Home ವಿಶೇಷ ಸುದ್ದಿ ಮೈಸೂರು ರತ್ನಸಿಂಹಾಸನದ ರೋಚಕ ಕಥನ

ಮೈಸೂರು ರತ್ನಸಿಂಹಾಸನದ ರೋಚಕ ಕಥನ

0

ಭಾನುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾದ ಲೇಖನ

ಪ್ರತಿಭಾ ನಂದಕುಮಾರ್
ಸಿಂಹಾಸನ ಎನ್ನುವುದು ರಾಜಮಹಾರಾಜರುಗಳ ಅಧಿಕಾರದ ಚಿಹ್ನೆ. ಸಿಂಹಾಸನವನ್ನೇರಿದರು',ಪಟ್ಟಾಭಿಷಿಕ್ತರಾದರು’, ಪಟ್ಟದಿಂದಿಳಿದರು',ಸಿಂಹಾಸನ ಕಳೆದುಕೊಂಡರು’ ಎಂದೇ ರಾಜರುಗಳ ಚರಿತ್ರೆಯನ್ನು ದಾಖಲಿಸಲಾಗಿದೆ. `ಸಿಂಹಾಸನಾಧೀಶ್ವರ’ ಎನ್ನುವುದೇ ರಾಜರುಗಳ ಅನ್ವರ್ಥನಾಮ. ಸಿಂಹಾಸನವಿಲ್ಲದೆ ರಾಜನೇ ಅಲ್ಲ. ಪ್ರತಿಯೊಂದು ರಾಜ್ಯದ ಸಿಂಹಾಸನಕ್ಕೂ ರೋಚಕ ಹಿನ್ನೆಲೆ ಇದ್ದೇ ಇರುತ್ತದೆ. ಯಾವ ಎರಡು ಸಿಂಹಾಸನಗಳೂ ಒಂದೇ ರೀತಿ ಇರುವ ಉದಾಹರಣೆಯೇ ಇಲ್ಲ. ಪ್ರತಿಯೊಂದಕ್ಕೂ ತನ್ನದೇ ವೈಶಿಷ್ಟ್ಯ ಇರುತ್ತದೆ. ಮೈಸೂರಿನ ಸಿಂಹಾಸನವನ್ನು ಭಾರತದ ಅತ್ಯಂತ ಅಪೂರ್ವ ಚಾರಿತ್ರಿಕ ಮೌಲ್ಯವುಳ್ಳ ಆಸ್ತಿಯೆಂದು ಗುರುತಿಸಲಾಗಿದೆ.

ಮೈಸೂರು ಅರಮನೆಯ ಒಡೆಯರ ವಂಶದ ರತ್ನಖಚಿತ ಸಿಂಹಾಸನಕ್ಕೆ ಅತ್ಯಂತ ರೋಚಕ, ನಾಟಕೀಯ, ಚಾರಿತ್ರಿಕ ಹಿನ್ನೆಲೆ ಇದೆ. ಹಲವಾರು ದಂತಕಥೆಗಳು, ನಿಜಾಂಶಗಳು ಸೇರಿಕೊಂಡು ಅವುಗಳನ್ನು ಬಿಡಿಸಲು ಆಗದಷ್ಟು ನಿಗೂಢವಾಗಿವೆ. ಚಾರಿತ್ರಿಕ ದಾಖಲೆಗಳಲ್ಲಿ ಅಸ್ಪಷ್ಟ ಅರ್ಥ ಬರುವಂತೆ ಬರೆದಿರುವುದರಿಂದ ಸಿಂಹಾಸನದ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಹುಟ್ಟಿಕೊಂಡವು. ಮುಖ್ಯವಾಗಿ, ಮೈಸೂರು ಸಿಂಹಾಸನವನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್ ಚಿಕ್ಕದೇವರಾಜ ಒಡೆಯರಿಗೆ 1699ರಲ್ಲಿ ಉಡುಗೊರೆಯಾಗಿ ಕೊಟ್ಟನೆನ್ನುವುದು.

