ರಾಜ್ಯ ಮತ್ತು ದೇಶ ಅಷ್ಟೇ ಅಲ್ಲದೆ ಜಗತ್ತಿನ ಮೂಲೆ ಮೂಲೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ RCB ಕುರಿತಾಗಿ ಕ್ರಿಕೆಟ್ ಜಗತ್ತಿನಲ್ಲಿ ಒಂದು ರೋಚಕ ಸುದ್ದಿ ಹರಿದಾಡುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ, ಇಂಡಿಯನ್ ಪ್ರೀಮಿಯರ್ ಲೀಗ್‌ನ ಜನಪ್ರಿಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಹೊರಬಿದ್ದಾಗಿನಿಂದ ಕ್ರಿಕೆಟ್ ಅಭಿಮಾನಿಗಳು, ವಿಶೇಷವಾಗಿ ಆರ್‌ಸಿಬಿ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ.
ಅಂಬಾನಿ ಕುಟುಂಬಕ್ಕೆ ಕ್ರಿಕೆಟ್ ಹೊಸದೇನಲ್ಲ. ಮುಖೇಶ್ ಅಂಬಾನಿ ಈಗಾಗಲೇ ಯಶಸ್ವಿ ಐಪಿಎಲ್ ತಂಡವಾದ ಮುಂಬೈ ಇಂಡಿಯನ್ಸ್‌ನ ಮಾಲೀಕರಾಗಿದ್ದಾರೆ. ಈಗ ಅನಂತ್ ಅಂಬಾನಿ ಆರ್‌ಸಿಬಿ ತಂಡವನ್ನು ಖರೀದಿಸಲು ಆಸಕ್ತಿ ತೋರಿಸಿರುವುದು ಕ್ರೀಡಾ ಪ್ರೇಮ ಮತ್ತು ವ್ಯವಹಾರ ಜಾಣ್ಮೆಯನ್ನು ತೋರಿಸುತ್ತದೆ. ಆರ್‌ಸಿಬಿ ಐಪಿಎಲ್‌ನ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾಗಿದ್ದರೂ, ಇದುವರೆಗೆ ಒಂದೇ ಒಂದು ಕಪ್ ಗೆದ್ದಿದೆ. ಆದರೆ ಅದರ ಬ್ರಾಂಡ್ ಮೌಲ್ಯ ಮತ್ತು ಅಭಿಮಾನಿಗಳ ಬಲ ಅಗಾಧವಾಗಿದೆ. ಈ ಕಾರಣಕ್ಕಾಗಿಯೇ ಆರ್‌ಸಿಬಿ ಅಂಬಾನಿ ಕುಟುಂಬಕ್ಕೆ ಒಂದು ಉತ್ತಮ ಹೂಡಿಕೆ ಅವಕಾಶವಾಗಿ ಕಾಣಿಸಿರಬಹುದು.
ಆರ್‌ಸಿಬಿ ಇತಿಹಾಸ ಮತ್ತು ಫ್ಯಾನ್ ಬೇಸ್: ಆರ್‌ಸಿಬಿ, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಕ್ರಿಸ್ ಗೇಲ್ ಅವರಂತಹ ದಿಗ್ಗಜ ಆಟಗಾರರು ಆಡಿರುವಂತ ತಂಡ. ಈ ತಂಡಕ್ಕೆ ದೇಶ ವಿದೇಶದಲ್ಲಿ ಕೊಟ್ಯಾಂತರ ಅಭಿಮಾನಿಗಳಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಆರ್‌ಸಿಬಿ ಎಂದರೆ ಒಂದು ಭಾವನೆ. ಪ್ರತಿ ಸೀಸನ್‌ನಲ್ಲೂ “ಈ ಸಲ ಕಪ್ ನಮ್ದೇ” ಎಂಬ ಘೋಷಣೆ ಮೊಳಗುತ್ತಲೇ ಇರುತ್ತದೆ.
ಏನಿದು ಒಪ್ಪಂದ?: ಪ್ರಸ್ತುತ ಆರ್‌ಸಿಬಿ ತಂಡವು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಡಿಯಾಜಿಯೋ ಇಂಡಿಯಾ ಭಾಗ) ಒಡೆತನದಲ್ಲಿದೆ. ಒಂದು ವೇಳೆ ಅನಂತ್ ಅಂಬಾನಿ ಆರ್‌ಸಿಬಿ ತಂಡವನ್ನು ಖರೀದಿಸಿದರೆ, ಇದು ಐಪಿಎಲ್ ಇತಿಹಾಸದಲ್ಲಿ ಒಂದು ದೊಡ್ಡ ಬೆಳವಣಿಗೆಯಾಗಲಿದೆ. ಮೂಲಗಳ ಪ್ರಕಾರ, ಅನಂತ್ ಅಂಬಾನಿ ಈ ಒಪ್ಪಂದದ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ ಮತ್ತು ಮಾತುಕತೆಗಳು ಆರಂಭಿಕ ಹಂತದಲ್ಲಿವೆ. ಈ ಸ್ವಾಧೀನ ಪ್ರಕ್ರಿಯೆ ಯಶಸ್ವಿಯಾದರೆ, ಆರ್‌ಸಿಬಿ ತಂಡಕ್ಕೆ ಹೊಸ ಮಾಲೀಕರು ಸಿಕ್ಕಂತಾಗುತ್ತದೆ ಮತ್ತು ತಂಡದ ಕಾರ್ಯತಂತ್ರಗಳಲ್ಲಿ ದೊಡ್ಡ ಬದಲಾವಣೆಗಳು ಆಗಬಹುದು.
ಅಭಿಮಾನಿಗಳ ನಿರೀಕ್ಷೆಗಳು: ಅನಂತ್ ಅಂಬಾನಿ ಆರ್‌ಸಿಬಿ ತಂಡವನ್ನು ಖರೀದಿಸಿದರೆ ತಂಡಕ್ಕೆ ಇನ್ನಷ್ಟು ಹಣಕಾಸಿನ ಬೆಂಬಲ ಸಿಗುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಇದರಿಂದ ಉತ್ತಮ ಆಟಗಾರರನ್ನು ಖರೀದಿಸಲು ಮತ್ತು ತಂಡವನ್ನು ಮತ್ತಷ್ಟು ಬಲಪಡಿಸಲು ಸಹಾಯವಾಗುತ್ತದೆ. ಬಹುಶಃ ಅಂಬಾನಿ ಕುಟುಂಬದ ನಾಯಕತ್ವದಲ್ಲಿ ಆರ್‌ಸಿಬಿ ತಮ್ಮ ಎರಡನೇ ಐಪಿಎಲ್ ಕಪ್ ಗೆಲ್ಲಬಹುದು ಎಂಬ ಆಶಾಭಾವನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಬೆಳವಣಿಗೆಯ ಕುರಿತು ಇನ್ನಷ್ಟು ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾದು ನೋಡಬೇಕಿದೆ.