ಕರ್ನಾಟಕ ಮಾಜಿ ಮುಖ್ಯಮಂತ್ರಿ: ಪೋಕ್ಸೋ ಪ್ರಕರಣದಲ್ಲಿ ಬಂಧನ ಹಾಗೂ ವಿಚಾರಣೆಯ ಭೀತಿ ಎದುರಿಸುತ್ತಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಪರಿಹಾರ ನೀಡಿದೆ.
ಪ್ರಕರಣ ರದ್ದುಪಡಿಸುವಂತೆ ಕೋರಿ ಬಿಎಸ್‌ವೈ ಸಲ್ಲಿಸಿದ್ದ ಅರ್ಜಿಯನ್ನು ನವೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು (ಡಿ.02) ವಿಚಾರಣೆ ನಡೆಸಿದ ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಉಜ್ಜಲ್ ಭುವನ್ ಅವರನ್ನೊಳಗೊಂಡ ಪೀಠವು, ಕೆಳಹಂತದ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಮಧ್ಯಂತರ ತಡೆ (Stay) ನೀಡಿದೆ. ಅಲ್ಲದೆ, ಪ್ರತಿವಾದಿಗಳಾದ ಸಿಐಡಿ (CID) ಮತ್ತು ಸಂತ್ರಸ್ತ ಬಾಲಕಿಗೆ ನೋಟಿಸ್ ಜಾರಿ ಮಾಡಿ, ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ವಕೀಲರ ವಾದವೇನು?: ಯಡಿಯೂರಪ್ಪ ಪರ ಹಾಜರಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ, “ಇದು ಸಂಪೂರ್ಣ ರಾಜಕೀಯ ಪ್ರೇರಿತ ದ್ವೇಷದ ಪ್ರಕರಣ. ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆಗಿದ್ದವರು ಮತ್ತು 80ಕ್ಕೂ ಹೆಚ್ಚು ವಯಸ್ಸಿನ ಹಿರಿಯ ವ್ಯಕ್ತಿ (ವರದಿಯಂತೆ 88 ವರ್ಷ). ಹೈಕೋರ್ಟ್ ಈ ಅರ್ಜಿಯ ಅರ್ಹತೆಯನ್ನು ಸರಿಯಾಗಿ ಪರಿಗಣಿಸದೆ, ಹಿಂದಿನ ತೀರ್ಪುಗಳ ಕಾರಣ ನೀಡಿ ತಿರಸ್ಕರಿಸಿದೆ,” ಎಂದು ಪ್ರಬಲ ವಾದ ಮಂಡಿಸಿದರು. ಇದನ್ನು ಆಲಿಸಿದ ನ್ಯಾಯಪೀಠ, ಹೈಕೋರ್ಟ್‌ನಲ್ಲಿಯೇ ಪ್ರಕರಣವನ್ನು ಹೊಸದಾಗಿ ನಿರ್ಧರಿಸಲು ಏಕೆ ಸೂಚಿಸಬಾರದು ಎಂದು ಪ್ರಶ್ನಿಸಿ, ವಿಚಾರಣೆಗೆ ತಡೆ ನೀಡಿತು.
ಪ್ರಕರಣದ ಹಿನ್ನಲೆ ಏನು?: 2024ರ ಫೆಬ್ರವರಿಯಲ್ಲಿ ಸಹಾಯ ಕೇಳಿ ಬಂದಿದ್ದ ವೇಳೆ, ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ 17 ವರ್ಷದ ಬಾಲಕಿಗೆ ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಗಂಭೀರ ಆರೋಪ ಮಾಡಿದ್ದರು. ಮಾರ್ಚ್ ತಿಂಗಳಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಳಿಕ ತನಿಖೆ ಕೈಗೆತ್ತಿಕೊಂಡ ಸಿಐಡಿ ಪೊಲೀಸರು, ಬಾಲಕಿಯ ಹೇಳಿಕೆ ಆಧರಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಸದ್ಯ ಸುಪ್ರೀಂ ಕೋರ್ಟ್‌ನ ಈ ಆದೇಶದಿಂದಾಗಿ ಯಡಿಯೂರಪ್ಪ ಅವರಿಗೆ ಎದುರಾಗಿದ್ದ ಕಾನೂನು ಕಂಟಕ ತಾತ್ಕಾಲಿಕವಾಗಿ ದೂರವಾದಂತಾಗಿದೆ.
