2025ನೆಯ ವರ್ಷದ ನೊಬೆಲ್ ಪ್ರಶಸ್ತಿ ವಿಜೇತ ಹಂಗೇರಿಯ ಲೇಖಕ ಲಾಸ್ಲೊ ಕ್ರಾಸ್ನಾಹೋರ್ಕೈ (ಕುರಿತು ಭಾನುವಾರ 12-10-2025ರಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಸೌರಭದಲ್ಲಿ ಡಾ. ಟಿ.ಎಸ್. ಚನ್ನೇಶ್ ಪ್ರಕಟವಾದ ಲೇಖನ)
~ ಡಾ. ಟಿ.ಎಸ್. ಚನ್ನೇಶ್
ಹಂಗೇರಿಯ ಲೇಖಕ ಲಾಸ್ಲೊ ಕ್ರಾಸ್ನಾಹೋರ್ಕೈ 2025ನೆಯ ವರ್ಷದ ನೊಬೆಲ್ ಪುರಸ್ಕಾರ ಪಡೆದಿದ್ದಾರೆ. ನಿಜ ಹೇಳಬೇಕೆಂದರೆ ಅವರ ಹೆಸರನ್ನೂ ಸರಿಯಾಗಿ ಉಚ್ಚರಿಸಲು ಕಷ್ಟವಾಗುತ್ತಿರುವುದರಿಂದ ಆರಂಭಿಸಿ ಪರಿಚಯಿಸಬೇಕಾಗುತ್ತದೆ.
ಭಾಷೆಯ ಪರಿಚಯ ಇಲ್ಲದೆ ಏನನ್ನೂ ಹೇಳುವುದು ಅಷ್ಟು ಸುಲಭವಲ್ಲದ ವಿಚಾರ. ಒಂದು ವಿಚಾರವಂತೂ ತಿಳಿಯಿತು, ಬಹುಶಃ ಅವರ ಯಾವುದೇ ಕೃತಿಗಳೂ ಭಾರತೀಯ ಭಾಷೆಗಳಿಗೆ ಅನುವಾದ ಆದ ಹಾಗೆ ಕಾಣುತ್ತಿಲ್ಲ. ಇದನ್ನು ಇಂಟರನೆಟ್‌ನಲ್ಲಿ ಹುಡುಕಾಡಿದಾಗ ತಿಳಿದದ್ದು, ನನ್ನ ತಿಳಿವಳಿಕೆಯಲ್ಲ. ಅವರ ಬರಹಗಳ ಬಗ್ಗೆ ತಿಳಿದಾಗ ಗಮನ ಸಳೆದದ್ದು `ವಾರ್ ಆಂಡ್ ವಾರ್’ ಎನ್ನುವ ಕಾದಂಬರಿ.
ಅದರ ಬಗ್ಗೆ ಇಂಟರ್‌ನೆಟ್‌ನಲ್ಲಿ ಒಂದಷ್ಟು ಹುಡುಕಾಡಿ ಅದರ ವಿಮರ್ಶೆಯನ್ನು ಮಾತ್ರ ಓದಲು ಆಯಿತು. ಅದರಿಂದ ತಿಳಿದ ಸಂಗತಿಯನ್ನು ಮಾತ್ರ ಹಂಚಿಕೊಳ್ಳುತ್ತಿದ್ದೇನೆ. ನನ್ನದೇ ಓದಿನಲ್ಲಿ ಅಲ್ಲದ್ದನ್ನು ಹೇಗೆ ಬರೆಯಲಿ! ಡೇವಿಡ್ ಔರ್ಬಾಚ್ ಎನ್ನುವ ಒಬ್ಬ ಲೇಖಕನ ಮಾತುಗಳನ್ನು ಇಲ್ಲಿ ಕೊಡುತ್ತಿದ್ದೇನೆ. ಆತ ಕೂಡ ಜಾರ್ಜ್ ಸ್ಜಿರ್ಟೆಸ್ ಎಂಬ ಕವಿಯು ಇಂಗ್ಲಿಷ್‌ಗೆ ಅನುವಾದ ಮಾಡಿದ ಕೃತಿಯನ್ನು ಕುರಿತು ಬರೆದಿದ್ದಾರೆ. ಅದರ ಕೆಲವು ವಿಚಾರಗಳನ್ನು ಇಲ್ಲಿ ಕೊಟ್ಟಿರುವೆ.
