ಸಂಯುಕ್ತ ಕರ್ನಾಟಕ ದಿನಪತ್ರಿಕೆ ಬುಧವಾರದ ಸಂಪಾದಕೀಯ
ಹಿಂದೆ ಕರ್ನಾಟಕ ಲೋಕಾಯುಕ್ತ ಇಡೀ ದೇಶದಲ್ಲಿ ಉತ್ತಮ ಹೆಸರು ಪಡೆದಿತ್ತು. ನ್ಯಾಯಮೂರ್ತಿ ಸಂತೋಷ ಹೆಗ್ಡೆ, ನ್ಯಾಯಮೂರ್ತಿ ವೆಂಕಟಾಚಲ ಜನರಲ್ಲಿ ವಿಶ್ವಾಸ ಮೂಡಿಸಿದ್ದರು. ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತಕ್ಕೆ ಹೆದರಿ ಕಬ್ಬನ್ ಪಾರ್ಕ್‌ನಲ್ಲಿ ಕಾರಿನಲ್ಲೇ ರಾತ್ರಿ ನಿದ್ದೆ ಮಾಡಿದ ದಿನಗಳಿದ್ದವು. ಈಗ ಅದೇ ಲೋಕಾಯುಕ್ತ ಪೊಲೀಸರ ಮೇಲೆ ಕಣ್ಣಿಡಲು ಮತ್ತೊಂದು ಜಾಗೃತ ದಳ ನೇಮಿಸುವ ದುಃಸ್ಥಿತಿ ಬಂದಿದೆ.
ಸಂತೋಷ ಹೆಗ್ಡೆ ಅವರ ಅವಧಿ ಮುಕ್ತಾಯಗೊಂಡ ಮೇಲೆ ಕುಂಟುತ್ತಾ ಸಾಗುತ್ತ ಬಂದ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಬಲ ತುಂಬುವ ಕೆಲಸ ನಡೆಯಲಿಲ್ಲ. ಅಧಿಕಾರಕ್ಕೆ ಬಂದವರೆಲ್ಲ ಅದನ್ನು ಕುಗ್ಗಿಸುವ ಕೆಲಸ ಕೈಗೊಂಡರೇ ಹೊರತು ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಡುವ ಮನೋಭಾವವನ್ನೇ ತೋರಲಿಲ್ಲ. ಕೆಲಕಾಲ ಇದಕ್ಕೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ ಅಸ್ತಿತ್ವಕ್ಕೆ ಬಂದಿತ್ತು. ನಂತರ ಅದು ಲೋಕಾಯುಕ್ತದಲ್ಲೇ ವಿಲೀನವಾಯಿತು. ಮೊದ ಮೊದಲು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಿಸುವ ಕೆಲಸ ನಡೆಯಿತು. ಅಲ್ಲದೆ ಲೋಕಾಯುಕ್ತರಿಗೆ ಬೇಕಾದ ಪೊಲೀಸ್ ವ್ಯವಸ್ಥೆಯನ್ನು ಒದಗಿಸಲಾಗಿತ್ತು.
ಹೀಗಾಗಿ ಭ್ರಷ್ಟರಿಗೆ ನಡುಕ ಹುಟ್ಟಿಸಲು ಸಾಧ್ಯವಾಗಿತ್ತು. ಇದೊಂದೇ ವ್ಯವಸ್ಥೆಯಲ್ಲಿ ಪೊಲೀಸರು ಮತ್ತು ನ್ಯಾಯಮೂರ್ತಿಗಳು ಒಟ್ಟಿಗೆ ಸೇರಿ ಕೆಲಸ ಮಾಡಲು ಸಾಧ್ಯ. ಅದರಿಂದ ಕಾನೂನು ಕ್ರಮಗಳಿಗೆ ಲೋಪ ಒದಗಿಬರಲು ಅವಕಾಶ ಇರುವುದಿಲ್ಲ. ಈಗ ಸಶಕ್ತ ಲೋಕಾಯುಕ್ತರು ಇಲ್ಲ, ಅವರಿಗೆ ತಕ್ಕಂತೆ ಪೊಲೀಸ್ ಅಧಿಕಾರಿಗಳೂ ಇಲ್ಲ. ಲೋಕಾಯುಕ್ತಕ್ಕೆ ಸೇರಿದ ಎಸ್‌ಪಿಯೊಬ್ಬರು ಭ್ರಷ್ಟಾಚಾರಕ್ಕೆ ಇಳಿದಿದ್ದು, ಇಡೀ ವ್ಯವಸ್ಥೆ ಕುಸಿಯುವಂತೆ ಮಾಡಿದೆ.