ವಾಸ್ತವವಾಗಿ ನಡೆದ ಘಟನೆ ಏನೆಂದರೆ, 1687ರಲ್ಲಿ ಛತ್ರಪತಿ ಶಿವಾಜಿ ಮಹಾರಾಜನ ಮಲಸೋದರ ಏಕೋಜಿ (ವೆಂಕೋಜಿ) ಬೆಂಗಳೂರನ್ನು ಜಹಗೀರಾಗಿ ಪಡೆದು ಆಳುತ್ತಿದ್ದಾಗ ಖಾಸಿಂ ಖಾನ್ ನೇತೃತ್ವದ ಮೊಘಲ್ ಸೇನೆ ಬೆಂಗಳೂರಿಗೆ ದಂಡೆತ್ತಿ ಬಂತು. ಆಗ ವೆಂಕೋಜಿ ಬೆಂಗಳೂರು ನಗರವನ್ನು ಮೂರು ಲಕ್ಷ ರೂ.ಗಳಿಗೆ ಮೈಸೂರಿನ ಅರಸರಾದ ಚಿಕ್ಕದೇವರಾಜ ಒಡೆಯರಿಗೆ ಮಾರಲು ಒಪ್ಪಂದ ಮಾಡಿಕೊಂಡ. ಖಾಸಿಂ ಖಾನ್ ನಗರವನ್ನು ಆಕ್ರಮಿಸಿಕೊಂಡು, 1687ರ ಜುಲೈ 10ರಂದು ಬೆಂಗಳೂರು ಕೋಟೆಯ ಮೇಲೆ ಮೊಘಲ್ ಧ್ವಜವನ್ನು ಹಾರಿಸಿದ. ಮರಾಠರು ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸಿದಾಗ, ಚಿಕ್ಕದೇವರಾಜ ಒಡೆಯರು ಬಲಿಷ್ಠ ಸೈನ್ಯದ ಪರ ನಿಂತು ಮೊಘಲರಿಗಾಗಿ ಹೋರಾಡಿದರು. ಮರಾಠರೊಂದಿಗೆ ಮಾತುಕತೆ ನಡೆಸಿದ ಒಪ್ಪಂದವನ್ನು ಮೊಘಲರ ಜೊತೆ ಮುಂದುವರೆಸಿದರು. ಖಾಸಿಂ ಖಾನ್ ಮೂಲಕ ಔರಂಗಜೇಬನ ವಿಶ್ವಾಸ ಗಳಿಸಿ ಅವರಿಗೆ ಇತರ ಯುದ್ಧಗಳಲ್ಲಿ ನೆರವಾಗಿ ಕೊನೆಗೆ ಅದಕ್ಕೆ ಪ್ರತಿಕ್ರಿಯೆಯಾಗಿ, 1700ರಲ್ಲಿ, ಔರಂಗಜೇಬ ಚಿಕ್ಕದೇವರಾಜ ಒಡೆಯರಿಗೆ ಜಗದೇವರಾಯ' ಎನ್ನುವ ಬಿರುದನ್ನು ಹೊಂದಿರುವ ಮುದ್ರೆ ಉಂಗುರವನ್ನು,ದಂತದ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಅನುಮತಿಯನ್ನು’, ಮತ್ತು ಚಿನ್ನದ ಕೆತ್ತನೆಯ ಹಿಡಿಕೆಯ ಒಂದು ಖಡ್ಗವನ್ನು ಕಳುಹಿಸಿದ. ಕಾರಣಾಂತರದಿಂದ ದಂತದ ಸಿಂಹಾಸನವನ್ನೂ ಔರಂಗಜೇಬನೇ ಕೊಟ್ಟ ಎನ್ನುವ ವದಂತಿ ಹಬ್ಬಿತು.

ಮೈಸೂರಿನ ಚರಿತ್ರೆಯನ್ನು ಬರೆದ ವಿಲ್ಕ್ಸ್‌ ಆಗಲೀ ಮೈಸೂರಿನ ಶಾಸನಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿದ ಲೂಯಿ ರೈಸ್ ಆಗಲೀ, ಔರಂಗಜೇಬನು ಸಿಂಹಾಸನವನ್ನು ನೀಡಿದ ಎನ್ನುವುದಕ್ಕೆ ಯಾವುದೇ ದಾಖಲೆ ಇದೆ ಎಂದು ಹೇಳಿಲ್ಲ. ಬದಲಿಗೆ ವಂಶರತ್ನಾಕರ'ದಲ್ಲಿ ನೀಡಿರುವ ವಿವರಣೆಯಂತೆ,ಚಿಕ್ಕದೇವರಾಜ ಒಡೆಯರ ರಾಯಭಾರಿ ಕಾರಣಿಕ ಲಿಂಗಣ್ಣಯ್ಯ ಔರಂಗಜೇಬನನ್ನು ಭೇಟಿಯಾದಾಗ ಆತ ವಾಸ್ತವದಲ್ಲಿ ಹೇಳಿದ್ದು, `ಮಹಾರಾಜ ಚಿಕ್ಕದೇವರಾಜ ಒಡೆಯರು ಪುರಾತನ ಪಾಂಡವರ ಸಿಂಹಾಸನದಲ್ಲಿ ಪ್ರತಿಷ್ಠಾಪಿತರಾಗಿರುವುದರಿಂದ ಅವರ ರಾಯಬಾರಿ ಬೇರೆ ಯಾರಿಗೂಸಲಾಮು’ ಹಾಕಬೇಕಾಗಿಲ್ಲ” ಎಂದು. ಚಾರಿತ್ರಿಕವಾಗಿ ಇದು ಕೂಡ ಪ್ರಕ್ಷಿಪ್ತವೇ. ಔರಂಗಜೇಬ್ ಚಿಕ್ಕದೇವರಾಜ ಒಡೆಯರ ಬಗ್ಗೆ ಗೌರವಯುತವಾಗಿ ಮಾತನಾಡಿದ್ದು ನಿಜವಾದರೂ ಸಿಂಹಾಸನವನ್ನು ಕುರಿತು ಪ್ರಸ್ತಾಪಿಸಿಲ್ಲ.

