ಶಿವಕುಮಾರ್ ಮೆಣಸಿನಕಾಯಿ
ರಾಜ್ಯದ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಹೊಸದಾಗಿ ಯಾವುದೇ ಸಮುದಾಯವನ್ನು ಸೇರ್ಪಡೆ ಮಾಡುವ ಮೊದಲು ಹಾಲಿ ಎಸ್.ಟಿ.ಪಟ್ಟಿಯಲ್ಲಿರುವ ವಾಲ್ಮೀಕಿ ಸಮುದಾಯದ ಮೀಸಲಾತಿಯ ಹಾಲಿ ಪ್ರಮಾಣ ಶೇ.7ರಷ್ಟು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶೇ.15ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದರೆ ಮಾತ್ರ ಒಪ್ಪಿಗೆ ನೀಡಲು ರಾಜ್ಯದ ಎಸ್.ಟಿ.ಸಮುದಾಯ ರಾಜ್ಯ ಸರಕಾರಕ್ಕೆ ಷರತ್ತು ವಿಧಿಸಲು ಮುಂದಾಗಿದೆ.
ರಾಜ್ಯದ 4ನೇ ದೊಡ್ಡ ಸಮುದಾಯವಾಗಿರುವ, ಸುಮಾರು 43 ಲಕ್ಷ ಜನಸಂಖ್ಯೆ ಇರುವ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಯ 2ಎ ಪ್ರವರ್ಗಕ್ಕೆ ಸೇರಿದ ಕುರುಬ ಸಮುದಾಯ ಎಸ್.ಟಿ.ಪಟ್ಟಿಗೆ ಸೇರ್ಪಡೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಮುಂದಾಗಿರುವ ಮಧ್ಯೆಯೇ ವಾಲ್ಮೀಕಿ ಜನಾಂಗದ ಈ ನಡೆ ಕುತೂಹಲ ಕೆರಳಿಸಿದೆ.
ಸಮುದಾಯದ ಬೇಡಿಕೆ ಏನು?: ರಾಜ್ಯದಲ್ಲಿ ಹಾಲಿ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಶೇ.7ರಷ್ಟು ಇದೆ. ಇನ್ನು ಮುಂದೆ ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವುದಾದರೆ ಹಿಂದುಳಿದ ವರ್ಗಗಳ ಪ್ರವರ್ಗ 2ಎಗೆ ನೀಡಲಾಗಿರುವ ಶೇ.15ರಷ್ಟು ಮೀಸಲಾತಿಯಲ್ಲಿ ಶೇ.7ರಷ್ಟು ಕಡಿತಗೊಳಿಸಿ ಅದನ್ನು ಎಸ್.ಟಿ.ಮೀಸಲಾತಿಗೆ ಸೇರ್ಪಡೆ ಮಾಡಬೇಕು.
ಏಕೆಂದರೆ ಸುಮಾರು 43 ಲಕ್ಷದಷ್ಟಿರುವ ಕುರುಬ ಸಮುದಾಯ ಹಠಾತ್ ಎಸ್.ಟಿ.ಗೆ ಸೇರ್ಪಡೆಗೊಂಡರೆ ಹಾಲಿ ಎಸ್.ಟಿ.ಪಟ್ಟಿಯಲ್ಲಿರುವ ಸಮುದಾಯಗಳ ಅವಕಾಶಕ್ಕೆ ಹೊಡೆತ ಬೀಳಲಿದೆ. ಅಲ್ಲದೇ ರಾಜಕೀಯ ಪ್ರಾತಿನಿಧ್ಯವೂ ಕುಂಠಿತ ಆಗಲಿದೆ. ಹೀಗಾಗಿ ಎಸ್.ಟಿ.ಮೀಸಲಾತಿ ಶೇ.15ಕ್ಕೆ ಹೆಚ್ಚಳ ಮಾಡಬೇಕು ಎಂಬುದು ವಾಲ್ಮೀಕಿ ಸಮುದಾಯದ ಬೇಡಿಕೆ.
