Home ಸುದ್ದಿ ದೇಶ ಪಾಕ್ ಅಂಗಲಾಚಿದ ಮೇಲೆ ಕದನ ವಿರಾಮ: ಮೋದಿ

ಪಾಕ್ ಅಂಗಲಾಚಿದ ಮೇಲೆ ಕದನ ವಿರಾಮ: ಮೋದಿ

0

ನವದೆಹಲಿ: ಆಪರೇಷನ್ ಸಿಂದೂರ್‌ ಕಾರ್ಯಾಚಣೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಜತೆಗೆ ಪಾಕಿಸ್ತಾನ ತನಗೆ ತಾಕತ್ತು ಇಲ್ಲ ಎಂದು ಅಂಗಲಾಚಿದ ಮೇಲೆಯೇ ಕದನ ವಿರಾಮ ಘೋಷಿಸಲಾಗಿದೆ ಎಂದು ಅವರು ಲೋಕಸಭೆಗೆ ತಿಳಿಸಿದ್ದಾರೆ.

ಆಪರೇಷನ್ ಸಿಂದೂರ್‌ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ಕದನ ವಿರಾಮದಲ್ಲಿ ಯಾವುದೇ ರಾಷ್ಟ್ರದ ಮಧ್ಯಸ್ಥಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳಲು‌ ಭಾರತ ನಡೆಸಿದ ಆಪರೇಷನ್ ಸಿಂದೂರ್‌, ಕಾರ್ಯಾಚರಣೆ ಆರಂಭಿಸಿದ ಕೇವಲ 22 ನಿಮಿಷಗಳಲ್ಲಿ ಸೇಡು ತೀರಿಸಿಕೊಂಡಿದೆ. ಈ ಮೂಲಕ ಪಾಕಿಸ್ತಾನ ಏನಾದರೂ ಮಾಡಿದರೆ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಸ್ಪಷ್ಟ ಸಂದೇಶ ನೀಡಿದ್ದೇವೆ ಎಂದು ಹೇಳಿದರು.

ಮೇ 6-7 ರಂದು ಭಾರತ ನಿರ್ಧರಿಸಿದಂತೆಯೇ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್‌ 22ರ ನಮ್ಮ ಸೇನೆ 22 ನಿಮಿಷದಲ್ಲಿಯೇ ಉತ್ತರವನ್ನು ನೀಡಿದೆ ಎಂದು ಅವರು ಹೇಳಿದರು. ಈ ಹಿಂದೆಯೂ ಭಾರತ – ಪಾಕಿಸ್ತಾನದ ಮಧ್ಯೆ ಸಂಘರ್ಷ ನಡೆದಿದೆ. ಆದರೆ ಇದೇ ಮೊದಲ ಬಾರಿಗೆ ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸಲಾಗಿದೆ. ಇದಕ್ಕಾಗಿ ವಿಶೇಷ ಕಾರ್ಯತಂತ್ರಗಳನ್ನು ರೂಪಿಸಿ ಅಡಗುತಾಣಗಳನ್ನು ಗುರುತಿಸಿ ಪಾಕಿಸ್ತಾನದ ಮೂಲೆಯನ್ನೂ ಬಿಡದೆ ದಾಳಿ ನಡೆಸಲಾಗಿದೆ ಎಂದರು.

ನಮ್ಮ ಸೇನೆಯ ದಾಳಿ ಹೇಗಿತ್ತೆಂದರೆ, ಭಾರತ ಪರಮಾಣು ಬ್ಲ್ಯಾಕ್‌ಮೇಲಿಂಗ್‌ಗೆ ಎಂದಿಗೂ ಹೆದರುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ನೀಡಿದೆ. ನಮ್ಮ ಸೇನೆಯ ಹೊಡೆತಕ್ಕೆ ಪಾಕಿಸ್ತಾನದ ಕೆಲವು ವಾಯುನೆಲೆಗಳು ಮತ್ತು ಸ್ವತ್ತುಗಳು ಇಂದಿಗೂ ಕೂಡ ಐಸಿಯುನಲ್ಲಿವೆ ಎಂದರು.

ಭಾರತಕ್ಕೆ ವಿಶ್ವದಾದ್ಯಂತ ಭಾರೀ ಬೆಂಬಲ ದೊರೆತಿದೆ. ನಾನು ವಿದೇಶಾಂಗ ನೀತಿಯ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಮಾತನಾಡುತ್ತಿದ್ದೇನೆ, ವಿಶ್ವದ ಬೆಂಬಲ ನಮಗೆ ಸಿಕ್ಕಿತು, ಆದರೆ ದುರದೃಷ್ಟವೆಂದರೆ ಭಾರತದ ವೀರರ ಶೌರ್ಯಕ್ಕೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಬೆಂಬಲ ದೊರೆಯಲಿಲ್ಲ. ಅಮಾಯಕ ಜನರ ಹತ್ಯೆಯಲ್ಲೂ ಕೈ ನಾಯಕರು ರಾಜಕೀಯವನ್ನು ಮಾಡಿದರು ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಪಾಕಿಸ್ತಾನ ಮನವಿಯ ಬಳಿಕವೇ ಮೇ 10ರಂದು ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಗಿದೆ. ಯಾವುದೇ ದೇಶದ ನಾಯಕರು ಆಪರೇಷನ್ ಸಿಂದೂರ ನಿಲ್ಲಿಸುವಂತೆ ಭಾರತವನ್ನು ಕೇಳಿಲ್ಲ. ಆದರೆ, ಮೇ 9ರ ರಾತ್ರಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕರೆ ಮಾಡಿ ನನ್ನ ಜತೆ ಮಾತನಾಡಲು ಯತ್ನಿಸಿದರು. ಆದರೆ ನಾನು ಸಭೆಯಲ್ಲಿ ನಿರತನಾಗಿದ್ದೆ. ಬಳಿಕ ಮತ್ತೆ ಅವರು ಕರೆ ಮಾಡಿ ಪಾಕಿಸ್ತಾನ ಭಾರತದ ಮೇಲೆ ದೊಡ್ಡ ದಾಳಿ ಮಾಡುವ ಯೋಜನೆ ಮಾಡಿದೆ ಎಂದು ತಿಳಿಸಿದರು. ಪಾಕಿಸ್ತಾನ ಈ ಯೋಜನೆ ಹಾಕಿದ್ದೇ ಆದರೆ ಅದು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನಾನು ಹೇಳಿದ್ದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version