ಈಗ ಲೋಕಾಯುಕ್ತರು ತಮ್ಮ ಪೊಲೀಸರನ್ನು ಸಂದೇಹದಿಂದ ನೋಡುವ ಕಾಲ ಬಂದಿದೆ. ಅದಕ್ಕಾಗಿ ಅವರು ಮತ್ತೊಂದು ಜಾಗೃತ ದಳ ರಚಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ. ಇದು ಜಾರಿಗೆ ಬಂದಲ್ಲಿ ಇಡೀ ಲೋಕಾಯುಕ್ತ ವ್ಯವಸ್ಥೆಗೆ ಅಂತ್ಯಕಾಲ ಸಮೀಪಿಸುತ್ತಿದೆ ಎಂದು ಹೇಳಬಹುದು. ಈಗ ಲೋಕಾಯುಕ್ತದಲ್ಲಿ ಪ್ರಾಮಾಣಿಕತೆ ಕೊರತೆ ಎದ್ದುಕಾಣುತ್ತಿದೆ. ಸರ್ಕಾರದ ಪ್ರಭಾವ ಅಧಿಕಗೊಂಡಿದೆ. ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳೇ ಇಲ್ಲವೇನೋ ಎಂಬ ವಾತಾವರಣ ಮೂಡಿದೆ.
ಒಟ್ಟು 500 ಹುದ್ದೆಗಳು ಖಾಲಿ ಬಿದ್ದಿವೆ. ಲೋಕಾಯುಕ್ತಕ್ಕೆ ನೇರ ನೇಮಕಾತಿ ಅಧಿಕಾರ ಇಲ್ಲ. ಅದರೊಂದಿಗೆ ನ್ಯಾಯಾಲಯಗಳಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆ ಹಂತದಲ್ಲಿ ಉಳಿದಿವೆ. ಸಚಿವರು ಮತ್ತು ಶಾಸಕರ ಮೇಲೆ ಹಲವು ಪ್ರಕರಣಗಳು ಇತ್ಯರ್ಥವಾಗದೆ ಇರುವುದು ಜನರಿಗೆ ಇಡೀ ವ್ಯವಸ್ಥೆಯ ಮೇಲೆ ಜಿಗುಪ್ಸೆ ಮೂಡಿಸಿದೆ. ಇದರಿಂದ ಭ್ರಷ್ಟಾಚಾರ ಎಲ್ಲ ಹಂತಗಳಲ್ಲಿ ಮಿತಿಮೀರಿದೆ. ಲಂಚದ ಹಾವಳಿ ಹಾಡಹಗಲೇ ನಡೆಯುತ್ತಿದ್ದರೂ ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಹೀಗಾಗಿ ಜನಸಾಮಾನ್ಯರು ಸರ್ಕಾರಿ ಅಧಿಕಾರಿಗಳ ಬಳಿ ತಮ್ಮ ಕೆಲಸಕ್ಕೆ ಹೋಗಲು ಹಿಂಜರಿಯುತ್ತಾರೆ.
ಸರ್ಕಾರ ಉಚಿತ ಗ್ಯಾರಂಟಿಗಳನ್ನು ನೀಡಿದ್ದರೂ ಸರ್ಕಾರಿ ಇಲಾಖೆಗಳ ಭ್ರಷ್ಟಾಚಾರವನ್ನು ನೋಡಿ ಜನ ಸರ್ಕಾರದ ನೆರವೇ ಬೇಡ ಎಂದು ಹೇಳುವ ಕಾಲ ಬಂದಿದೆ. ಕಂಪ್ಯೂಟರೀಕರಣ ಬಂದ ಮೇಲೆ ಪಾರದರ್ಶಕ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆಯಿಂದ ಭ್ರಷ್ಟಾಚಾರ ಇಳಿಮುಖಗೊಳ್ಳಬಹುದು ಎಂದು ಭಾವಿಸಲಾಗಿತ್ತು. ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚು ಹೇಳಲಾಗುತ್ತಿತ್ತು. ಈಗ ಸಬ್‌ರಿಜಿಸ್ಟ್ರಾರ್ ಕಚೇರಿ ಎಲ್ಲ ಇಲಾಖೆಗಳನ್ನು ಮೀರಿಸಿದೆ. ಕಂಪ್ಯೂಟರ್ ಕೂಡ ಈ ಭ್ರಷ್ಟ ವ್ಯವಸ್ಥೆಗೆ ಹೊಂದಿಕೊಂಡು ಬಿಟ್ಟಿದೆ. ಜನಪ್ರತಿನಿಧಿಗಳಿಗೂ ಲೋಕಾಯುಕ್ತ ದುರ್ಬಲವಾಗಿರುವುದು ಬೇಕು.
