ನು ಪಡೆದಿದ್ದರು. ಶಮಿ ಜೊತೆಗೆ ವರುಣ್ ಚಕ್ರವರ್ತಿ ಕೂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು, ಆದರೂ ಅವರನ್ನು ಆಯ್ಕೆ ಮಾಡದಿರುವುದು ಚರ್ಚೆಗೆ ಕಾರಣವಾಗಿದೆ.

ಕ್ರಮಾಂಕದ ಸಮಸ್ಯೆಯಿಂದಾಗಿ ಸಂಜು ಸ್ಯಾಮ್ಸನ್ ಬದಲಿಗೆ ಧೃವ್ ಜುರೇಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ. ಈ ಬದಲಾವಣೆಗಳೊಂದಿಗೆ ಹೊಸ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version