ಮೀಸಲು ಯಾರ ಸ್ವತ್ತೂ ಅಲ್ಲ: ಈ ಕುರಿತು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, “ಕುಲಶಾಸ್ತ್ರೀಯ ಅಧ್ಯಯನ, ಬುಡಕಟ್ಟು ಲಕ್ಷಣ ಆಧರಿಸಿ ಅರ್ಹ ಸಮುದಾಯಗಳನ್ನು ಎಸ್.ಟಿ.ಪಟ್ಟಿಗೆ ಸೇರ್ಪಡೆ ಮಾಡುವುದಕ್ಕೇನು ನಮ್ಮ ವಿರೋಧ ಇಲ್ಲ. ಆದರೆ ಯಾವ ಸಮುದಾಯ ಎಸ್.ಟಿ. ಪಟ್ಟಿಗೆ ಸೇರ್ಪಡೆ ಆಗುತ್ತದೋ ಅದು ಬೇರೆ ಪ್ರವರ್ಗಗಳಲ್ಲಿ ಪಡೆಯುತ್ತಿರುವ ಮೀಸಲಾತಿ ಪ್ರಮಾಣವನ್ನು ತಕ್ಷಣವೇ ಎಸ್.ಟಿ.ಪಟ್ಟಿಗೆ ವರ್ಗಾಯಿಸಬೇಕು. ಮೀಸಲಾತಿಯು ಯಾರೊಬ್ಬರ ಸ್ವತ್ತೂ ಅಲ್ಲ” ಎಂದು ಹೇಳಿದ್ದಾರೆ.
ಕುರುಬ ಸೇರಿದಂತೆ ಯಾವುದೇ ಸಮುದಾಯವನ್ನು ಯಾವ ಪಟ್ಟಿಗೆ ಸೇರಿಸಬೇಕೆಂಬುದು ಸರಕಾರಕ್ಕೆ ಬಿಟ್ಟ ವಿಚಾರ. ಆದರೆ ಹಾಲಿ ಎಸ್.ಟಿ.ಪಟ್ಟಿಯಲ್ಲಿರುವ ಸಮುದಾಯಗಳ ಹಿತಕಾಯಲು ಸರಕಾರ ಮೀಸಲಾತಿ ಪ್ರಮಾಣವನ್ನೂ ವಿಸ್ತರಿಸಬೇಕೆಂಬುದು ವಾಲ್ಮೀಕಿ ಸಮಾಜ ಷರತ್ತು ವಿಧಿಸಿದೆ. ಈ ಕುರಿತಂತೆ ಅಕ್ಟೋಬರ್ 7ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಮಠಾಧೀಶರು ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಹಕ್ಕೊತ್ತಾಯ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಮುಖ್ಯಮಂತ್ರಿಗಳಿಗೆ ಮುಜುಗರ ಆಗದಂತೆ ಸಮಾಜದ ಹಿತದೃಷ್ಟಿಯಿಂದ ಸೂಕ್ತ ಬೇಡಿಕೆ ಸಲ್ಲಿಸಲು ಸಮುದಾಯ ತೀರ್ಮಾನಿಸಿದೆ.
ಏಕೆ ಈ ಷರತ್ತು?: ಕರ್ನಾಟಕದಲ್ಲಿ ನಾಯಕ ಹಾಗೂ ಅದಕ್ಕೆ ಸಂಬಂಧಿಸಿದ ಹೆಸರಿನಲ್ಲಿರುವ ಸಮುದಾಯಗಳನ್ನು ಮತ್ತು ಕುರುಬ ಸಮಾಜವನ್ನು ರಾಜ್ಯದ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಲು ರಾಮಕೃಷ್ಣ ಹೆಗಡೆ ಸರಕಾರ 1984ರಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಕೇಂದ್ರ ಸರಕಾರ ನಾಯಕ ಮತ್ತು ಕುರುಬ ಎರಡೂ ಸಮುದಾಯಗಳ ಪ್ರಸ್ತಾವ ತಿರಸ್ಕರಿಸಿತ್ತು. ನಂತರ 1989ರಿಂದ ನಾಯಕ ಸಮಾಜದ ಮುಖಂಡರಾಗಿದ್ದ ಮಾಜಿ ಸಚಿವ ವೀರಣ್ಣ ಮತ್ತು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಸತತ ಪ್ರಯತ್ನ ನಡೆಸಿದ್ದರಿಂದ ಪಿ.ವಿ.ನರಸಿಂಹರಾವ್ ಪ್ರಧಾನಮಂತ್ರಿ ಆಗಿದ್ದಾಗ ಆಗ ಸಂಸದರಾಗಿದ್ದ ಎಚ್.ಡಿ.ದೇವೇಗೌಡ, ಬಸವರಾಜೇಶ್ವರಿ ಮತ್ತಿತರರ ಹೋರಾಟದ ಫಲವಾಗಿ ನಾಯಕ ಹೆಸರಿನ 5 ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಎಸ್‌ಟಿಗೆ ಸೇರ್ಪಡೆ ಮಾಡಲಾಯಿತು.