ನೆಲದಲ್ಲಿ ಹೂತಿಟ್ಟಿದ್ದು: ಸಿಂಹಾಸನವನ್ನು ಕುರಿತ ಮತ್ತೊಂದು ಕಥೆಯೆಂದರೆ, ಶ್ರೀರಂಗಪಟ್ಟಣದ ಅರಸನ ವಶದಲ್ಲಿರುವ ಸಿಂಹಾಸನವು ವಿಜಯನಗರದ ಅರಸರ ವಂಶಪಾರಂಪರ್ಯವಾಗಿ ಬಂದದ್ದು. ಕಂಪಿಲಿ ರಾಜನು ಪಾಂಡವರ ಸಿಂಹಾಸನವನ್ನು ಹಸ್ತಿನಾಪುರದಿಂದ ತಂದು ಪೆನುಕೊಂಡದಲ್ಲಿ ನೆಲದಲ್ಲಿ ಹೂತಿಟ್ಟಿರುವ ಸಂಗತಿ ವಿದ್ಯಾರಣ್ಯರಿಗೆ ದಿವ್ಯದೃಷ್ಟಿಯಿಂದ ತಿಳಿಯಿತು. ಅವರು ಕ್ರಿ.ಶ. 1336ರಲ್ಲಿ ಪೆನುಕೊಂಡದಲ್ಲಿ ನೆಲ ಕೆತ್ತಿಸಿ ಹೊರತೆಗೆಸಿ, ಹಕ್ಕ-ಬುಕ್ಕರನ್ನು ಇದೇ ಸಿಂಹಾಸನದಲ್ಲಿ ಪ್ರತಿಷ್ಠಾಪಿಸಿದ್ದರು. ಈ ವಂಶವು ಸುಮಾರು 143 ವರ್ಷಗಳವರೆಗೆ ಈ ಸಿಂಹಾಸನವನ್ನು ಏರಿ ಆಳ್ವಿಕೆ ನಡೆಸಿತ್ತು.

ವಿಜಯನಗರದ ಕೊನೆಯ ಅರಸ ತಿರುಮಲರಾಯನಿಗೆ ನಾಲ್ವರು ಗಂಡುಮಕ್ಕಳಿದ್ದರು. ತಿರುಮಲರಾಯ ತನ್ನ ರಾಜ್ಯವನ್ನು ನಾಲ್ಕು ವಿಭಾಗ ಮಾಡಿ ಶ್ರೀರಂಗಪಟ್ಟಣ ಮತ್ತು ಸುತ್ತಲ ಪ್ರದೇಶವನ್ನು ಹಿರಿಯ ಮಗನಾದ ಶ್ರೀರಂಗರಾಯನಿಗೆ ನೀಡಿ ಸಿಂಹಾಸನವನ್ನೂ ಅವನಿಗೇ ಕೊಟ್ಟನು. ಆಗ ಸಿಂಹಾಸನವನ್ನು ಆನೆಗೊಂದಿಯಿಂದ ಶ್ರೀರಂಗಪಟ್ಟಣಕ್ಕೆ ಸಾಗಿಸಲಾಯಿತು. ಆ ಶ್ರೀರಂಗರಾಯನ ನಂತರ ಏಳು ತಲೆಮಾರು ಶ್ರೀರಂಗಪಟ್ಟಣವನ್ನು ಆಳಿ ಸಿಂಹಾಸನ ಏರಿತ್ತು. 1609ರಲ್ಲಿ ಈ ವಂಶದ ಕೊನೆಯ ರಾಜ ಏಳನೆಯ ಶ್ರೀರಂಗರಾಯ ತನ್ನ ಕಾಯಿಲೆಯ ಕಾರಣ ತನ್ನ ರಾಜ್ಯವನ್ನೂ ಸಿಂಹಾಸನವನ್ನೂ ಮೈಸೂರಿನ ರಾಜ ಒಡೆಯರಿಗೆ ಒಪ್ಪಿಸಿ ತನ್ನ ರಾಣಿಯರಾದ ಅಲಮೇಲಮ್ಮ ಮತ್ತು ರಂಗಮ್ಮನವರ ಜೊತೆ ತಲಕಾಡಿಗೆ ಹೋಗಿ ನೆಲೆಸಿದ.

