ಓಲ್ಡ್ ಟ್ರಫರ್ಡ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 4ನೇ ಟೆಸ್ಟ್‌ನ ಮೊದಲ ದಿನದಾಟದಲ್ಲೇ ಭಾರತ ರನ್‌ಗಳಿಗಾಗಿ ಪರದಾಟ ನಡೆಸಿದೆ. ಅಲ್ಲದೇ, ಮೊದಲೇ ಗಾಯದ ಸಮಸ್ಯೆಗಳಿಂದ ಬಳಲುತ್ತಿರುವ ಟೀಮ್ ಇಂಡಿಯಾಗೆ ಈಗ ಪ್ರಮುಖ ಆಟಗಾರ ರಿಷಬ್ ಪಂತ್ ಕಾಲಿಗೆ ಗಂಭೀರ ಗಾಯವಾಗಿದ್ದು, ಮೈದಾನದಿಂದಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಾಗಾಗಿ, ಸರಣಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತಕ್ಕೆ ಆರಂಭಿಕ ದಿನವೇ ಹಿನ್ನಡೆಯಾಗಿದೆ.
ಮತ್ತೊಮ್ಮೆ ಈ ಟಾಸ್ ಸೋತ ಭಾರತಕ್ಕೆ ಮೊದಲು ಬ್ಯಾಟಿಂಗ್ ನಡೆಸಲು ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಸೂಚಿಸಿದರು. ಸವಾಲು ಸ್ವೀಕರಿಸಿದ ಟೀಮ್ ಇಂಡಿಯಾಗೆ ಆರಂಭಿಕರಿಂದ ಭದ್ರ ಬುನಾದಿ ಸಿಕ್ಕಿತು. ಅದರಲ್ಲೂ ಮೊದಲ ಸೆಷನ್‌ನಲ್ಲಿ ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳದೇ 78 ರನ್‌ಗಳಿಸಿತು. ಇದರಿಂದ, ಮೊದಲ ಸೆಷನ್‌ನಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತು. ಆದರೆ, ಭೋಜನ ವಿರಾಮದ ಬಳಿಕ ಪಂದ್ಯದ ಗತಿಯೇ ಬದಲಾಯಿತು. ಅರ್ಧಶತಕದತ್ತ ಧಾವಿಸುತ್ತಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಕ್ರಿಸ್ ವೋಕ್ಸ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಇದರಿಂದ ಅರ್ಧಶತಕ ಗಳಿಸದೇ ನಿರಾಸೆ ಅನುಭವಿಸಬೇಕಾಯಿತು.
ಮೊದಲ ವಿಕೆಟ್ ಉರುಳಿದರೂ, ಸಾಯಿ ಸುದರ್ಶನ್ ಹಾಗೂ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ತಂಡಕ್ಕೆ ಆಸರೆಯಾಗುವ ಭರವಸೆ ನೀಡಿದರು. ಇದರ ಮಧ್ಯೆ ಯಶಸ್ವಿ ಜೈಸ್ವಾಲ್ ಅರ್ಧಶತಕ ಗಳಿಸಿ ಆಸರೆಯಾಗುವ ವಿಶ್ವಾಸ ಮೂಡಿಸಿದರು. ಕಳೆದ ಟೆಸ್ಟ್ ಪಂದ್ಯಗಳಲ್ಲಿ ಗಳಿಸಿದ್ದಕ್ಕಿಂತ ನಿಧಾನಗತಿಯಲ್ಲಿ ಅರ್ಧಶತಕ ಗಳಿಸಿದ ಜೈಸ್ವಾಲ್ 58 ರನ್ ಗಳಿಸಿದ್ದಾಗ ದಾಳಿಗಿಳಿದ ಡಾಸನ್ ತನ್ನ ಕೈಚಳಕ ಮೆರೆದು ಹ್ಯಾರಿ ಬ್ರೂಕ್ ಕೈಗೆ ಕ್ಯಾಚ್ ನೀಡುವಂತೆ ಮಾಡಿದರು. ಇದರಿಂದ ತಂಡದ ಮೊತ್ತ ಇನ್ನೂ ನೂರರ ಗಡಿ ದಾಟುವ ಮುನ್ನವೇ ಭಾರತ ತನ್ನ 2ನೇ ವಿಕೆಟ್ ಕಳೆದುಕೊಂಡಿತು.
4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ನಾಯಕ ಶುಭಮನ್ ಗಿಲ್ 23 ಎಸೆತಗಳನ್ನೂ ಎದುರಿಸಿದರೂ, ಗಿಲ್ ಬ್ಯಾಟ್‌ನಿಂದ ಒಂದು ಬೌಂಡರಿ ಸೇರಿ 12 ರನ್‌ಗಳಷ್ಟೇ ಹರಿದು ಬಂದಿತು. ಆದರೆ, ಭಾರತಕ್ಕೆ ಸಾಯಿ ಸುದರ್ಶನ್ ಹಾಗೂ ರಿಷಬ್ ಪಂತ್ ಆಸರೆಯಾದರು. ಈ ಜೋಡಿ ತಾಳ್ಮೆಯಿಂದಲೇ ತಂಡವನ್ನು ಇನ್ನೂರರ ಗಡಿ ದಾಟಿಸಿದರು. 92 ರನ್‌ಗಳನ್ನು ಕಲೆ ಹಾಕಿದ ಈ ಜೋಡಿಗೆ ಕ್ರಿಸ್ ವೋಕ್ಸ್ ಶಾಪವಾದರು. ವೋಕ್ಸ್ ಎಸೆತ ಪಂತ್‌ನ ಪಾದಕ್ಕೆ ತಗುಲಿದ್ದರಿಂದ, ಪಂತ್ ಮೈದಾನದಿಂದ ರಿಡೈರ್‌ಹರ್ಟ್ ಆದರು. ಅಷ್ಟೇ ಅಲ್ಲದೇ ಅರ್ಧಶತಕ ಗಳಿಸಿದ ಸಾಯಿ ಸುದರ್ಶನ್ ಕೂಡ 61 ರನ್‌ಗಳಿಸಿ ಸ್ಟೋಕ್ಸ್ಗೆ ಔಟಾದರು.
ರಾಹುಲ್ 1ಸಾವಿರ ರನ್ ದಾಖಲೆ: ಕೆ.ಎಲ್.ರಾಹುಲ್ ಬುಧವಾರ ದಾಖಲೆ ಬರೆದರು. 11 ರನ್‌ಗಳಿಸುತ್ತಲೇ ಇಂಗ್ಲೆಂಡ್‌ನಲ್ಲಿ ಸಾವಿರ ರನ್ ಗಳಿಸಿದ ಭಾರತದ 5ನೇ ಆಟಗಾರರಾದರು. ಇದಕ್ಕೂ ಮೊದಲು ಸಚಿನ್, ಗವಾಸ್ಕರ್, ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಈ ಸಾಧನೆ ಮಾಡಿದ್ದರು.