ದುಬೈ: ಭಾನುವಾರ ನಡೆದ ಏಷ್ಯಾ ಕಪ್ 2025ರ ಪಂದ್ಯದಲ್ಲಿ ಪಾಕಿಸ್ತಾನ ತಂಡದೊಂದಿಗೆ ಹಸ್ತಲಾಘವ ಮಾಡದಿರಲು ಟೀಮ್ ಇಂಡಿಯಾ ತೆಗೆದುಕೊಂಡ ನಿರ್ಧಾರದಿಂದ ಪಾಕ್ ಕ್ರಿಕೆಟ್ ಮಂಡಳಿ ಹಾಗೂ ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಉರಿದು ಬಿದ್ದಿವೆ.
ಭಾರತೀಯರ ವರ್ತನೆ ಬಗ್ಗೆ ಮ್ಯಾಚ್ ರೆಫರಿ ಅಂಡಿ ಪೈಕ್ರಾಫ್ಟ್‌ಗೆ ತಿಳಿಸಲಾಗಿತ್ತು. ಆದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದಿರುವ ಪಿಸಿಬಿ, ಆಂಡಿ ಪೈಕ್ರಾಫ್ಟ್ ಅವರನ್ನು ಸ್ಥಾನದಿಂದ ವಜಾಗೊಳಿಸುವಂತೆ ಐಸಿಸಿ ಮೊರೆ ಹೋಗಿದೆ. ಅಷ್ಟೇ ಅಲ್ಲದೇ, ಐಸಿಸಿ ರೆಫ್ರಿ ಅವರನ್ನು ವಜಾಗೊಳಿಸದೇ ಇದ್ದಲ್ಲಿ, ಮುಂದಿನ ಯುಎಇ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯುವುದಾಗಿ ಅಸಮಾಧಾನ ವ್ಯಕ್ತಪಡಿಸಿದೆ.
ಭಾನುವಾರ ಪಂದ್ಯವನ್ನು ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಹಾಗೂ ತಿಲಕ್ ವರ್ಮಾ ಮೈದಾನ ಬಿಟ್ಟು ತೆರಳುವಾಗ ಎದುರಾಳಿ ಪಾಕ್ ಆಟಗಾರರನ್ನು ಹಸ್ತಲಾಘವ ನೀಡಲು ನಿರಾಕರಿಸಿದ್ದಲ್ಲದೇ, ಆಟಗಾರರನ್ನು ನೋಡಲು ಕೂಡ ಇಚ್ಚಿಸಿರಲಿಲ್ಲ. ಇದರಿಂದ, ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಯಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ತಂಡವು ಭಾರತೀಯ ಸಹ ಆಟಗಾರರೊಂದಿಗೆ ಸ್ನೇಹಪರವಾಗಿ ವರ್ತಿಸಲು ಭಾರತೀಯ ಡ್ರೆಸ್ಸಿಂಗ್ ಕೋಣೆಯನ್ನು ಸಂಪರ್ಕಿಸಿತು.ಆದರೆ ಭಾರತ ತಂಡದ ಡ್ರೆಸ್ಸಿಂಗ್ ರೂಮಿನ ಬಾಗಿಲುಗಳನ್ನು ಪಾಕ್ ಆಟಗಾರರ ಸಮ್ಮುಖದಲ್ಲೇ ಮುಚ್ಚಲ್ಪಟ್ಟಿದೆ.
ಭಾರತದ ಉದ್ದೇಶದ ಬಗ್ಗೆ ಪಾಕಿಸ್ತಾನಕ್ಕೆ ಮ್ಯಾಚ್ ರೆಫರಿ ಮೊದಲೇ ತಿಳಿಸಿದ್ದರು ಎನ್ನಲಾಗಿದೆ. ಸಲ್ಮಾನ್ ಅಲಿ ಅಘಾ ಕೂಡ ಸೂರ್ಯಕುಮಾರ್ ಹಾಗೂ ಇತರ ಭಾರತೀಯ ಆಟಗಾರರೊಂದಿಗೆ ಹಸ್ತಲಾಘವ ಮಾಡುವುದನ್ನು ತಪ್ಪಿಸುವಂತೆ ಸೂಚಿಸಿದ್ದರೂ, ಪಾಕ್ ಡ್ರೆಸ್ಸಿಂಗ್ ರೂಮಿಗೆ ಬಳಿ ತೆರಳಿ ಮಾನ ಕಳೆದುಕೊಂಡಿದೆ.
ಆದರೆ, ಅತ್ತ ಭಾರತ ತಂಡದ ಆಟಗಾರರ ಈ ನಡವಳಿಕೆ ಬಗ್ಗೆ ಪ್ರಪಂಚದಾದ್ಯಂತ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಆಪರೇಷನ್ ಸಿಂಧೂರ್‌ನಲ್ಲಿ ಪ್ರಾಣ ಕಳೆದುಕೊಂಡ ಸೈನಿಕರು ಮತ್ತು ಪಹಲ್ಗಾಮ್ ಪ್ರತೀಕಾರದ ದಾಳಿಗೆ ಭಾರತ ತಂಡ ವರ್ತನೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ನಿರಾಸೆಗೊಳಿಸಿದೆ ಎನ್ನಲಾಗಿದೆ.