ಆಗ ಪ್ರದೇಶ ನಿರ್ಬಂಧ ಕಾಯ್ದೆಯನ್ನು ಸಡಿಲಗೊಳಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ನಾಯಕ ಮತ್ತು ಅದರ ಸಹವರ್ತಿ ಸಮುದಾಯಗಳು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಂಡವು. ಆದರೆ ಎಸ್‌ಟಿ ಮೀಸಲಾತಿ ಪ್ರಮಾಣ ಶೇ.3ರಷ್ಟೇ ಉಳಿಯಿತು. 2004ರಲ್ಲಿ ಮನಮೋಹನ್‌ಸಿಂಗ್ ಸರಕಾರದ ಎಸ್.ಟಿ.ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಿತು. ಆದರೆ ರಾಜ್ಯದಲ್ಲಿ 2022ರಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಅವಧಿವರೆಗೆ ಎಸ್.ಟಿ.ಮೀಸಲಾತಿ ಶೇ.3ರಷ್ಟೇ ಇತ್ತು. ಬೊಮ್ಮಾಯಿ ಸರಕಾರ ಎಸ್.ಸಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೂ, ಎಸ್.ಟಿ. ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೂ ಹೆಚ್ಚಿಸಿತು. ಜೊತೆಗೆ ಕುರುಬ ಸಮುದಾಯವನ್ನು ಎಸ್.ಟಿ.ಸೇರ್ಪಡೆ ಮಾಡಲು ಕೇಂದ್ರ ಸರಕಾರಕ್ಕೆ ಎರಡನೇ ಬಾರಿಗೆ ಶಿಫಾರಸು ಮಾಡಿತ್ತು.
ಇದೀಗ ಅದೇ ಪ್ರಸ್ತಾವ ಮುಂದಿಟ್ಟುಕೊಂಡು ಕೇಂದ್ರ ಸರಕಾರ ರಾಜ್ಯದಿಂದ ವಿವರಣೆ ಕೇಳಿದೆ. ಅದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಸರಕಾರ ಕುಲಶಾಸ್ತ್ರೀಯ ಅಧ್ಯಯನ ವರದಿ ಕಳಿಸಲು ಮುಂದಾಗಿದೆ. ಆದರೆ ಕುರುಬ ಸಮಾಜಕ್ಕೆ 2ಎನಲ್ಲಿರುವ ಶೇ.7ರಷ್ಟು ಮೀಸಲಾತಿಯನ್ನು ತಕ್ಷಣವೇ ಎಸ್.ಟಿ.ಪಟ್ಟಿಗೆ ವರ್ಗಾವಣೆ ಮಾಡುವ ಷರತ್ತನ್ನು ಹಾಲಿ ಎಸ್.ಟಿ.ಪಟ್ಟಿಯಲ್ಲಿರುವ ವಾಲ್ಮೀಕಿ ಸಮುದಾಯ ಮುಂದಿಟ್ಟಿದೆ. ಏಕೆಂದರೆ ಹಿಂದೆ 32 ವರ್ಷಗಳ ಕಾಲ ಎಸ್.ಟಿ.ಪಟ್ಟಿ ಹಿಗ್ಗಿದರೂ ಮೀಸಲಾತಿ ಹೆಚ್ಚಳ ಆಗಿರಲಿಲ್ಲ.