1610ರಲ್ಲಿ ಸ್ವತಂತ್ರ ಮೈಸೂರು ರಾಜ್ಯದ ಅರಸರಾಗಿ ರಾಜ ಒಡೆಯರು ಸಕಲ ರಾಜಮರ್ಯಾದೆಗಳೊಂದಿಗೆ ಸಿಂಹಾಸನಾರೋಹಣ ಮಾಡಿದರು ಮತ್ತು ವಿಜಯನಗರದ ಅರಸರಂತೆ ಮೈಸೂರಿನಲ್ಲಿಯೂ ನವರಾತ್ರಿ ಉತ್ಸವವನ್ನು ತೊಡಗಿಸಿದರು. ಒಂಬತ್ತು ದಿನಗಳ ಕಾಲ ಸಿಂಹಾಸನಾರೋಹಣ ಮಾಡಿ ದರ್ಬಾರಿನ ಪದ್ಧತಿ ಜಾರಿಗೆ ತಂದರು. ವಿದ್ಯುದ್ದೀಪಗಳು ಬಂದ ಮೇಲೆ ಮಹಾರಾಜರು ಸಿಂಹಾಸನಕ್ಕೆ ವಂದಿಸಿ ಸುತ್ತು ಬಂದು ಒಂದೊಂದೇ ಮೆಟ್ಟಿಲು ಏರುತ್ತ ಕೊನೆಗೆ ಸಿಂಹಾಸನದ ನಡುವೆ ನಿಂತು ಕೈಮುಗಿದ ಕೂಡಲೇ ಇಡೀ ಅರಮನೆ ಝಗ್ಗೆಂದು ದೀಪದಲ್ಲಿ ಬೆಳಗುವ ರೋಮಾಂಚಕ ಘಳಿಗೆ ಹಳೆಯ ತಲೆಮಾರಿನವರಿಗೆ ಮಾತ್ರ ತಿಳಿದಿರುವ ಮಾಂತ್ರಿಕತೆ.

ರಾಜ ಒಡೆಯರು ಪ್ರಾರಂಭಿಸಿದ ನವರಾತ್ರಿ ಉತ್ಸವ 143 ವರ್ಷಗಳ ಕಾಲ ಮುಂದುವರಿಯಿತು. 1734ರಿಂದ 1766ರವರೆಗೆ ಇಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರು ಸಾಮ್ರಾಜ್ಯದ ಹದಿನೆಂಟನೇ ಮಹಾರಾಜರಾಗಿದ್ದಾಗ ಮೊದಲು ದಳವಾಯಿಗಳ ಅಡಿಯಲ್ಲಿ ಮತ್ತು ನಂತರ ಕೊನೆಯ ಐದು ವರ್ಷಗಳ ಕಾಲ ಹೈದರ್ ಅಲಿಯ ಅಡಿಯಲ್ಲಿ ರಾಜರಾಗಿ ಆಳಿದರು. ಆಗಲೂ ಸಿಂಹಾಸನ ಅವರ ವಶದಲ್ಲಿತ್ತು. ಹೈದರಾಲಿ ಸರ್ವಾಧಿಕಾರಿಯಾಗಿದ್ದರೂ ಎಷ್ಟೇ ದರ್ಪವನ್ನು ತೋರಿದರೂ ಎಂದಿಗೂ ಅರಸರ ಸಿಂಹಾಸನದಲ್ಲಿ ಕೂರುವ ಪ್ರಯತ್ನ ಮಾಡಲಿಲ್ಲ.