ವಾರ್ ಅಂಡ್ ವಾರ್ ಒಂದು ಗಮನಾರ್ಹ ಕಾದಂಬರಿಯಾಗಿದ್ದು, ಇದು ಕ್ರಾಸ್ನಾಹೋರ್ಕೈ ಅವರ ಹಿಂದಿನ ಕಾದಂಬರಿಗಿಂತ ತೀವ್ರವಾಗಿ ಭಿನ್ನವಾಗಿದೆ. ಶೈಲಿಯ ದೃಷ್ಟಿಯಿಂದ, ಅಲ್ಲಿ ದೊಡ್ಡ ವಾಕ್ಯಗಳು ಮತ್ತು ಪ್ಯಾರಾಗಳು ಇವೆ! ಇದು ಒಂದು ಸಾಂಕೇತಿಕ ಕಥೆಯಲ್ಲ, ಆದರೆ ಇದು ವಾಸ್ತವಿಕ ನಿರೂಪಣೆಯೂ ಅಲ್ಲ, ಫ್ಯಾಂಟಸಿಯೂ ಅಲ್ಲ, ಮತ್ತು ಅವರ ಹಿಂದಿನ ಕೃತಿಯಂತೆ ಅಸಾಮಾನ್ಯವಾದ ವಾರ್ ಅಂಡ್ ವಾರ್ ಒಂದು ಸುಯಿ ಜೆನೆರಿಸ್. ಅಂದರೆ ಅದಕ್ಕೆ ಅದಷ್ಟೇ ಸಾಟಿ, ಅದೇ ಒಂದು ಭಿನ್ನ ಮಾದರಿ, ಅದು ಅದರಂತೆ ಅಷ್ಟೇ!
ಇದರ ಕಥೆಯು ಸರಳವಾಗಿದ್ದರೂ ವಿಚಿತ್ರವಾಗಿದೆ. ಹಂಗೇರಿಯನ್ ವಿದ್ವಾಂಸರಾದ ಕೋರಿನ್, ತನಗೆ ಅತ್ಯಂತ ಮಹತ್ವದ್ದಾಗಿರುವ ಐತಿಹಾಸಿಕ, ನಿಗೂಢವಾದ ಹಸ್ತಪ್ರತಿಯ ಬಗ್ಗೆ ತೀರಾ ಗೀಳನ್ನು ಹೊಂದಿರುತ್ತಾರೆ. ಅದು ಅವರಿಗೆ ಹೇಗೆ ಸಿಕ್ಕಿತು ಎಂಬುದೂ ನಿಗೂಢವೇ! ಆದರೆ ಅದನ್ನು ಜಗತ್ತಿನ ಎಲ್ಲ ಮಾನವೀಯತೆಯೊಂದಿಗೆ ಹಂಚಿಕೊಳ್ಳಲು ಬಯಸುತ್ತಾನೆ. ಅದಕ್ಕಾಗಿ ಹಾಗೆ ಮಾಡಲು, ಅವನು ಪ್ರಪಂಚದ ಬಹು ಮುಖ್ಯವಾದ ನಗರ ನ್ಯೂಯಾರ್ಕ್ಗೆ ಹೋಗುತ್ತಾನೆ.
ಅವನ ದುರದೃಷ್ಟಕ್ಕೆ ಅಲ್ಲಿ ಕೆಲವು ಅಹಿತಕರ ಪಾತ್ರಗಳ ಪರಿಚಯವಾಗುತ್ತದೆ. ನಿಗೂಢವಾದ ಹಸ್ತಪ್ರತಿಯನ್ನು ಇಂಟರ್‌ನೆಟ್‌ನಲ್ಲಿ ಪೋಸ್ಟ್ ಮಾಡುವ ಉದ್ದೇಶದಿಂದ ಅಲ್ಲಿಗೆ ಬಂದಿರುತ್ತಾನೆ. ತನಗೆ ಸಿಕ್ಕವರಿಗೆಲ್ಲ ಹಸ್ತಪ್ರತಿಯನ್ನು ಕುರಿತಾಗಿ ವಿವರಿಸುತ್ತಲೇ ಇರುತ್ತಾನೆ. ಕೋರಿನ್ ಒಂದು ಬಗೆಯ ಗೀಳಿನಲ್ಲಿದ್ದು ನಿಗೂಢವಾದ ಹಾಗೂ ದಟ್ಟವಾದ ಸಂಗತಿಗಳನ್ನು ಕಾದಂಬರಿಯಲ್ಲಿ ಕಟ್ಟಿಕೊಟ್ಟ ಬಗೆಯನ್ನು ಖ್ಯಾತ ಲೇಖಕ ಕಾಫ್ಕಾನಿಗೆ ಹೋಲಿಸಲಾಗುತ್ತಿದೆ.