ಅಧಿಕಾರಕ್ಕೆ ಬರುವವರೆಗೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದಾಗಿ ಹೇಳುತ್ತಾರೆ ಅಧಿಕಾರಕ್ಕೆ ಬಂದ ಕೂಡಲೇ ಅವರ ಮಾತಿನ ವರಸೆಯೇ ಬದಲಾಗಿ ಹೋಗುತ್ತದೆ. ಭ್ರಷ್ಟಾಚಾರ ಜಾಗತಿಕ ಮಟ್ಟದಲ್ಲೂ ಇದೆ ಎಂದು ಅದನ್ನು ಸಮರ್ಥಿಸಿಕೊಳ್ಳಲು ಮುಂದಾಗುತ್ತಾರೆ. ಅಧಿಕಾರದಲ್ಲಿರುವವರ ಮರ್ಜಿ ಹಿಡಿಯುವ ಅಧಿಕಾರಿಗಳು ಲೋಕಾಯುಕ್ತಕ್ಕೆ ಬಂದರೂ ತಮ್ಮ ಚಾಳಿಯನ್ನು ಬಿಡುವುದಿಲ್ಲ. ಹೀಗಾಗಿ ಇಡೀ ವ್ಯವಸ್ಥೆ ಕುಸಿಯುವ ಹಂತ ತಲುಪುವುದು ಸಹಜ.
ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ಸಂತೋಷ ಹೆಗ್ಡೆ ಸಲಹೆ ಪಡೆದು ಲೋಕಾಯುಕ್ತಕ್ಕೆ ಕಾಯಕಲ್ಪ ಮಾಡಬಹುದಾಗಿತ್ತು. ಆದರೆ ಪ್ರತಿಯೊಬ್ಬ ರಾಜಕಾರಣಿಗೆ ಅಧಿಕಾರ ಬಂದ ಕೂಡಲೇ ತಮ್ಮ ಕುಟುಂಬದ ಮೂರು ತಲೆಮಾರು ಕೂತು ತಿನ್ನುವಷ್ಟು ಹಣ ಸಂಪಾದನೆ ಮಾಡುವು ಉದ್ದೇಶ ಇರುತ್ತದೆ. ನಿಜಲಿಂಗಪ್ಪ, ಕಡಿದಾಳು ಮಂಜಪ್ಪ ಅವರನ್ನು ಅನುಸರಿಸುವವರು ಯಾರೂ ಇಲ್ಲ. ರಾಜ್ಯದಲ್ಲಿ ಇರುವ ಹಾಗೆ ಕೇಂದ್ರದ ಸಿಬಿಐ, ಇಡಿ ಸಂಸ್ಥೆಗಳು ಸುಪ್ರೀಂಕೋರ್ಟ್ ಟೀಕೆಗಳಿಗೆ ಒಳಗಾಗುತ್ತಿವೆ. ಅಲ್ಲಿಯ ಅಧಿಕಾರಿಗಳ ಮೇಲೆ ಇನ್ನೂ ದೂರುಗಳು ಕೇಳಿ ಬರುತ್ತಿಲ್ಲ.
ಇಂಥ ಸಂಸ್ಥೆಗಳು ಹದಗೆಟ್ಟರೆ ಅದರ ಪ್ರಭಾವ ಇಡೀ ಸಮಾಜದ ಮೇಲೆ ಆಗುತ್ತದೆ. ಕರ್ನಾಟಕ ಲೋಕ ಸೇವಾ ಆಯೋಗ ಈಗ ಸರಿಪಡಿಸಲಾಗದ ಅವಸ್ಥೆ ತಲುಪಿದೆ. ಅದೇರೀತಿ ಕರ್ನಾಟಕ ಲೋಕಾಯುಕ್ತ ಹಳ್ಳ ಹಿಡಿಯುವ ಮುನ್ನ ಸಾರ್ವಜನಿಕರು ಎಚ್ಚೆತ್ತು ಅಣ್ಣಾ ಹಜಾರೆ ರೀತಿ ಚಳವಳಿ ನಡೆಸುವ ಅಗತ್ಯವಿದೆ.
ನಮ್ಮ ಕೆಲಸವನ್ನು ದುಡ್ಡು ಕೊಟ್ಟು ಮಾಡಿಸಿಕೊಂಡು ಬಿಡುತ್ತೇವೆ ಎಂದು ಭಾವಿಸಿದರೆ ನಮ್ಮ ಮಕ್ಕಳ ಕಾಲಕ್ಕೆ ಬೀದಿಯಲ್ಲೇ ಹೊಡೆದು ಬಡಿದು ಎಲ್ಲವನ್ನೂ ಕಿತ್ತುಕೊಂಡು ಹೋಗುವ ಕಾಲ ಬರಲಿದೆ. ನಾಗರಿಕ ಸಮಾಜ ಎಂದರೆ ಕಟ್ಟಕಡೆಯ ಮನುಷ್ಯನಿಗೆ ಮೊತ್ತ ಮೊದಲ ಅವಕಾಶ ಸಿಗಬೇಕು. ಅವನ ಕೆಲಸಗಳು ಒಂದು ಪೈಸೆ ಲಂಚ ಇಲ್ಲದೆ ನಡೆಯುವಂತಾಗಬೇಕು. ಹಿಂದೆ ಈ ಕಾಲ ಇತ್ತು ಎಂಬುದನ್ನು ನೆನಪಿಸಿಕೊಂಡಲ್ಲಿ ಆ ಕಾಲ ಮತ್ತೆ ಬರಲಾರದು ಎಂಬ ನಿರಾಶಾಭಾವನೆ ಮೂಡುವುದು ಸಹಜ.