ಸಿಂಹಾಸನ ಏರಲು ಬಯಸಿದ್ದ ಟೀಪು: ಹೈದರಾಲಿಯ ನಂತರ ಟೀಪು ಅಧಿಕಾರಕ್ಕೆ ಬಂದಾಗ 1789 – 1790ರಲ್ಲಿ ತಿರುವಾಂಕೂರಿನ ಮೇಲೆ ದಂಡೆತ್ತಿ ಹೋದ. ಅದರಲ್ಲಿ ಗೆದ್ದು ಬಂದರೆ ಮೈಸೂರಿನ ಸಿಂಹಾಸನವನ್ನು ಏರುತ್ತೇನೆ ಎಂದು ಹೇಳಿ ಹೋಗಿದ್ದ. ಆದರೆ ಸೋತ. ಟೀಪುವಿಗೆ ಮೈಸೂರು ಸಿಂಹಾಸನ ಏರುವ ಅದೃಷ್ಟ ಇರಲಿಲ್ಲ. ಟೀಪುವಿನ ಸಂಗ್ರಹಾಲಯದಲ್ಲಿ ದಂತದ ಸಿಂಹಾಸನ ಮೂಲೆಗುಂಪಾಯಿತು. ಶ್ರೀರಂಗಪಟ್ಟಣದ ಪತನದ ನಂತರ ಬ್ರಿಟಿಷರು ಮತ್ತೆ ಒಡೆಯರ್ ವಂಶದವರಿಗೆ ಮೈಸೂರನ್ನು ಮರಳಿ ಕೊಡಲು ನಿರ್ಧರಿಸುವವರೆಗೂ ಯಾರಿಗೂ ಸಿಂಹಾಸನದ ನೆನಪೇ ಆಗಲಿಲ್ಲ.

ಮೈಸೂರಿನ ಬ್ರಿಟಿಷ್ ಕಮಿಷನರುಗಳಾಗಿದ್ದ ಜಾರ್ಜ್ ಹ್ಯಾರಿಸನ್, ಆರ್ಥರ್ ವೆಲ್ಲೆಸ್ಲಿ, ಹೆನ್ರಿ ವೆಲ್ಲೆಸ್ಲಿ, ವಿಲಿಯಂ ಕಿರ್ಕ್ ಪ್ಯಾಟ್ರಿಕ್ ಮತ್ತು ಬ್ಯಾರಿ ಕ್ಲೋಸ್ ಅವರು ಅಳಿದ ಮಹಾರಾಜ ಕೃಷ್ಣರಾಜ ಒಡೆಯರ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮತ್ತು ಚಾಮರಾಜ ಒಡೆಯರ ಮಹಾರಾಣಿ ದೇವರಾಜ ಅಮ್ಮಣ್ಣಿಯವರನ್ನು ಭೇಟಿ ಮಾಡಿದಾಗ ರಾಜಕುಟುಂಬ ಅತ್ಯಂತ ದುಃಸ್ಥಿತಿಯಲ್ಲಿತ್ತು. ಐದು ವರ್ಷದ ಕೃಷ್ಣರಾಜ ಒಡೆಯರಿಗೆ ಪಟ್ಟ ಕಟ್ಟಲು ನಿರ್ಧರಿಸಿ ಬ್ರಿಟಿಷರು ಒಡೆಯರಿಗೆ ಮರಳಿ ಮೈಸೂರನ್ನು ಕೊಡುವಾಗ ತಕ್ಷಣಕ್ಕೆ ಯಾವ ಸಿಂಹಾಸನ ಎನ್ನುವ ಪ್ರಶ್ನೆ ಎದ್ದು ಹುಡುಕಿದಾಗ ಟೀಪುವಿನ ಸಂಗ್ರಹಾಲಯದಲ್ಲಿ ಸಿಕ್ಕಿತು. 1799ರ ಜೂನ್ 30ರಂದು ಮೈಸೂರಿನಲ್ಲಿ ಇದೇ ಸಿಂಹಾಸನದ ಮೇಲೆ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕವಾಯಿತು.