ಟಾಸ್ ವೇಳೆ ನಾಯಕ ಸಲ್ಮಾನ್ ಅವರನ್ನು ಸೂರ್ಯ ಅವರೊಂದಿಗೆ ಕೈಕುಲುಕದಂತೆ ರೆಫರಿ ಕೇಳಿದ್ದರು ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ. ಭಾರತದ ನಿರ್ಧಾರವನ್ನು ‘ಕ್ರೀಡಾಮನೋಭಾವಕ್ಕೆ ವಿರುದ್ಧ’ ಎಂದು ಕರೆಯಲಾಗಿದ್ದು, ಪಂದ್ಯದ ನಂತರದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ತಪ್ಪಿಸುವ ನಾಯಕ ಸಲ್ಮಾನ್ ಅವರ ನಿರ್ಧಾರವು, ಭಾರತೀಯ ತಂಡದ ವಿರುದ್ದದ ಪ್ರತಿಭಟನೆಯಾಗಿದೆ ಎಂದು ಪಿಸಿಬಿ ದೃಢಪಡಿಸಿದೆ.
ಮತ್ತೆ ಇಂಡೋ-ಪಾಕ್ ಪಂದ್ಯ ಯಾವಾಗ?: 2025 ರ ಏಷ್ಯಾ ಕಪ್‌ನಲ್ಲಿ ‘ಬಿ’ಗುಂಪಿನಲ್ಲಿ ಭಾರತ-ಪಾಕಿಸ್ತಾನ ಅಂಕಪಟ್ಟಿಯಲ್ಲಿ 1 ಮತ್ತು 2ನೇ ಸ್ಥಾನದಲ್ಲಿವೆ. ವೇಳಾಪಟ್ಟಿಯಂತೆ, 2ನೇ ಸೂಪರ್ 4 ಪಂದ್ಯದಲ್ಲಿ 1 ಹಾಗೂ 2ನೇ ತಂಡವನ್ನು ಎದುರಿಸಲಿದೆ. ಸೆ.17ರಂದು ಯುಎಇ ವಿರುದ್ಧದ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ, ಸೂಪರ್ 4 ಗೆ ಅರ್ಹತೆ ಪಡೆಯಲಿದ್ದಾರೆ. ಆಗ ಸೆಪ್ಟೆಂಬರ್ 21 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದ್ದು, ಸೂಪರ್ 4ನಲ್ಲಿ ‘ಎ’ ತಂಡಗಳ ಎದುರು ‘ಬಿ’ ತಂಡಗಳೂ ಆಡಿ, ಫೈನಲ್‌ಗೆ ಈ ಬದ್ಧವೈರಿಗಳು ಪ್ರವೇಶ ಪಡೆಯಬಹುದು.
ಒಮ್ಮೆ ಭಾರತ ಏಷ್ಯಾಕಪ್ ಗೆದ್ದರೆ, ಟ್ರೋಫಿಯನ್ನು ಪಿಸಿಬಿ ಹಾಗೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿ ಪ್ರದಾನ ಮಾಡಲಿದ್ದು, ಭಾರತ ತಂಡ ಸ್ವೀಕರಿಸಲಿದೆಯೇ ಎಂಬ ಅನುಮಾನಗಳಿವೆ.
ಬಾಗಿಲು ಮುಚ್ಚಿಸಿದ್ದೇ ಗೌತಿ?: ಕೆಲ ವರದಿಗಳ ಪ್ರಕಾರ, ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೇ, ಪಾಕ್ ಆಟಗಾರರ ಜೊತೆ ಹಸ್ತಲಾಘವ ಮಾಡದೇ ಇರಲು ಸೂಚಿಸಿದ್ದರು ಎನ್ನಲಾಗಿದೆ. ಶೇಕ್ ಹ್ಯಾಂಡ್ ಅಷ್ಟೇ ಅಲ್ಲದೇ, ಯಾವುದೇ ಮಾತಿನ ಚಕಮಕಿ ನಡೆಸದಂತೆ ಸೂಚಿಸಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.ಪಂದ್ಯಕ್ಕೂ ಮುನ್ನ ‘ಬಹಿಷ್ಕಾರ’ದ ಮಾತುಕತೆ ನಡೆಸಲು ಪಾಕಿಸ್ತಾನ ಭಾರತದ ಡ್ರೆಸ್ಟಿಂಗ್ ಕೋಣೆಗೂ ಪ್ರವೇಶಿಸಿತ್ತು. ಇದರಿಂದಾಗಿ ಸೂರ್ಯಕುಮಾರ್ ಮತ್ತು ಉಳಿದ ಆಟಗಾರರು, ಗಂಭೀರ್ ಮತ್ತು ಇತರ ಸಹಾಯಕ ಸಿಬ್ಬಂದಿಯನ್ನು ಸಂಪರ್ಕಿಸಿ ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದರು ಎನ್ನಲಾಗಿದೆ. ಹೀಗಾಗಿ ಗಂಭೀರ್ ತನ್ನ ಆಟಗಾರರಿಗೆ ಬಾಗಿಲು ಮುಚ್ಚಲು ಹೇಳಿದ್ದರು ಎಂದು ವರದಿಯಾಗಿದೆ.