Home News ಏಷ್ಯಾಕಪ್: ಪ್ರಶಸ್ತಿಗಾಗಿ ಪಾಕ್-ಲಂಕಾ ಫೈಟ್

ಏಷ್ಯಾಕಪ್: ಪ್ರಶಸ್ತಿಗಾಗಿ ಪಾಕ್-ಲಂಕಾ ಫೈಟ್

ದುಬೈ: ಏಷ್ಯಾ ಕಪ್ 2022 ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳ ನಡುವೆ ನಡೆಯಲಿದೆ.
ಸೂಪರ್ ಫೋರ್ ಹಂತದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿರುವ ದಸುನ ಶನಕಾ ನಾಯಕತ್ವದ ಶ್ರೀಲಂಕಾ ತಂಡ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದರೊಂದಿಗೆ ಫೈನಲ್ ಹಂತ ಪ್ರವೇಶಿಸಿದೆ.
ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ, ಎರಡು ಪಂದ್ಯಗಳಲ್ಲಿ ಜಯ ಹಾಗೂ ಒಂದು ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿ ಒಟ್ಟು ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಫೈನಲ್ ಆಡುವ ಅರ್ಹತೆ ಪಡೆದಿದೆ.
ಪಾಕಿಸ್ತಾನ ತಂಡ, ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ ಜಯ ದಾಖಲಿಸಿತು. ಆದರೆ ಶ್ರೀಲಂಕಾ ವಿರುದ್ಧ ಆಡಿದ ಸೂಪರ್ ಫೋರ್ ಹಂತದ ಕೊನೆಯ ಲೀಗ್ ಪಂದ್ಯದಲ್ಲಿ ಸೋಲು ಅನುಭವಿಸಿದೆ.
ಫೈನಲ್‌ಗೆ ಮುನ್ನ ನಡೆದ ಪಂದ್ಯದಲ್ಲಿ ಗೆಲುವಿನ ನಗೆ ಬೀರಿರುವ ಶ್ರೀಲಂಕಾ ಆಟಗಾರರ ಮನೋಬಲ ಸಹಜವಾಗಿ ಹೆಚ್ಚಿದೆ. ಆದರೆ, ಇದೇ ವೇಳೆಗೆ ಸೋಲಿನ ಕಹಿ ಅನುಭವಿಸಿರುವ ಪಾಕಿಸ್ತಾನ ಆಟಗಾರರು ಸಹಜವಾಗಿ ಒತ್ತಡಕ್ಕೆ ಸಿಲುಕಿದ್ದಾರೆ.
`ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಕೈಯಲ್ಲಿ ಸೋಲಿನ ಕಹಿ ಅನುಭವಿಸಿದ ಶ್ರೀಲಂಕಾ ನಂತರ ಆಡಿದ ನಾಲ್ಕು ಪಂದ್ಯಗಳಲ್ಲಿ ಜಯದ ನಗೆ ಬೀರಿದೆ.
ಶ್ರೀಲಂಕಾ ಬ್ಯಾಟ್ಸಮನ್ನರು ನಿರೀಕ್ಷಿತ ಯಶ ಕಾಣದೇ ಹೋದರೂ ಕೂಡ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಜಯ ಲಭಿಸುವಲ್ಲಿ ಪ್ರಮುಖ ಪಾತ್ರವನ್ನಾಡುತ್ತಿದ್ದಾರೆ.
ಇನ್ನೊಂದೆಡೆ ಪಾಕಿಸ್ತಾನದ ಬ್ಯಾಟಿಂಗ್‌ನ ಪ್ರಮುಖ ಆಟಗಾರರು, ವಿಶೇಷವಾಗಿ ನಾಯಕ ಬಾಬರ್ ಅಜಂ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟ್ಸಮನ್ನರು ವಿಫಲರಾಗುತ್ತಿದ್ದು, ಕೆಳ ಕ್ರಮಾಂಕದ ಬೆಂಬಲ ದೊರೆಯದಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ.
ಶ್ರೀಲಂಕಾ:
ದಸುನ್ ಶನಕಾ (ನಾಯಕ), ದನುಷ್ಕ ಗುಣತಿಲಕ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ಅಶೇನ್ ಬಂಡಾರ, ಧನಂಜಯ ಡಿ ಸಿಲ್ವ, ವನಿಂದು ಹಸರಂಗ, ಮಹೀಶ್ ತೀಕ್ಷಣ, ಜೆಫ್ರಿ ವಂಡರ್ಸೆ, ಪ್ರವೀಣ್ ಜಯವಿಕ್ರಮ, ಚಾಮಿಕ ಕರುಣಾರತ್ನೆ, ಡಿ.ಡಿ. ಚಂಡಿಮಲ್, ನುವಾನಿಡು ಫೆರ್ನಾಂಡೊ, ಅಸಿತ ಫೆರ್ನಾಂಡೊ, ಪ್ರಮೋದ್ ಮದುಶನ್, ನುವಾನ್ ತುಷಾರ
ಪಾಕಿಸ್ತಾನ:
ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಆಸಿಫ್ ಅಲಿ, ಮೊಹಮ್ಮದ್ ಹಸನೈನ್, ಹಸನ್ ಅಲಿ
ಪಂದ್ಯದ ಆರಂಭ: ಸಂಜೆ 7-30 ರಿಂದ

Exit mobile version