1803ರಲ್ಲಿ ಮದ್ರಾಸಿನಿಂದ ಮೈಸೂರಿಗೆ ಪ್ರಯಾಣಿಸಿದ ಲಾರ್ಡ್ ವ್ಯಾಲೆಂಟಿಯಾ ಆಗ ಹನ್ನೊಂದು ವರ್ಷದ ಮಹಾರಾಜ ಕೃಷ್ಣರಾಜ ಒಡೆಯರನ್ನು ಭೇಟಿ ಮಾಡಿದ ಸಂದರ್ಭವನ್ನು ವಿವರವಾಗಿ ದಾಖಲಿಸಿದಂತೆ, ಮೇಜರ್ ಸಿಂಪ್ಸನ್ಸ್ ಮತ್ತು ನರಸಿಂಗ ರಾವ್ ಅವರ ಮೂಲಕ ನಾನು ಔಪಚಾರಿಕ ಮಾತುಕತೆಗಳಾದ ಮೇಲೆ ಮಹಾರಾಜರು ತಮ್ಮ ಪೂರ್ವಜರ ರತ್ನಖಚಿತ ಸಿಂಹಾಸನದ ಮೇಲೆ ವಿರಾಜಮಾನರಾಗಿದ್ದರ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದೆ. ಅದಕ್ಕೆ ಅವರು ಅದಕ್ಕೆ ಬ್ರಿಟಿಷ್ ಸರ್ಕಾರವೇ ಕಾರಣವೆಂದೂ, ಅದಕ್ಕಾಗಿ ತಾವು ಸದಾ ಋಣಿಯಾಗಿರುವೆವೆಂದೂ ತಿಳಿಸಿದರು.' ಪರಸ್ಪರ ಉಡುಗೊರೆಗಳನ್ನು ಸಲ್ಲಿಸಿ ಮಾತುಕತೆಗಳಾದ ನಂತರ ವ್ಯಾಲೆಂಟಿಯಾ ಹೊರಟಾಗ,ಸಿಂಹಾಸನವು ನೆಲದಿಂದ ನಾಲ್ಕು ಅಡಿ ಎತ್ತರದಲ್ಲಿದ್ದುದರಿಂದ ಮಹಾರಾಜರು ಎದ್ದು ನಿಲ್ಲಲು ಅಥವಾ ಇಳಿಯಲು ಕಷ್ಟವಾದುದರಿಂದ ನಾನೇ ಅವರ ಬಳಿಗೆ ಹೋಗಿ ಅವರು ಸಿಂಹಾಸನದಲ್ಲಿ ಕೂತಿದ್ದಂತೆಯೇ ಕೈಕುಲುಕಿ ವಿದಾಯ ಹೇಳಿದೆ’ ಎಂದು ಹೇಳಿದ್ದಾನೆ.

ಪ್ರಸ್ತುತ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರು ನಡೆಸಲು ಸಿಂಹಾಸನಾರೋಹಣ ಮಾಡುತ್ತಾರೆ. ನವರಾತ್ರಿಯ ನಂತರ ಮತ್ತೆ ಕಳಚಿ ರಕ್ಷಣೆಯಲ್ಲಿ ಇಡಲಾಗುತ್ತದೆ. ರತ್ನಖಚಿತ ಸಿಂಹಾಸನ ಮತ್ತು ಅಂಬಾರಿ ರಾಜಮನೆತನದ ಖಾಸಗಿ ಆಸ್ತಿ, ಸರ್ಕಾರದ್ದಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ನೀಡುವುದನ್ನು ಕುರಿತು ರಾಜಮನೆತನದ ಪ್ರಮೋದಾದೇವಿಯವರು ಅಧಿಕೃತವಾಗಿ ಎಚ್ಚರಿಕೆ ನೀಡಿದ್ದಾರೆ.

ಛತ್ರಿಯ ಮೇಲೆ 24 ಶ್ಲೋಕಗಳು: ಮೂಲ ಸಿಂಹಾಸನವನ್ನು ಅಂಜೂರದ ಮರದಿಂದ ಮಾಡಿ ಅದರ ಮೇಲೆ ದಂತ ಕೂಡಿಸಿ ಕುಸುರಿ ಕೆತ್ತನೆ ಮಾಡಲಾಗಿತ್ತು. ಟೀಪುವಿನ ಸಂಗ್ರಹಾಲಯದಲ್ಲಿ ಬಹಳ ಕಾಲ ಮೂಲೆಗುಂಪಾಗಿದ್ದ ಕಾರಣ ಅದರ ಹೊಳಪು ಮಾಸಿತ್ತು. ಅದಕ್ಕೆ ಚಿನ್ನ ಮತ್ತು ಬೆಳ್ಳಿಯ ಹೊದಿಕೆ ಮಾಡಲಾಯಿತು. ಅಪರೂಪದ ಅಲಂಕಾರ ಕೆತ್ತನೆಯನ್ನು ನಿರ್ಮಿಸಲು ಸ್ವರ್ಣಕಲಾ ನಿಪುಣ' ಸಿಂಗಣ್ಣಾಚಾರ್ಯರಿಗೆ ವಹಿಸಲಾಯಿತು. ಸಿಂಹಾಸನದ ಚಿನ್ನದ ಛತ್ರಿಯ ಮೇಲೆ ಅನುಷ್ಟುಪ್ ಛಂದಸ್ಸಿನ 24 ಸಂಸ್ಕೃತ ಶ್ಲೋಕಗಳನ್ನು ಕೆತ್ತಲಾಗಿದೆ. ಛತ್ರಿಯ ಸೌಂದರ್ಯದ ಕುರಿತು ಎರಡು ಪದ್ಯಗಳನ್ನು ಹೇಳಿ,ವಂಶಪಾರಂಪರ್ಯವಾಗಿ ಬಂದ ರತ್ನಖಚಿತ ಸಿಂಹಾಸನದ ಮೇಲೆ ಕೂತ ಮುಮ್ಮಡಿ ಕೃಷ್ಣರಾಜ ಒಡೆಯರ ಮೇಲೆ ಸಕಲ ದೇವಾನುದೇವತೆಗಳ ಕೃಪೆಯಿರಲಿ’ ಎಂದು ವರ್ಣಿಸಲಾಗಿದೆ.

