ಇಂದಿನ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರಕಟವಾದ ಕಾರ್ತಿಕ ಎಸ್ ಬಾಪಟ್ ಅವರ ಅಂಕಣ
ಅಗಣಿತ ಗುಣಗಳ ಮಾನವ ಏನೇನೋ ಕಂಡುಹಿಡಿದ ಹಾಗೂ ಕಂಡುಹಿಡಿಯುತ್ತಿದ್ದಾನೆ, ಇವೆಲ್ಲವುಗಳಲ್ಲಿ ಅತ್ಯಂತ ಎತ್ತರದ ಆವಿಷ್ಕಾರವೆಂದರೆ ಕಬ್ಬಿಣದ ಬಳಕೆ. ಬಹುಶಃ ಕಬ್ಬಿಣದ ಬಳಕೆಯ ಆವಿಷ್ಕಾರವೊಂದು ಆಗದೆ ಇದ್ದಿದ್ದರೆ ನಾವೆಲ್ಲರೂ ನಮ್ಮ ಈಗಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಕಬ್ಬಿಣದ ಬಳಕೆಗೂ ಮಿಗಿಲಾದ ಆವಿಷ್ಕಾರ ಇನ್ನೊಂದಿಲ್ಲ ಎಂದು ಇತಿಹಾಸಕರು ಹಾಗೂ ವಿಜ್ಞಾನಿಗಳು ವಾದಿಸಬಹುದು ಆದರೆ ಅದಕ್ಕೆ ಮಿಗಿಲಾದ ಆವಿಷ್ಕಾರ ಎಂದರೆ ಮನುಷ್ಯನ ಸಂವಹನ ಕಲೆ ಅದರಲ್ಲೂ ಬರಿ ಸಂವಹನವಲ್ಲ ಭಾಷೆಯ ಬಳಕೆ ಎಂಬುದಿದೆಯಲ್ಲ ಇದು ಒಂದಿಡೀ ಪ್ರಪಂಚದ ಶೋಧನೆಗಳಲೆಲ್ಲಾ ಅಭೂತಪೂರ್ವವಾದದ್ದು. ಭಾಷೆಯೆಂಬ ಸಂವಹನ ಸೇತುವೆ ಇಲ್ಲದಿದ್ದರೆ ನಮ್ಮ ಜೀವನ ಎಷ್ಟೊಂದು ಬರಿದಾಗುತ್ತಿತ್ತು ಎಂದು ಊಹಿಸಿಕೊಳ್ಳಲೂ ಅಸಾಧ್ಯ.
ಇದಮಂಧಂತಮಃ ಕೃತ್ಸ್ನಂ ಜಾಯೇತ ಭುವನತ್ರಯಂ|
ಯದಿ ಶಬ್ದಾಹವಯಂ ಜ್ಯೋತಿರಸಂಸಾರನ್ನ ದೀಪ್ಯತೇ||
ಈ ಮೇಲಿನ ಸಂಸ್ಕೃತ ಪದದ ಉಕ್ತಿ ಭಾಷೆಯ ಹಾಗೂ ಮಾತಿನ ಪ್ರಾಮುಖ್ಯತೆಯನ್ನು ವಿವರಿಸುತ್ತದೆ. ಭಾಷೆ ಎಂಬ ಬೆಳಕು ಇಲ್ಲದಿದ್ದರೆ ಜಗತ್ತು ಕತ್ತಲಲ್ಲಿ ಮುಳುಗುತ್ತಿತ್ತು. ಮನುಷ್ಯನ ಸಂವಹನ, ವ್ಯವಹಾರ, ಆಲೋಚನೆಗಳ ವಿನಿಮಯ ಹೀಗೆ ಪ್ರತಿಯೊಂದು ಕ್ಲಿಷ್ಟವಾಗುತ್ತಿತ್ತು ಹಾಗೂ ಮಾನವ ಕೂಡ ಪ್ರಾಣಿ ಪಕ್ಷಿಗಳ ರೀತಿಯಲ್ಲಿ ಸನ್ನೆ ಮಾಡಿಕೊಂಡಿರಬೇಕಾಗುತ್ತಿತ್ತು. ಅದೇನೇ ಇರಲಿ ಭಾಷೆಯ ಪರಿಭಾಷೆ ಕಾಲಕ್ರಮೇಣ ಸಂವಹನ ವಾಹಕವಾಗಷ್ಟೇ ಉಳಿಯಲಿಲ್ಲ ಅದು ಆಯಾ ಭಾಷೆಯನ್ನು ಮಾತನಾಡುವ ಅಲ್ಲಿನ ಜನರ, ಅಲ್ಲಿನ ಸಂಸ್ಕೃತಿಯ ಅಸ್ಮಿತೆಯ ಭಾಗವಾಯಿತು. ಅದು ಯಾವುದೇ ಪ್ರಾಂತ್ಯವಿರಲಿ ಅಲ್ಲಿನ ಅಸ್ಮಿತೆಯ ಮೇಲೆ ಪ್ರಹಾರವಾದರೆ ಯಾರು ತಾನೇ ಕೈ ಕಟ್ಟಿ ಕುಳಿತಾರು? ಕಳೆದ ಹದಿನೈದು ದಿನಗಳಿದ ಮಹಾರಾಷ್ಟ್ರ ಮರಾಠಿ ಮರಾಠಿ ಎಂದು ಭುಗಿಲೆದ್ದದ್ದು ಮರಾಠಿ ಅಸ್ಮಿತೆಯ ಮೇಲೆ ತ್ರಿಭಾಷಾ ಸೂತ್ರ ಹೇರಿದಾಗ.
ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ನ್ಯಾಷನಲ್ ಎಜುಕೇಶನ್ ಪಾಲಿಸಿ ನೆಪದಲ್ಲಿ ಮಹಾರಾಷ್ಟ್ರದಲ್ಲಿ ಒಂದನೇ ತರಗತಿಯಿಂದ ತ್ರಿಭಾಷಾ ಸೂತ್ರ ಹೇರಿತು. ಹೊಸ ತ್ರಿಭಾಷಾ ಸೂತ್ರದ ಪ್ರಕಾರ ಮಕ್ಕಳಿಗೆ ಒಂದನೇ ತರಗತಿಯಿಂದ ಮೂರು ಭಾಷೆಗಳನ್ನು ಕಲಿಸಬೇಕು ಎಂದಿತು, ಸರ್ಕಾರ ಎಲ್ಲೂ ಮೂರನೇ ಭಾಷೆಯಾಗಿ ಹಿಂದಿಯನ್ನೇ ತೆಗೆದುಕೊಳ್ಳಬೇಕೆಂದು ಹೇಳಲಿಲ್ಲ ಆದರೆ ಹಿಂದಿ ಅಲ್ಲದೆ ಬೇರೆ ಯಾವುದೇ ಭಾಷೆಯನ್ನು ಮೂರನೇ ಭಾಷೆಯಾಗಿ ತೆಗೆದುಕೊಳ್ಳಲಾಗದ ಪ್ರಸಂಗ ಸೃಷ್ಟಿ ಆಗುವಂತಿತ್ತು. ಸರ್ಕಾರದ ಸುತ್ತೋಲೆಯ ಪ್ರಕಾರ ಶಾಲೆಯಲ್ಲಿ ಮೂರನೇ ಭಾಷೆಯಾಗಿ ಯಾವುದೇ ಭಾಷೆಯನ್ನು ತೆಗೆದುಕೊಳ್ಳಬಹುದು ಆದರೆ ಶಾಲೆಯಲ್ಲಿನ ಇಪ್ಪತ್ತು ಮಕ್ಕಳು ಆ ಭಾಷೆಯನ್ನು ಮೂರನೇ ಭಾಷೆಯನ್ನಾಗಿ ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಬೇಕು ಎಂಬ ಉಲ್ಲೇಖವಿತ್ತು, ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರವ್ಯಾಪಿ ವ್ಯಾಪಿಸಿರುವ ಹಿಂದಿಯನ್ನು ಬಿಟ್ಟು ಇನ್ಯಾವ ಭಾಷೆಯನ್ನು ಬೋಧಿಸಲು ಯಾವ ಶಾಲೆ ಮುಂದೆ ಬರಬಹುದು, ಹೀಗೆ ಸರ್ಕಾರ ಬೇಕೋ ಬೇಡವೋ ಒಂದನೇ ತರಗತಿಯಿಂದಲೇ ಎನ್‌ಇಪಿ ಹೆಸರಲ್ಲಿ ಹಿಂದಿ ಹೇರಿಕೆಗೆ ಮುಂದಾಗಿ ಮಹಾರಾಷ್ಟ್ರದ ಮರಾಠಿ ಅಸ್ಮಿತೆ ಎಂಬ ಜೇನುಗೂಡಿಗೆ ಕೈ ಹಾಕಿತು, ಪರಿಣಾಮ ಇಡೀ ಮಹಾರಾಷ್ಟ್ರ ಒಟ್ಟಾಗಿ ಅದರಲ್ಲೂ ಠಾಕ್ರೆ ಸಹೋದರರ ನೇತೃತ್ವದಲ್ಲಿ ಫಡಣವೀಸ್ ಸರ್ಕಾರದ ಭಾಷಾ ಸೂತ್ರದ ವಿರುದ್ಧ ಜುಲೈ ಐದನೇ ತಾರೀಕಿಗೆ ಬೃಹತ್ ಜಾಥಾ ಹೊರಡಲು ಸಜ್ಜಾಗಿತ್ತು. ಹಾಗೇನಾದರೂ ಆಗಿದ್ದೆ ಆದರೆ ಮುಂಬರುವ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದರ ಪರಿಣಾಮ ವ್ಯತಿರಿಕ್ತ ಆಗಬಹುದು ಎಂದು ಅರಿತ ಫಡಣವೀಸ್ ಸರ್ಕಾರ ಕೂಡಲೇ ತ್ರಿಭಾಷಾ ಸೂತ್ರವನ್ನು ರದ್ದು ಮಾಡಿತು, ಕೆಲವರು ಠಾಕ್ರೆ ಸಹೋದರರು ಚುನಾವಣೆಯ ಹಿನ್ನೆಲೆಯಲ್ಲಿ ಮರಾಠಿ ವಿಷಯವನ್ನು ಮುನ್ನೆಲೆಗೆ ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ವಾದಿಸಿದರು, ಅದೇನೇ ಇರಲಿ ರಾಜಕೀಯವನ್ನು ಬದಿಗಿಟ್ಟು ನೋಡಿದರೆ ಅಲ್ಲಿ ಗೆದ್ದದ್ದು ಮರಾಠಿ.
ಈಗಾಗಲೇ ಐದನೇ ತರಗತಿಯಿಂದ ಹಿಂದಿ ಭಾಷೆ ಮಹಾರಾಷ್ಟ್ರ ಎಂದೇ ಅಲ್ಲ ಕರ್ನಾಟಕವು ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಮೂರನೇ ಭಾಷೆಯಾಗಿ ಕಲಿಕೆಯಲ್ಲಿದೆ. ಹಾಗಿದ್ದಾಗ ಒಂದನೇ ತರಗತಿಯಿಂದ ಹಿಂದಿ ಕಲಿಸಲೇಬೇಕೆಂಬ ಹಠಕ್ಕೆ ಬಿದ್ದಂತೆ ಸರ್ಕಾರ ವರ್ತಿಸಿದ್ದು ಮರಾಠಿಗರಿಗೆ ದೆಹಲಿ ದೊರೆಗಳ ಓಲೈಕೆಯಂತೆ ಕಂಡುಬಂದಿತು. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇವಲ ಅಮಿತ್ ಶಾ ಭಾಗಿಯಾಗಿದ್ದಾರೆ ಎಂದು ಏಕನಾಥ್ ಶಿಂಧೆ ಜೈ ಹಿಂದ್, ಜೈ ಮಹಾರಾಷ್ಟ ನಂತರ ಜೈ ಗುಜರಾತ್ ಹೇಳಿದ್ದೆ ಸಾಕ್ಷಿ. ಈ ಒಂದು ವಿಷಯದಲ್ಲಿ ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುವ ಎಲ್ಲ ಪಕ್ಷಗಳದು ಪಕ್ಷಾತೀತ ನಿಲುವು ಇದ್ದಂತೆ ಕಾಣುತ್ತದೆ. ಇದು ಕೇವಲ ಮಹಾರಾಷ್ಟ್ರದ ಪ್ರಶ್ನೆ ಅಲ್ಲ, ನಾಳೆ ಕರ್ನಾಟಕದಲ್ಲೂ ತ್ರಿಭಾಷಾ ಸೂತ್ರ ಬರಬೇಕೆಂದು ಸರ್ಕಾರಗಳು ನಿರ್ಧಾರ ಮಾಡಬಹುದು. ರೈಲು ನಿಲ್ದಾಣಗಳಲ್ಲಿ ಕನ್ನಡಕ್ಕಿಂತ ಹಿಂದಿ ಫಲಕಗಳೇ ರಾರಾಜಿಸಿದ್ದನ್ನು ನಾವು ಕಂಡಿದ್ದೇವೆ, ಅಷ್ಟೇ ಏಕೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ..