ಅವರನ್ನು ಸ್ವಲ್ಪವಾದರೂ ಪರಿಚಯಿಸುವ ಆಸೆಯಿಂದ ಇವಿಷ್ಟನ್ನು ಹೇಳಿದೆ ಅಷ್ಟೇ! 1954ರ ಜನವರಿ 5ರಂದು ಹಂಗೇರಿಯ ಗ್ಯೂಲಾ ಎಂಬಲ್ಲಿ ಜನಿಸಿದ ಲಾಸ್ಲೊ, ಸುಮಾರು 15 ಕಾದಂಬರಿಗಳನ್ನು ರಚಿಸಿದ್ದಾರೆ. 1985ರಲ್ಲಿ ಅವರ ಮೊದಲ ಕಾದಂಬರಿ ಪ್ರಕಟವಾಯಿತು. 2015ರಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿಯಲ್ಲದೆ ಅನೇಕ ಅಂತರಾಷ್ಟ್ರೀಯ ಮನ್ನಣೆಗಳಿಗೆ ಪಾತ್ರರಾಗಿದ್ದಾರೆ. ಈ ವರ್ಷ 2025ರಲ್ಲಿ ಸಾಹಿತ್ಯಕ್ಕೆ ನೊಬೆಲ್ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ. ಅವರಿಗೆ ಅಭಿನಂದನೆಗಳು.
ಹಂಗೇರಿಯ ಲೇಖಕ ಲಾಸ್ಲೊ ಕ್ರಾಸ್ನಾಹೋರ್ಕೈ ಅವರ `ಹೆರ್ಸ್ಟ್ 07769′ ಕಾದಂಬರಿಗೆ ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂಬ ಹೆಗ್ಗಳಿಕೆಯ ನೊಬೆಲ್ ಪ್ರಶಸ್ತಿ ಆಯ್ಕೆಯಾಗಿದೆ. ಜರ್ಮನಿಯ ಸಣ್ಣ ಪಟ್ಟಣವೊಂದರಲ್ಲಿ ಸಂಭವಿಸಿದ ಸಾಮಾಜಿಕ ಅಶಾಂತಿಯನ್ನು ಈ ಕಾದಂಬರಿ ಚಿತ್ರಿಸುತ್ತದೆ. ಹೀಗಾಗಿ ಇದು ಶ್ರೇಷ್ಠ ಸಮಕಾಲೀನ ಕಾದಂಬರಿ ಎಂದು ಸ್ವೀಡಿಷ್ ಅಕಾಡೆಮಿ ತಿಳಿಸಿದೆ. ಲಾಸ್ಲೊ ಈ ಪ್ರಶಸ್ತಿ ಪಡೆದ ಎರಡನೇ ಹಂಗೇರಿಯನ್ ಬರಹಗಾರ. 2002ರಲ್ಲಿ ಆ ದೇಶಕ್ಕೆ ಮೊದಲ ನೊಬೆಲ್ ಸಾಹಿತ್ಯ ಪ್ರಶಸ್ತಿ ಲಭಿಸಿತ್ತು.
ದೀರ್ಘಕಾಲದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಿದ ಭಾರತೀಯ ಲೇಖಕ ಅಮಿತಾವ್ ಘೋಷ್ ಅವರಿಗೆ ಈ ಬಾರಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಲಭಿಸಬಹುದೆಂದು ನಿರೀಕ್ಷಿಸಲಾಗಿತ್ತು. ಇದು ಹುಸಿಯಾದ ಕಾರಣದಿಂದಾಗಿ ಭಾರತಕ್ಕೆ ಎರಡನೇ ಬಾರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಲಭಿಸುವ ಅವಕಾಶ ತಪ್ಪಿದೆ. 1913ರಲ್ಲಿ `ಗೀತಾಂಜಲಿ’ ಕೃತಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ರವೀಂದ್ರನಾಥ್ ಠಾಗೋರ್, ಈ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಲೇಖಕರಾಗಿದ್ದಾರೆ.
ಆ ಬಳಿಕ ಭಾರತದ ಹಲವು ಕೃತಿಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದರೂ ಇಲ್ಲಿಯವರೆಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ದೊರೆತಿಲ್ಲ. ನೊಬೆಲ್ ಸಮಿತಿಯು ಈ ತನಕ 117 ಸಲ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, ಒಟ್ಟು 121 ಬರಹಗಾರರಿಗೆ ಈ ಗೌರವ ಸಂದಿದೆ.