ಸಿಂಹಾಸನದ ಅಲಂಕಾರಗಳು: ಮೈಸೂರು ಗೆಜೆಟಿಯರ್‌ನಲ್ಲಿ ಸಿಂಹಾಸನವನ್ನು ವರ್ಣಿಸುತ್ತ ಲೂಯಿ ರೈಸ್ ಅವರು ನೀಡಿದ ವರ್ಣನೆ; `ಸಿಂಹಾಸನದಲ್ಲಿ ಚಿನ್ನದ ತೋರಣ ಮತ್ತು ಮಾವಿನ ಎಲೆಗಳನ್ನು ಅಳವಡಿಸಿ ಅಲಂಕರಿಸಲಾಗಿದೆ. ಛತ್ರಿಯ ಮೇಲ್ಭಾಗದಲ್ಲಿ ಸುಂದರವಾದ ರತ್ನಖಚಿತ ಹಂಸವಿದೆ. ಮೆಟ್ಟಿಲುಗಳಲ್ಲಿ ಸುಂದರವಾದ ಸಾಲಭಂಜಿಕೆಯರನ್ನು ಕೆತ್ತಲಾಗಿದೆ. ಛತ್ರಿಯ ಅಂಚಿನಲ್ಲಿ ಅಮೂಲ್ಯ ಮುತ್ತುಗಳ ಕುಚ್ಚುಗಳನ್ನು ಕಟ್ಟಲಾಗಿದೆ. ಎರಡು ಕಡೆ ಯಾಳಿಗಳನ್ನು ನಿಲ್ಲಿಸಲಾಗಿದೆ. ನಾಲ್ಕೂ ಕಡೆ ಚಿನ್ನದ ಬಳ್ಳಿಗಳನ್ನು ಹಬ್ಬಿಸಲಾಗಿದೆ. ಪೂರ್ವದ ಕಡೆಗೆ ಆನೆಗಳು, ದಕ್ಷಿಣದ ಕಡೆಗೆ ಕುದುರೆಗಳು, ಪಶ್ಚಿಮಕ್ಕೆ ಸೇನೆ, ಉತ್ತರದಲ್ಲಿ ರಥಗಳನ್ನು ಅಳವಡಿಸಲಾಗಿದೆ. ದಕ್ಷಿಣಕ್ಕೆ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯದಲ್ಲಿ ವಿಷ್ಣುವಿನ ವಿಗ್ರಹಗಳಿವೆ. ಕೈಕಾಲುಗಳನ್ನು ಅರ್ಧ ಆನೆ ಮತ್ತು ಅರ್ಧ ಸಿಂಹದ ಆಕಾರದ ಕಲೆಯಿಂದ ಮಾಡಲಾಗಿದೆ. ಆಸನದ ಹಿಂಭಾಗದಲ್ಲಿ ಪಕ್ಷಿ, ಸಿಂಹ ಮತ್ತು ಹೂವುಗಳ ಕಲಾಕೃತಿ ಇದೆ. ಮಧ್ಯದಲ್ಲಿ ದೇವಿ ಚಾಮುಂಡೇಶ್ವರಿ, ಲಕ್ಷ್ಮೀ ಮತ್ತು ಸರಸ್ವತಿ ದೇವಿ ಎರಡೂ ಬದಿಗಳಲ್ಲಿ ಅಷ್ಟದಿಕ್ಪಾಲಕರು ಹಾಗೂ ನಾಗಕನ್ಯೆಯರನ್ನು ಕೆತ್ತಲಾಗಿದೆ. ನಾಲ್ಕೂ ಕಡೆ ಕೋನಗಳಲ್ಲಿ ವಿಜಯ ಮತ್ತು ಸಿಂಹಗಳು, ಎರಡು ಶರಭಗಳು, ಎರಡು ಕುದುರೆಗಳು, ಮತ್ತು ನಾಲ್ಕು ಹಂಸಗಳಿವೆ. ನಡುವೆ ಸ್ವಸ್ತಿಕ ಹಾಗೂ ಮುತ್ತಿನ ಮೇಲ್ಕಟ್ಟು ಇದ್ದು ಸುತ್ತಲೂ ತೆರವಾಗಿದೆ.’