ಇಲ್ಲಿ ವಿರೋಧ ಹಿಂದಿ ಭಾಷೆಯ ಬಗ್ಗೆ ಅಲ್ಲ, ಅದು ಯಾವುದೇ ಭಾಷೆ ಇರಲಿ ಅದು ಶ್ರೇಷ್ಠವೇ ಅದರಲ್ಲಿ ಎರಡು ಮಾತಿಲ್ಲ, ಆದರೆ ಹಿಂದಿ ಎಂಬುದು ರಾಷ್ಟ್ರ ಭಾಷೆಯಂತೆ ಎಂಬ ಧೋರಣೆ ಯಾವ ಕಾರಣಕ್ಕೂ ಸಲ್ಲದು ಏಕೆಂದರೆ ಹಿಂದಿ ಕೂಡ ಭಾರತದಲ್ಲಿ ಗುರುತರವಾಗಿ ಗುರುತಿಸಿಕೊಂಡು ನಿಗದಿತವಾದ ಇಪ್ಪತ್ತೆರಡು ಭಾಷೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಭಾಷೆ ಅಷ್ಟೇ. ಈಗಾಗಲೇ ಬಳಲಿ ಬೆಂಡಾಗಿರುವ ಶಿಕ್ಷಣ ವ್ಯವಸ್ಥೆಯ ಮೇಲೆ ಮತ್ತೊಂದು ಭಾಷೆಯನ್ನು ಹೇರಿ ಆ ಭಾಷೆಗೊಬ್ಬ ಶಿಕ್ಷಕರನ್ನು ನೇಮಿಸುವ ಸಾಹಸಕ್ಕೆ ಕೈ ಹಾಕುವುದು, ಅದಕ್ಕೊಂದಿಷ್ಟು ಖರ್ಚು-ವೆಚ್ಚ ಅಂದಾಜಿಸಿ ಹಣ ತೆಗೆದಿಟ್ಟು ಶಾಲೆಗಳನ್ನು ಆರ್ಥಿಕ ಒತ್ತಡಕ್ಕೆ ತಳ್ಳುವುದು ಸರಿ ಅಲ್ಲ, ಅದೆಷ್ಟೋ ಶಾಲೆಗಳಲ್ಲಿ ಶೌಚಾಲಯಗಳಿಲ್ಲ, ಕೆಲವು ಶಾಲೆಗಳಿಗೆ ಸೂರುಗಳೇ ಇಲ್ಲ , ಇನ್ನು ಕೆಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳೇ ಇಲ್ಲ ಇಂತಹ ಪರಿಸ್ಥಿತಿಯಲ್ಲಿ ಏನನ್ನು ಕಲಿಸಬೇಕು ಏನನ್ನು ಮಾಡಬೇಕೋ ಅದನ್ನೇ ಮಾಡಬೇಕೆ ಹೊರತು ತ್ರಿಭಾಷಾ, ಬಹುಭಾಷಾ ಎಂಬ ಹೇರಿಕೆಯತ್ತ ಹೋಗಬಾರದು. ಕೇಂದ್ರ ಸರಕಾರ ಭಾಷೆಯಂತಹ ವಿಷಯಕ್ಕೆ ಕೈ ಹಾಕದೆ ಅದನ್ನು ಸಂಪೂರ್ಣವಾಗಿ ಸ್ಟೇಟ್ ಸಬ್ಜೆಕ್ಟ್ ಎಂಬಂತೆ ಪರಿಗಣಿಸಿ ರಾಜ್ಯ ಸರ್ಕಾರಗಳ ಪರಿಧಿಗೆ ಬಿಟ್ಟು ಬಿಡಬೇಕು. ಇಲ್ಲದಿದ್ದಲ್ಲಿ ಮಹಾರಾಷ್ಟ್ರದ ಘಟನೆ ಬೇರೆ ರಾಜ್ಯಗಳಲ್ಲೂ ಪುನರಾವರ್ತನೆ ಆಗಬಹುದು, ಕರ್ನಾಟಕದಲ್ಲಿ ಸದ್ಯಕ್ಕೆ ಹಾಗಾಗುವ ಲಕ್ಷಣಗಳಿಲ್ಲ. ಕೆಲವರು ಇದೆಲ್ಲ ರಾಜಕೀಯದ ಗಿಮಿಕ್ ಎಂದರು ಅದೇನೇ ಇರಲಿ ಯಾರು ಏನೇ ರಾಜಕೀಯ ಗಿಮಿಕ್ ಮಾಡಿದರೂ ಮಹಾರಾಷ್ಟ್ರದಲ್ಲಿ ಗೆದ್ದದು ಮರಾಠಿ ಆದ್ದರಿಂದ ಮುಂದೊಂದು ದಿನ ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಉದ್ಭವಿಸಿದರೆ ಅಲ್ಲಿ ಮರಾಠಿ ಗೆದ್ದಂತೆ ಇಲ್ಲಿ ಕನ್ನಡ ಗೆಲ್ಲಬೇಕು.