ನವರಾತ್ರಿಯಲ್ಲಿ ಮಾತ್ರ ಸಿಂಹಾಸನ ಜೋಡಣೆ: ಈ ರತ್ನಸಿಂಹಾಸನವು ಏಕರಚನೆಯಲ್ಲ. ಬಿಡಿಭಾಗಗಳಾಗಿ ಇದನ್ನು ನಿರ್ಮಿಸಲಾಗಿದ್ದು, ನವರಾತ್ರಿಯಲ್ಲಿ ಸಾರ್ವಜನಿಕ ದರ್ಬಾರಿನಲ್ಲಿ ಮಹಾರಾಜರು ಪೀಠಾರೋಹಣ ಮಾಡಲು ಮಾತ್ರ ಜೋಡಿಸಲಾಗುತ್ತದೆ. ಉಳಿದಂತೆ ಅವನ್ನು ಕಳಚಿ ಭದ್ರವಾಗಿ ಪ್ಯಾಕ್ ಮಾಡಿ ಅರಮನೆಯ ಭದ್ರ ಕಾವಲಿನಲ್ಲಿ ಸೇಫ್ಟಿ ಲಾಕರಿನಲ್ಲಿ ಇಡಲಾಗುತ್ತದೆ. ಭದ್ರ ಕಾವಲಿನಲ್ಲಿ ಅರಮನೆಯ ಅಂಬಾವಿಲಾಸ ತೊಟ್ಟಿಯಲ್ಲಿ ಸಿಂಹಾಸನವನ್ನು ಜೋಡಿಸಲಾಗುತ್ತದೆ. ಜೋಡಣೆಗೆ ಮೊದಲು ಅರಮನೆಯಲ್ಲಿ ಗಣಹೋಮ, ನವಗ್ರಹ ಹೋಮ, ಶಾಂತಿಪೂಜೆಗಳನ್ನು ನೆರವೇರಿಸಲಾಗುತ್ತದೆ. ಸಿಂಹಾಸನ ಜೋಡಣೆಯಾದ ಮೇಲೆ ಅದರ ಮುಂಭಾಗದಲ್ಲಿ ಒಂದು ಸಿಂಹದ ತಲೆಯನ್ನು ಇರಿಸಿ ಪ್ರಾಣಪ್ರತಿಷ್ಠಾಪನೆ ಮಾಡಲಾಗುತ್ತದೆ.

ಸತ್ಯಮೇವೋದ್ಧರಾಮ್ಯಹಂ: ಸಿಂಹಾಸನವು ಆಮೆಯ ಪೀಠವನ್ನು ಹೊಂದಿದ್ದು ಇದನ್ನು ಕೂರ್ಮಾಸನ' ಎಂದು ಕರೆಯುತ್ತಾರೆ. ಆಸನವು 2.25 ಮೀ. ಎತ್ತರವಿದೆ. ಸಿಂಹಾಸನಕ್ಕೆ 70 ಕೆ.ಜಿ. ಚಿನ್ನವನ್ನು ಬಳಸಲಾಗಿದೆ. ಸಿಂಹಾಸನದ ಒಟ್ಟು ತೂಕ 280 ಕೆ.ಜಿ. ಆಸನದ ಮೇಲೆ ಕೂರಲು ಮೆತ್ತೆ, ಕಿಂಕಾಪಿನ ಹೊದಿಕೆ ಹೊದಿಸಲಾಗಿದೆ. ಹಿಂಭಾಗದಲ್ಲಿ ಮೈಸೂರಿನ ರಾಜಲಾಂಛನ ಗಂಡಭೇರುಂಡದ ಕೆತ್ತನೆ ಇದೆ ಮತ್ತು ಅದರ ಕೆಳಗೆನಾನು ಯಾವಾಗಲೂ ಸತ್ಯವನ್ನು ಎತ್ತಿ ಹಿಡಿಯುತ್ತೇನೆ’ ಎಂಬ `ಸತ್ಯಮೇವೋದ್ಧರಾಮ್ಯಹಂ’ ಎಂಬ ಉಲ್ಲೇಖವಿದೆ.

(ಹಲವಾರು ಚಾರಿತ್ರಿಕ ದಾಖಲೆಗಳಿಂದ ಸಂಗ್ರಹಿತ)
(ಲೇಖಕರು ಕನ್ನಡದ ಪ್ರಸಿದ್ಧ ಬರಹಗಾರರು)‌

NO COMMENTS

LEAVE A REPLY

Please enter your comment!
Please enter your name here

Exit mobile version